ADVERTISEMENT

‘ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಿ’

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 11:47 IST
Last Updated 5 ಸೆಪ್ಟೆಂಬರ್ 2021, 11:47 IST
ಲಿಂಗಸುಗೂರಲ್ಲಿ ಭಾನುವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರ ಉದ್ಘಾಟಿಸಿದರು
ಲಿಂಗಸುಗೂರಲ್ಲಿ ಭಾನುವಾರ ಶಿಕ್ಷಣ ಇಲಾಖೆ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯನ್ನು ಉಪ ವಿಭಾಗಾಧಿಕಾರಿ ರಾಹುಲ್ ಸಂಕನೂರ ಉದ್ಘಾಟಿಸಿದರು   

ಲಿಂಗಸುಗೂರು: ‘ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷಕರಿಗೆ ಉನ್ನತ ಸ್ಥಾನವಿದೆ. ಸಮಾಜ ಬದಲಾದಂತೆ ಶಿಕ್ಷಕ ಸಮೂಹ ಕೂಡ ತಂತ್ರಜ್ಞಾನ ಮೈಗೂಡಿಸಿಕೊಂಡು ಸುಂದರ ಹಾಗೂ ಆರೋಗ್ಯಕರ ಸಮಾಜ ನಿರ್ಮಾಣದ ಶಿಲ್ಪಿಗಳಾಗಬೇಕು’ ಎಂದು ಉಪ ವಿಭಾಗಾಧಿಕಾರಿ ರಾಹುಲ್‍ ಸಂಕನೂರ ಹೇಳಿದರು.

ಭಾನುವಾರ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ‘ಶಿಕ್ಷಕರೆಂದರೆ ಪಠ್ಯಬೋಧನೆ ಕೆಲಸವಲ್ಲ. ಮಕ್ಕಳ ಸರ್ವಾಂಗೀಣ ಬೆಳವಣಿಗೆಗೆ ಶ್ರಮಿಸಬೇಕು. ತತ್ವಜ್ಞಾನಿ, ಶಿಕ್ಷಕ, ಅದ್ವೈತ ಸಿದ್ಧಾಂತದ ಪ್ರತಿಪಾದಕರಾಗಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶ ಬದುಕು ನಮಗೆಲ್ಲ ಮಾರ್ಗದರ್ಶನವಾಗಿದೆ. ಅಂತೆಯೆ ಶಿಕ್ಷಕ ಸಮೂಹ ಗುಣಮಟ್ಟದ ಶಿಕ್ಷಣ ಬೋಧನೆ ಜೊತೆಗೆ ಸಮಾಜ ನೀಡಿದ ಗುರುವಿನ ಸ್ಥಾನಮಾನ ಉಳಿಸಿಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.

ತಹಶೀಲ್ದಾರ್ ಚಾಮರಾಜ್ ಪಾಟೀಲ್‍, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಲಕ್ಷ್ಮಿದೇವಿ ಮಾತನಾಡಿ, ‘ಶಿಕ್ಷಕ ವೃತ್ತಿ ಪವಿತ್ರವಾದುದು. ನೈತಿಕ ಮೌಲ್ಯಗಳು, ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಮಕ್ಕಳ ಸುಂದರ ಬದುಕು ರೂಪಿಸುವ ಹೊಣೆ ನಿಮ್ಮಗಳ ಮೇಲಿದೆ. ಮಕ್ಕಳು ಕೂಡ ಗುರುವಿನ ಗುಲಾಮರಾದಾಗ ಮಾತ್ರ ಉತ್ತಮ ಶಿಕ್ಷಣ ಪಡೆಯಲು ಸಾಧ್ಯ. ಸಮಾಜಿಕ ರಂಗದಲ್ಲಿ ಶಿಕ್ಷಕ ಸಮೂಹ ನೀಡುತ್ತ ಬಂದಿರುವ ಕೊಡುಗೆ ಅಪಾರ’ ಎಂದು ಶಿಕ್ಷಕ ವೃತ್ತಿ ಘನತೆಯನ್ನು ಶ್ಲಾಘಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಹುಂಬಣ್ಣ ರಾಠೋಡ. ಕ್ಷೇತ್ರ ಸಮನ್ವಯಾಧಿಕಾರಿ ಹನುಮಂತಪ್ಪ ಕುಳಗೇರಿ, ಕ್ಷೇತ್ರ ದೈಹಿಕ ಶಿಕ್ಷಣಾಧಿಕಾರಿ ಚೆನ್ನಬಸವ ಮೇಟಿ, ಆದರ್ಶ ವಿದ್ಯಾಲಯದ ಪ್ರಾಚಾರ್ಯ ಸಾಬಣ್ಣ ವಗ್ಗರ, ಅಕ್ಷರ ದಾಸೋಹದ ಸಹಾಯ ನಿರ್ದೇಶಕ ಚಂದ್ರಶೇಖರ ಕುಂಬಾರ ಸೇರಿದಂತೆ ಬಿಆರ್‍ಪಿ, ಸಿಆರ್‍ಪಿ ಸೇರಿದಂತೆ ಶಿಕ್ಷಕರ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.