ADVERTISEMENT

ವಿವೇಚನೆ ಬಳಸಿ ತಾಲ್ಲೂಕಿಗೆ ಹೊಸ ಅಧ್ಯಕ್ಷರ ನೇಮಕ: ರಂಗಣ್ಣ ಪಾಟೀಲ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2025, 6:55 IST
Last Updated 17 ನವೆಂಬರ್ 2025, 6:55 IST
ರಂಗಣ್ಣ ಪಾಟೀಲ ಅಳ್ಳುಂಡಿ
ರಂಗಣ್ಣ ಪಾಟೀಲ ಅಳ್ಳುಂಡಿ   

ರಾಯಚೂರು: ‘ಕಸಾಪ ಕೇಂದ್ರ ಪರಿಷತ್ತಿನ ಅಧ್ಯಕ್ಷರೊಂದಿಗೆ ಆರು ತಿಂಗಳವರೆಗೆ ಪತ್ರ ವ್ಯವಹಾರ ಮಾಡಿದರೂ ತಾಲ್ಲೂಕು ಅಧ್ಯಕ್ಷರ ಪಟ್ಟಿಗೆ ಅನುಮೋದನೆ ನೀಡಲಿಲ್ಲ. ಅವರಿಗೆ ಏಳು ದಿನ ಕಾಲಾವಕಾಶ ನೀಡಿ ನನ್ನ ವಿವೇಚನೆ ಬಳಸಿ ಹೊಸ ನೇಮಕಾತಿ ಮಾಡಿದ್ದೇನೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ರಂಗಣ್ಣ ಪಾಟೀಲ ಅಳ್ಳುಂಡಿ ಸಮರ್ಥಿಸಿಕೊಂಡಿದ್ದಾರೆ.

‘ಈಗ ಐದು ವರ್ಷಗಳ ಸುದೀರ್ಘ ಅವಧಿ ಇರುವುದರಿಂದ ತಾಲ್ಲೂಕು ಅಧ್ಯಕ್ಷರ ಬದಲಾವಣೆ ಮಾಡಲಾಗಿದೆ. 2025ರ ಮಾರ್ಚ್‌ನಿಂದ ಸೆಪ್ಟೆಂಬರ್‌ವರೆಗೆ ಪತ್ರ ವ್ಯವಹಾರ ಮಾಡಿದರೂ ಕೇಂದ್ರ ಪರಿಷತ್ತಿನ ಅಧ್ಯಕ್ಷರು ಅನುಮೋದಿಸಲಿಲ್ಲ. ಅವರಿಗೆ ಏಳು ದಿನ ಕಾಲಾವಕಾಶ ನೀಡಿ ನನ್ನ ವಿವೇಚನೆ ಬಳಸಿ ನೇಮಕ ಮಾಡಿದ್ದೇನೆ’ ಎಂದು ಹೇಳಿದ್ದಾರೆ.

‘ನನ್ನ ವಿರುದ್ಧ ನಿಷ್ಕ್ರಿಯ ಎಂದು ಎರಡು ತಿಂಗಳಿಂದ ನಿರಂತರವಾಗಿ ಆರೋಪ ಮಾಡುತ್ತಿರುವವರಿಗೆ ಮೂರು ವರ್ಷಗಳಲ್ಲಿ ಏನೇನು ಚಟುವಟಿಕೆ ನಡೆದಿದೆ ಎನ್ನುವ ಬಗ್ಗೆ ದಾಖಲೆ ಬಹಿರಂಗ ಪಡಿಸಲು ಸಿದ್ಧನಿದ್ದೇನೆ’ ಎಂದು ಉತ್ತರಿಸಿದ್ದಾರೆ.

ADVERTISEMENT

‘ನನ್ನ ಅವಧಿಯಲ್ಲಿ ಒಂದು ಜಿಲ್ಲಾ ಸಮ್ಮೇಳನ, ರಾಯಚೂರು, ಮಾನ್ವಿ ಸೇರಿ ನಾಲ್ಕು ತಾಲ್ಲೂಕು ಸಮ್ಮೇಳನಗಳು ನಡೆದಿವೆ. 2023ರ ಡಿಸೆಂಬರ್‌ನಲ್ಲಿ ಜಿಲ್ಲೆಯ ತತ್ವಪದಕಾರರ ಚರಿತ್ರೆ ಕೃತಿ ಪ್ರಕಟಿಸಿ ಬಿಡುಗಡೆಗೊಳಿಸಲಾಗಿದೆ. ಡಿಸೆಂಬರ್ 2024ರಲ್ಲಿ ಜಿಲ್ಲೆಯ ಹಿರಿಯ ಸಾಹಿತಿ ಶಾಂತರಸ ಅವರ ಶತಮಾನೋತ್ಸವ, ಸಿಂಧನೂರು ತಾಲ್ಲೂಕಿನಲ್ಲಿ 56 ದತ್ತಿ ಕಾರ್ಯಕ್ರಮ, ದೇವದುರ್ಗ ಮತ್ತು ರಾಯಚೂರು ತಾಲ್ಲೂಕಿನಲ್ಲಿಯೂ ಕಾರ್ಯಕ್ರಮಗಳು ನಡೆದಿವೆ’ ಎಂದು ತಿಳಿಸಿದ್ದಾರೆ.

‘ರಾಯಚೂರನಲ್ಲಿ ಕಥಾ ಕಮ್ಮಟ, ಮಾನ್ವಿಯಲ್ಲಿ ಕಾವ್ಯ ಕಮ್ಮಟ ಹಾಗೂ ಅನೇಕ ಸಾಹಿತಿಗಳ ಪುಸ್ತಕ ಬಿಡುಗಡೆ ಸಮಾರಂಭಗಳು ನಿರಂತರವಾಗಿ ನಡೆದಿವೆ. ಯಾವುದೇ ಕಾರ್ಯಚಟುವಟಿಕೆಗಳು ನಿಂತಿಲ್ಲ. ಇಷ್ಟೆಲ್ಲ ಕಾರ್ಯಕ್ರಮಗಳು ನಡೆದಿದ್ದರೂ ಜಿಲ್ಲಾಧ್ಯಕ್ಷ ನಿಷ್ಕ್ರಿಯ ಎಂದು ಯಾವ ಆಯಾಮದಲ್ಲಿ ಹೇಳುತ್ತಿದ್ದಾರೆ ಎಂದು ಗೊತ್ತಿಲ್ಲ’ ಎಂದು ಹೇಳಿದ್ದಾರೆ.

‘ಹಣ ದುರುಪಯೋಗದ ಆರೋಪ ನಿರಾಧಾರ’

‘ಕನ್ನಡ ಭವನದ ನಿರ್ವಹಣೆ ಹಣ ದುರುಪಯೋಗದ ಆರೋಪ ನಿರಾಧರವಾಗಿದೆ. ಕೇಂದ್ರ ಪರಿಷತ್ತಿನಿಂದ ನೀಡಿರುವ ಅನುದಾನವನ್ನು ನಿಯಮಾನುಸಾರ ಬಳಕೆ ಮಾಡಿ ಪ್ರತಿ ವರ್ಷವು ಲೆಕ್ಕ ಪರಿಶೋಧಕರಿಂದ ಪರಿಶೀಲನೆ ಮಾಡಿ ಕೇಂದ್ರ ಪರಿಷತ್ತಿಗೆ ವರದಿಯನ್ನು ಸಲ್ಲಿಸಲಾಗುತ್ತಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ‘ನನ್ನ ಅವಧಿಯಲ್ಲಿ ಕನ್ನಡ ಭವನದ ಮೇಲ್ಮಹಡಿಯ ಕಾಮಗಾರಿಗಾಗಿ ರಾಯಚೂರು ನಗರದ ಶಾಸಕ ಎಸ್. ಶಿವರಾಜ ಪಾಟೀಲ ಅವರ ₹30 ಲಕ್ಷ ವಿಶೇಷ ಅನುದಾನದಡಿ ಕಾಮಗಾರಿ ಮಾಡಲಾಗುತ್ತಿದೆ. ಮಾಜಿ ಸಂಸದ ರಾಜಾ ಅಮರೇಶ್ವರ ನಾಯಕ ಕೊಟ್ಟಿದ್ದ ₹ 10 ಲಕ್ಷ ಅನುದಾನದಲ್ಲಿ ಕನ್ನಡ ಭವನದ ನವೀಕರಣ ಹಾಗೂ ಕನ್ನಡ ಭವನದ ಸುತ್ತ ಆವರಣ ಗೋಡೆ ನಿರ್ಮಿಸಲಾಗಿದೆ’ ಎಂದು ಹೇಳಿದ್ದಾರೆ.

‘ಮಹಿಳೆಯರನ್ನು ಕಡೆಗಣಿಸಿಲ್ಲ’

‘ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನ ರಾಜ್ಯೋತ್ಸವ ಅನೇಕ ಸಭೆ–ಸಮಾರಂಭ ಸಮ್ಮೇಳನಗಳಲ್ಲಿ ಮಹಿಳೆಯರಿಗೆ ವೇದಿಕೆ ಕಲ್ಪಿಸಿ ಗೌರವಿಸಲಾಗಿದೆ. ಮಸ್ಕಿ ತಾಲ್ಲೂಕಿಗೆ ಮಹಿಳೆಯರನ್ನೇ ನೇಮಕ ಮಾಡಲಾಗಿದೆ. ಜಿಲ್ಲಾ ಘಟಕದಲ್ಲೂ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದಾರೆ’ ಎಂದು ತಿಳಿಸಿದ್ದಾರೆ. ‘ನಾನು ಅಧ್ಯಕ್ಷನಾದ ಮೇಲೆ ತಲಾ ₹ 25 ಸಾವಿರದಂತೆ 10 ದತ್ತಿಗಳನ್ನು ಸಂಗ್ರಹಿಸಿ ಕೇಂದ್ರ ಪರಿಷತ್ತಿಗೆ ಕಳುಹಿಸಲಾಗಿದೆ. ಅದರಲ್ಲೂ ದೇವದುರ್ಗ ಒಂದರಲ್ಲಿಯೇ 8 ಜನ ದತ್ತಿ ದಾನಿಗಳು ದತ್ತಿ ನೀಡಿದ್ದಾರೆ. ನನ್ನ ಅನಾರೋಗ್ಯದಲ್ಲಿಯೂ 40 ವರ್ಷಗಳಿಂದ ಕನ್ನಡದ ಸೇವೆ ಮಾಡಿದ್ದೇನೆ’ ಎಂದು ಹೇಳಿದ್ದಾರೆ.