ಕವಿತಾಳ: ʼರಕ್ತಹೀನತೆ ಮತ್ತು ಜಂತು ಹುಳ ಬಾಧೆ ಮಕ್ಕಳಲ್ಲಿ ಕಂಡು ಬರುವ ಸಾಮಾನ್ಯ ಕಾಯಿಲೆಗಳಾಗಿದ್ದು ಪಾಲಕರು ಕಾಳಜಿ ವಹಿಸಿ ಸೂಕ್ತ ಚಿಕಿತ್ಸೆ ಕೊಡಿಸಬೇಕುʼ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಹೇಳಿದರು.
ಪಟ್ಟಣದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಮಕ್ಕಳ ಆರೋಗ್ಯ ತಪಾಸಣೆ ಶಿಬಿರದಲ್ಲಿ ಮಾತನಾಡಿದ ಅವರು ‘ರಕ್ತಹೀನತೆಯಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗುತ್ತಿದೆ. ಮಕ್ಕಳಲ್ಲಿನ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳನ್ನು ಗುರುತಿಸಿ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಲು ಪಾಲಕರು ಮುಂದಾಗಬೇಕು, ಆಲ್ಬೆಂಡಜೋಲ್ ಮಾತ್ರೆ ಸೇವಿಸುವ ಮೂಲಕ ಜಂತು ಹುಳ ನಿಯಂತ್ರಣ ಸಾಧ್ಯ’ ಎಂದರು.
ರಾಷ್ಟ್ರೀಯ ಬಾಲಸ್ವಾಸ್ಥ್ಯ ಯೋಜನೆಯ ವೈದ್ಯಾಧಿಕಾರಿ ಡಾ.ಶ್ರೀಧರ ಇಲ್ಲೂರು ಮಾತನಾಡಿ ‘ಆ 14ರವರೆಗೆ ಕುಷ್ಟರೋಗ ಸಮೀಕ್ಷೆ ನಡೆಯುತ್ತಿದೆ, ಚರ್ಮದ ಮೇಲೆ ತಿಳಿ, ಬಿಳಿ, ತಾಮ್ರ ವರ್ಣದ ಸ್ಪರ್ಷಜ್ಞಾನವಿಲ್ಲದ ಮಚ್ಚೆ ಕಂಡು ಬಂದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ರೋಗ ಖಚಿತಪಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು’ ಎಂದು ಸಲಹೆ ನೀಡಿದರು.
ಆಪ್ತ ಸಮಾಲೋಚಕಿ ಅಕ್ಕಮಹಾದೇವಿ, ಶಿಕ್ಷಕ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.