ರಾಯಚೂರು: ತಾಲ್ಲೂಕಿನ ಕುರ್ವಕಲಾ ಬಳಿ ಕೃಷ್ಣಾನದಿಯಲ್ಲಿ ನಾಪತ್ತೆಯಾದ ನಾಲ್ಕು ಜನರಗಾಗಿ ಶೋಧ ಕಾರ್ಯ ಮಂಗಳವಾರ ಬೆಳಿಗ್ಗೆಯಿಂದ ಮುಂದುವರಿದಿದ್ದು ಇನ್ನೂ ಸುಳಿವು ಸಿಕ್ಕಿಲ್ಲ. ಇದೀಗ ರಾಯಚೂರು ತಹಶೀಲ್ದಾರ್ ಡಾ. ಹಂಪಣ್ಣ ಕೂಡಾ ಅಗ್ನಿಶಾಮಕ ಸಿಬ್ಬಂದಿಯೊಂದಿಗೆ ಬೋಟ್ ಮೂಲಕ ನದಿಯೊಳಗೆ ತೆರಳಿ ಹುಡುಕಾಟ ಮಾಡುತ್ತಿದ್ದಾರೆ.
ಎನ್‌ಡಿಆರ್‌ಎಫ್ ತಂಡಗಳು ಕೂಡಾ ಪ್ರತ್ಯೇಕ ಬೋಟ್ ಗಳಲ್ಲಿ ಹುಡುಕಾಟ ಮಾಡುತ್ತಿದ್ದಾರೆ. ತೆಲಂಗಾಣ ಕರ್ನಾಟಕ ಗಡಿಭಾಗ ಜುರಾಲಾದಲ್ಲಿ 'ಪ್ರಿಯದರ್ಶಿನಿ' ಅಣೆಕಟ್ಟು ಇದೆ. ಅದರ ಹಿನ್ನೀರಿನಲ್ಲಿರುವ ಕುರ್ವಕಲಾ ನಡುಗಡ್ಡೆ ಗ್ರಾಮದಿಂದ ತೆಪ್ಪದಲ್ಲಿ 13 ಜನರು ತೆಲಂಗಾಣದ ಪಂಚಪಾಡುವಿಗೆ ಸಂತೆಗಾಗಿ ಹೋಗಿ ಮರಳುವಾಗ ಸೋಮವಾರ ಸಂಜೆ ಅದು ಮುಳುಗಡೆ ಆಗಿತ್ತು. 9 ಜನರು ಈಜಿ ಪಾರಾಗಿದ್ದಾರೆ. ಬಾಲಕಿ ಸೇರಿ ನಾಲ್ಕು ಜನರು ನೀರಿನಲ್ಲಿ ಕಣ್ಮರೆ ಆಗಿದ್ದಾರೆ.
ನದಿಯಲ್ಲಿ 3 ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದ್ದು, ಪ್ರವಾಹ ಹೆಚ್ಚಳವಾಗುತ್ತಲೇ ಇದೆ. ಅಣೆಯಲ್ಲಿ ಹಿನ್ನೀರು ವಿಶಾಲವಾಗಿ ಹರಡಿಕೊಂಡಿದೆ. ಹೀಗಾಗಿ ನಾಪತ್ತೆ ಆದವರನ್ನು ಪತ್ತೆ ಮಾಡುವುದು ಸವಾಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.