ರಾಯಚೂರು: ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 14ನೇ ಘಟಿಕೋತ್ಸವವು ಮೇ 26ರಂದು ಬೆಳಿಗ್ಗೆ 11 ಗಂಟೆಗೆ ವಿಶ್ವ ವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ನಡೆಯಲಿದ್ದು, ಒಟ್ಟು 488 ಪದವಿ ಹಾಗೂ ಸ್ನಾತಕ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಎಂ.ಹನುಮಂತಪ್ಪ ತಿಳಿಸಿದರು.
ರಾಜ್ಯಪಾಲ ಹಾಗೂ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿ ಥಾವರಚಂದ್ ಗೆಹಲೋಥ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಶ್ವವಿದ್ಯಾಲಯದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಮಾಹಿತಿ ಒದಗಿಸಿದರು.
ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯೂ ಆದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಘಟಿಕೋತ್ಸವಕ್ಕೆ ಆಗಮಿಸಲಿದ್ದಾರೆ. ನವದೆಹಲಿಯ ವಿಶ್ವವಿದ್ಯಾಲಯಗಳ ಒಕ್ಕೂಟಕದ ಮಹಾ ಕಾರ್ಯದರ್ಶಿ ಪಂಕಜ್ ಮಿತ್ತಲ್ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ವಿಶ್ವವಿದ್ಯಾಲಯದ ವ್ಯವಸ್ಥಾಪಕ ಮಂಡಳಿಯ ಸದಸ್ಯರು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರು ಉಪಸ್ಥಿತರಿರುವರು ಎಂದು ಹೇಳಿದರು.
ವಿದ್ಯಾರ್ಥಿನಿಯರೇ ಅಧಿಕ: 14ನೇ ಘಟಿಕೋತ್ಸವದಲ್ಲಿ 352 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ, 136 ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಹಾಗೂ 39 ವಿದ್ಯಾರ್ಥಿಗಳಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಇವರಲ್ಲಿ 152 ವಿದ್ಯಾರ್ಥಿನಿಯರು ಸ್ನಾತಕ ಪದವಿ, 62 ವಿದ್ಯಾರ್ಥಿನಿಯರು ಸ್ನಾತಕೋತ್ತರ ಪದವಿ ಹಾಗೂ 19 ವಿದ್ಯಾರ್ಥಿನಿಯರು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆೆ. ಸ್ನಾತಕ ಪದವಿಯಲ್ಲಿ 27 ವಿದ್ಯಾರ್ಥಿನಿಯರು ಚಿನ್ನದ ಪದಕ ಮತ್ತು ಇಬ್ಬರು ಸ್ನಾತಕ ವಿದ್ಯಾರ್ಥಿಗಳು ನಗದು ಬಹುಮಾನ ಪಡೆಯಲಿದ್ದಾರೆ. ಸ್ನಾತಕೋತ್ತರ ಪದವಿಯಲ್ಲಿ 17 ವಿದ್ಯಾರ್ಥಿಗಳು ಚಿನ್ನದ ಪದಕ ಹಾಗೂ 15 ವಿದ್ಯಾರ್ಥಿಗಳು ಚಿನ್ನದ ಪದಕ ಸಹಿತ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ ಎಂದರು.
ಈ ಘಟಿಕೋತ್ಸವದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ಉತ್ಕೃಷ್ಟ ಸಾಧನೆ ಮಾಡಿದ ಒಬ್ಬ ರೈತರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುವುದು. ಕಲ್ಯಾಣ ಕರ್ನಾಟಕದಿಂದ ಮೂವರ ಪ್ರಗತಿಪರ ರೈತರ ಹೆಸರು ಶಿಫಾರಸು ಮಾಡಲಾಗಿತ್ತು. ರಾಜ್ಯಪಾಲರು ಒಬ್ಬರನ್ನು ಆಯ್ಕೆ ಮಾಡಿದ್ದಾರೆ ಎಂದು ಹನುಮಂತಪ್ಪ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ದುರಗೇಶ ಕೆ.ಆರ್., ಗುರುರಾಜ ಸುಂಕದ, ಜಾಗೃತಿ ದೇಶಮಾನ್ಯ, ಅರುಣಕುಮಾರ ಹೊಸಮನಿ ಉಪಸ್ಥಿತರಿದ್ದರು.
597 ತಂತ್ರಜ್ಞಾನ ಅಭಿವೃದ್ಧಿ
ವಿಶ್ವವಿದ್ಯಾಲಯ ಆರಂಭವಾದ ದಿನದಿಂದ ಈವರೆಗೂ 597 ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದೆ ಎಂದು ಕುಲಪತಿ ಎಂ.ಹನುಮಂತಪ್ಪ ತಿಳಿಸಿದರು. 2022–2023ನೇ ಸಾಲಿನಲ್ಲಿ ಸುಧಾರಿತ ತಳಿಗಳು ಸೇರಿ ಅನೇಕ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ರೈತರ ಬಳಕೆಗೆ ಬಿಡುಗಡೆ ಮಾಡಿದೆ. ಭತ್ತದ ಪೌಷ್ಟಿಕಾಂಶ-ಬಲವರ್ಧಿತ ತಳಿ ಜಿಎನ್‌ವಿ–1109 ಅಪೌಷ್ಟಿಕಾಂಶ ಹೋಗಲಾಡಿಸುವ ಆಶಾಭಾವ ಹೊಂದಿದೆ. ಕೊರಲೆ ಬೆಳೆಯಲ್ಲಿ ಎಚ್‌ಬಿಆರ್–2 ಶೇಂಗಾದಲ್ಲಿ ಐಸಿಆರ್‌ಸಿ–1 ತಳಿಗಳು ಬಿಡುಗಡೆಗೊಂಡಿದೆ. ವಿಶ್ವವಿದ್ಯಾಲಯದಲ್ಲಿ ಅನುಷ್ಠಾನಗೊಂಡಿರುವ ಎಣ್ಣೆಕಾಳು ಬೆಳೆಗಳ ಸಂಶೋಧನಾ ಯೋಜನೆಯು ದೇಶದ ‘ಅತ್ಯುತ್ತಮ ಸಂಘಟಿತಾ ಸಂಶೋಧನೆ ಯೋಜನೆಯ ಪ್ರಶಸ್ತಿ’ಗೆ ಭಾಜನವಾಗಿದೆ. ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯವು ಉತ್ಕೃಷ್ಟ ಶಿಕ್ಷಣದ ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳುವಲ್ಲಿ ಸಫಲವಾಗಿದೆ. ಇಂತಹ ಕಾರ್ಯ ಚಟುವಟಿಕೆಗಳನ್ನು ಗುರುತಿಸಿದ ನವದೆಹಲಿಯ ಕೃಷಿ ತಾಂತ್ರಿಕ ತಂತ್ರಜ್ಞರ ಸಂಸ್ಥೆಯು 2023ನೇ ಸಾಲಿನ ‘ಶ್ರೇಷ್ಠ ತಾಂತ್ರಿಕ ಶಿಕ್ಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.