
ಸಿಂಧನೂರು: ‘ಮಕ್ಕಳನ್ನು ಮನೆ ಮತ್ತು ಶಾಲೆಯ ನಾಲ್ಕು ಗೋಡೆಗಳಿಗೆ ಸೀಮಿತಗೊಳಿಸದೆ ಓದಿನ ಜತೆಗೆ ಪಠ್ಯೇತರ ಚಟುವಟಿಕೆಗೆ ಆದ್ಯತೆ ನೀಡಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವಂತೆ ಪೋಷಕರು ಪ್ರೇರೇಪಿಸಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಸಲಿಂಗಪ್ಪ ಹೇಳಿದರು.
ತಾಲ್ಲೂಕಿನ ಗೋನವಾರ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಯರಮರಸ್, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ, ರಾಗಲಪರ್ವಿಯ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಗುರುವಾರ ನಡೆದ ರಾಗಲಪರ್ವಿ ವಲಯಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಉದ್ಘಾಟಿಸಿ ಮಾತನಾಡಿದರು.
‘ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಎಲ್ಲ ಮಕ್ಕಳು ಸ್ವಯಂ ಪ್ರೇರಣೆಯಿಂದ ಭಾಗವಹಿಸುವಂತಾಗಬೇಕು. ಆದರೆ, ಬಹುತೇಕರು ಕೀಳರಿಮೆಯಿಂದ ಸದಾ ಹಿಂದುಳಿದಿರುತ್ತಾರೆ. ಅಂಥವರನ್ನು ಗುರುತಿಸಿ ಸೂಕ್ತ ರೀತಿಯಲ್ಲಿ ಪ್ರೋತ್ಸಾಹಿಸಿದಾಗ ಮಾತ್ರ ಹೊಸ ಪ್ರತಿಭಾವಂತರು ಬೆಳಕಿಗೆ ಬರಲು ಸಾಧ್ಯವಾಗುತ್ತದೆ’ ಎಂದು ತಿಳಿಸಿದರು.
ಶಾಲೆಯ ಮುಖ್ಯಶಿಕ್ಷಕ ಎಂ.ಸಿ.ದಿನೇಶಕುಮಾರ ಮಾತನಾಡಿದರು.
ಕ್ಲಸ್ಟರ್ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳು ಕಂಠಪಾಠ, ಧಾರ್ಮಿಕ ಪಠಣ, ಲಘು ಸಂಗೀತ, ಕಥೆ ಹೇಳುವಿಕೆ, ಅಭಿನಯ ಗೀತೆ, ಭಕ್ತಿ ಗೀತೆ, ಕವ್ವಾಲಿ, ಛದ್ಮವೇಷ, ಆಶುಭಾಷಣ, ದೇಶಭಕ್ತಿ ಗೀತೆ, ಜಾನಪದ ನೃತ್ಯ, ಕೋಲಾಟ, ರಸಪ್ರಶ್ನೆ, ಭಾಷಣ, ಮಿಮಿಕ್ರಿ, ಭರತನಾಟ್ಯ, ಚರ್ಚಾ ಸ್ಪರ್ಧೆ, ನೃತ್ಯ, ಸಂಗೀತ, ರಂಗೋಲಿ, ದೃಶ್ಯ ಕಲೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ವಿಜೇತರನ್ನು ತಾಲ್ಲೂಕುಮಟ್ಟಕ್ಕೆ ಆಯ್ಕೆ ಮಾಡಲಾಯಿತು.
ಗ್ರಾಮದ ಮುಖಂಡರಾದ ಉರುಕುಂದಪ್ಪ ಮಳ್ಳಿ, ವೆಂಕಟೇಶ ನಾಯಕ, ವೀರೇಶ ಕವಿತಾಳ, ಬಸವರಾಜ ಮಳ್ಳಿ, ನಾಗಯ್ಯ ಬುಳ್ಳಿ, ಮಲ್ಲಪ್ಪಗೌಡ, ಮಲ್ಲಯ್ಯ ಮ್ಯಾಕಲ್, ಹನಮಂತರಾಯ ಕರಡಿ, ಉರುಕುಂದಿಪ್ಪ ನಾಲಗಂದಿನ್ನಿ, ದೇವೇಂದ್ರಪ್ಪ, ಅಯ್ಯಪ್ಪ ಪನ್ನೂರು, ಕುಲಕರ್ಣಿ ಗಂಗಾಧರ, ಶಿಕ್ಷಕರಾದ ರುದ್ರಮುನಿ, ದುರಗಪ್ಪ ಗುಡದೂರು, ವಲಯ ಶಿಕ್ಷಣ ಸಂಯೋಜಕ ಹನುಮಂತಪ್ಪ ನಾಯಕ, ಸಿಆರ್‌ಪಿ ಕೇಶವ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.