ADVERTISEMENT

‘ಪ್ರಾಮಾಣಿಕ ಪ್ರಯತ್ನದಿಂದ ಗುರಿ ಸಾಧನೆ’

ಬೈಜೂಸ್‌ನಿಂದ ವಿದ್ಯಾರ್ಥಿಗಳಿಗೆ ಟ್ಯಾಬ್ ಹಾಗೂ ಅಧ್ಯಯನ ಸಾಮಗ್ರಿ ವಿತರಣೆ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2022, 14:00 IST
Last Updated 14 ಸೆಪ್ಟೆಂಬರ್ 2022, 14:00 IST
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಬೈಜೂಸ್‌ ಕರಿಯರ್ ಪ್ಲಸ್ ಸಂಸ್ಥೆಯಿಂದ ಜೆಇಇ/ನೀಟ್ ಕೋಚಿಂಗ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರು ಸಂಸ್ಥೆ ಪರವಾಗಿ ಟ್ಯಾಬ್‌ ವಿತರಿಸಿದರು.
ರಾಯಚೂರು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಬೈಜೂಸ್‌ ಕರಿಯರ್ ಪ್ಲಸ್ ಸಂಸ್ಥೆಯಿಂದ ಜೆಇಇ/ನೀಟ್ ಕೋಚಿಂಗ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಎಲ್‌.ಚಂದ್ರಶೇಖರ್‌ ನಾಯಕ ಅವರು ಸಂಸ್ಥೆ ಪರವಾಗಿ ಟ್ಯಾಬ್‌ ವಿತರಿಸಿದರು.   

ರಾಯಚೂರು: ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಸ್ಪಷ್ಟವಾದ ಗುರಿ ಹೊಂದಿರಬೇಕು. ಪ್ರಾಮಾಣಿಕ ಪ್ರಯತ್ನದಿಂದ ಗುರಿ ಮುಟ್ಟಲು ಸಾಧ್ಯ. ಅದಕ್ಕೆ ಬೇಕಾಗುವ ಎಲ್ಲಾ ಸಂಪನ್ಮೂಲಗಳನ್ನು ಕ್ರೊಢೀಕರಿಸಬೇಕು ಜಿಲ್ಲಾಧಿಕಾರಿ ಎಲ್.ಚಂದ್ರಶೇಖರ ನಾಯಕ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಹತ್ವಾಕಾಂಕ್ಷೆಯ ಜಿಲ್ಲಾ ಕಾರ್ಯಕ್ರಮದ ಅಡಿಯಲ್ಲಿ ಬೈಜೂಸ್‌ ಕರಿಯರ್ ಪ್ಲಸ್ ಸಂಸ್ಥೆಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಜೆಇಇ/ನೀಟ್ ಕೋಚಿಂಗ್ ಹಾಗೂ ಟ್ಯಾಬ್ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಸತತ ಪ್ರಯತ್ನ, ಶಿಸ್ತುಬದ್ಧವಾದ ಯೋಜನಾ ಕ್ರಮ ರೂಢಿಸಿಕೊಂಡರೆ ಉನ್ನತ ಸಾಧನೆ ಮಾಡಲು ಸಾಧ್ಯ. ವಿದ್ಯಾರ್ಥಿ ಜೀವನದಲ್ಲೇ ಭವಿಷ್ಯದ ಬಗ್ಗೆ ಪರಿಕಲ್ಪನೆ ಹೊಂದಬೇಕು. ಪ್ರತಿಯೊಬ್ಬ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕೆಂಬ ಛಲ ಹಾಗೂ ಗುರಿ ಹೊಂದಬೇಕು. ಆತ್ಮವಿಶ್ವಾಸ, ಪ್ರಾಮಾಣಿಕವಾದ ಪ್ರಯತ್ನದಿಂದ ಉನ್ನತ ಸಾಧನೆ ಮಾಡಲು ಸಾಧ್ಯ ಎಂದರು.

ADVERTISEMENT

ಕೇಂದ್ರ ಸರ್ಕಾರದ ನೀತಿ ಆಯೋಗದ ಮಹತ್ವಾಕಾಂಕ್ಷಿ ಜಿಲ್ಲೆ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಬೈಜೂಸ್ ಸಂಸ್ಥೆಯ ವತಿಯಿಂದ ನೀಟ್ ಮತ್ತು ಜೆಇ ತರಬೇತಿಯನ್ನು ಎರಡು ವರ್ಷಗಳ ಕಾಲ ಉಚಿತವಾಗಿ ನೀಡಲಾಗುತ್ತಿದೆ. ಇಡೀ ದೇಶದಲ್ಲಿಯೇ ಕೇವಲ 65 ಜಿಲ್ಲೆಗಳನ್ನು ಮಾತ್ರ ಆಯ್ಕೆ ಮಾಡಲಾಗಿದ್ದು, ಇವುಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ರಾಯಚೂರು ಜಿಲ್ಲೆಯು ಏಕೈಕ ಜಿಲ್ಲೆಯಾಗಿ ಆಯ್ಕೆಯಾಗಿರುವುದು ಸಂತೋಷದ ವಿಷಯವಾಗಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಮಾತನಾಡಿ, ಮಹಾಭಾರತದಲ್ಲಿ ಅರ್ಜುನನಿಗೆ ಹಕ್ಕಿಯ ಕಣ್ಣಲ್ಲದೇ ಬೇರೆನೂ ಕಾಣದಿರುವುದಕ್ಕೆ ಕಾರಣ ಏಕಾಗ್ರತೆ. ಅಂತಹ ಏಕಾಗ್ರತೆಯನ್ನು ಪ್ರತಿಯೊಬ್ಬ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಇಡೀ ರಾಜ್ಯದಲ್ಲಿ ರಾಯಚೂರು ಜಿಲ್ಲೆ ಮಾತ್ರ ಆಯ್ಕೆಯಾಗಿದ್ದು ಇದರ ಸದುಪಯೋಗ ಜಿಲ್ಲೆಯ ಅರ್ಹ ವಿದ್ಯಾರ್ಥಿಗಳಿಗೆ ತಲಾ 1.20 ಲಕ್ಷ ವೆಚ್ಚ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಗುರಿ ಮುಖ್ಯವಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದು ಗುರಿಮುಟ್ಟುವ ನಿಟ್ಟಿನಲ್ಲಿ ಪ್ರವೃತ್ತರಾಗಿ ಜಿಲ್ಲೆ ಹಾಗೂ ರಾಜ್ಯ ದೇಶಕ್ಕೆ ಕೀರ್ತಿಯನ್ನು ತರಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ್ ಕುರೇರ ಮಾತನಾಡಿ, ವಿದ್ಯಾರ್ಥಿಗಳು ದೃಢತೆ, ನಿಷ್ಠೆ, ಏಕಾಗ್ರತೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಉನ್ನತ ಸ್ಥಾನ ಹೊಂದಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೋ ಮಾದರಿ ಜೀವನ ನಡೆಸುವ ನಿಟ್ಟಿನಲ್ಲಿ ಉನ್ನತ ಗುರಿ ಇಟ್ಟುಕೊಂಡು ಅವುಗಳತ್ತ ಕಾರ್ಯೊನ್ಮುಖರಾಗಬೇಕು ಎಂದರು.

ಜಿಲ್ಲೆಯ ವಿವಿಧ ಕಾಲೇಜುಗಳ 40 ವಿದ್ಯಾರ್ಥಿಗಳಿಗೆ ಟ್ಯಾಬ್ ಹಾಗೂ ಅಧ್ಯಯನ ಸಾಮಗ್ರಿಗಳನ್ನು ವಿತರಿಸಲಾಯಿತು.

ಬೈಜೂಸ್ ಕೆರಿಯರ್ ಪ್ಲಸ್ ಸಂಸ್ಥೆಯ ಮುಖ್ಯಸ್ಥ ಶ್ರೀಕಾಂತ್, ಸಾರ್ವಜನಿಕ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಸೇರಿದಂತೆ ಅರ್ಹ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.