ADVERTISEMENT

ಕವಿತಾಳ | ಗುಡ್ಡದಲ್ಲಿ ತಿಳಿಗುಲಾಬಿ ಹೂಗಳ ಸೊಬಗು

ಕವಿತಾಳ– ಹಟ್ಟಿ ಚಿನ್ನದಗಣಿ ಮಾರ್ಗದಲ್ಲಿ ಬೆಳೆದ ಗೊಬ್ಬರದ ಮರಗಳು

ಮಂಜುನಾಥ ಎನ್ ಬಳ್ಳಾರಿ
Published 9 ಫೆಬ್ರುವರಿ 2025, 5:01 IST
Last Updated 9 ಫೆಬ್ರುವರಿ 2025, 5:01 IST
ಕವಿತಾಳ ಸಮೀಪದ ಕೆ.ತಿಮ್ಮಾಪುರ ಅರಣ್ಯ ಪ್ರದೇಶದಲ್ಲಿ ಗೊಬ್ಬರದ ಮರಗಳಲ್ಲಿ ಅರಳಿದ ಹೂವುಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ
ಕವಿತಾಳ ಸಮೀಪದ ಕೆ.ತಿಮ್ಮಾಪುರ ಅರಣ್ಯ ಪ್ರದೇಶದಲ್ಲಿ ಗೊಬ್ಬರದ ಮರಗಳಲ್ಲಿ ಅರಳಿದ ಹೂವುಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ   

ಕವಿತಾಳ: ಇಲ್ಲಿಗೆ ಸಮೀಪದ ಕಡ್ಡೋಣಿ– ತಿಮ್ಮಾಪುರ ಅರಣ್ಯ ಪ್ರದೇಶದಲ್ಲಿ ಅರಳಿ ನಿಂತ ತಿಳಿ ಗುಲಾಬಿ ಬಿಳಿ ಬಣ್ಣದ ಹೂವುಗಳು ದಾರಿಹೋಕರನ್ನು ಸೆಳೆಯುತ್ತಿವೆ.

ಕೆ.ತಿಮ್ಮಾಪುರ ಸಸ್ಯ ಕ್ಷೇತ್ರದ ಸುತ್ತಲಿನ ಅರಣ್ಯ ಪ್ರದೇಶದಲ್ಲಿ ಮುಖ್ಯ ರಸ್ತೆ ಬದಿಯಲ್ಲಿ 25ರಿಂದ 30 ಅಡಿಗಳಷ್ಟು ಎತ್ತರಕ್ಕೆ ಬೆಳೆದು ನಿಂತ ‘ಗೊಬ್ಬರದ ಗಿಡ’ಗಳಲ್ಲೀಗ ತಿಳಿ ಗುಲಾಬಿ, ಬಿಳಿ ಬಣ್ಣದ ಹೂವುಗಳು ಅರಳಿ ನಿಂತಿವೆ. ಈ ಸೊಬಗು ಇಡೀ ಗುಡ್ಡವನ್ನು ಆವರಿಸಿದೆ.

ಇಲ್ಲಿ ಕಣ್ಣುಹಾಯಿಸಿದಷ್ಟು ದೂರಕ್ಕೆ ಎತ್ತರದ ಗುಡ್ಡಗಳು, ಹಾವಿನಂತೆ ಮೈಚಾಚಿದ ರಸ್ತೆ ತಿರುವುಗಳೇ ಇವೆ. ಈ ಪುಷ್ಪಗಳ ಸೊಬಗು ಬಿರು ಬಿಸಿನಲ್ಲೂ ದಾರಿ ಹೋಕರನನ್ನು ಒಂದು ಕ್ಷಣ ಸೆಳೆದು ನಿಲ್ಲಿಸುತ್ತದೆ. ವಾಹನಗಳ ಸವಾರರು ಒಂದಿಷ್ಟು ಇಂತಿ ಈ ಹೂವುಗಳ ಅಂದ ಕಣ್ತುಂಬಿಕೊಳ್ಳುವ ದೃಶ್ಯ ಕಂಡು ಬರುತ್ತದೆ. ‌ಯುವಕರು ಹೂವುಗಳನ್ನು ರಸ್ತೆಗೆ ಸುರಿದು ವಿಡಿಯೊ, ಫೋಟೊ ತೆಗೆದುಕೊಳ್ಳುವುದು, ರೀಲ್ಸ್‌ ಮಾಡುವುದು ಇಲ್ಲಿ ಸಾಮಾನ್ಯ.

ADVERTISEMENT

‘ವೈಜ್ಞಾನಿಕವಾಗಿ ಲೆಗುಮಿನೋಸೆ ಕುಟುಂಬಕ್ಕೆ ಸೇರಿದ ಗ್ಲಿರಿಸಿಡಿಯಾ ಸೆಪಿಯಮ್‌ ಅನ್ನು ಕನ್ನಡದಲ್ಲಿ ಗೊಬ್ಬರದ ಗಿಡ ಎಂದು ಕರೆಯಲಾಗುತ್ತದೆ. ಈ ಗಿಡಗಳು ಸಾಮಾನ್ಯವಾಗಿ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳಲ್ಲಿ ಹೂವು ಬಿಡುತ್ತವೆ. ಜನವರಿ, ಫೆ‌ಬ್ರುವರಿಯಲ್ಲಿ ಹಣ್ಣು ಬಿಡುತ್ತವೆ. ಮರದ ತೊಗಟೆ ಮತ್ತು ಎಲೆಗಳು ಪೋಷಕಾಂಶಗಳನ್ನು ಒಳಗೊಂಡಿವೆ. ಹಸಿರು ಎಲೆಗಳ ಗೊಬ್ಬರದ ಗುಣಗಳು ಭೂಮಿಯ ಫಲವತ್ತತೆ ಹೆಚ್ಚಿಸುತ್ತದೆ. ಜಾನುವಾರು ಮತ್ತು ಕೋಳಿಗಳಿಗೆ ಉತ್ಪಾದಕತೆ ಹೆಚ್ಚಿಸಲು ಈ ಗಿಡಗಳ ಎಲೆಗಳು ಸಹಕಾರಿ’ ಎಂದು ಅರಣ್ಯ ಇಲಾಖೆ ಅಧಿಕಾರಿ ಬೂದೆಪ್ಪ ಹೇಳುತ್ತಾರೆ.

ಕವಿತಾಳ ಸಮೀಪದ ಕೆ.ತಿಮ್ಮಾಪುರ ಅರಣ್ಯ ಪ್ರದೇಶದಲ್ಲಿ ಗೊಬ್ಬರದ ಮರಗಳಲ್ಲಿ ಅರಳಿದ ಹೂವುಗಳು ಸಾರ್ವಜನಿಕರ ಗಮನ ಸೆಳೆಯುತ್ತಿವೆ
ಎತ್ತರಕ್ಕೆ ಬೆಳೆದ ಮರಗಳಲ್ಲಿ ಅರಳಿದ ಹೂವುಗಳು ಗಮನ ಸೆಳೆಯುತ್ತಿವೆ. ಸುತ್ತಲಿನ ಪರಿಸರದ ಅಂದ ಹೆಚ್ಚಿಸಿವೆ
ದೇವರಾಜ ನಾಗಲೀಕರ ಆನ್ವರಿ ನಿವಾಸಿ
ಬೆಟ್ಟ–ಗುಡ್ಡಗಳ ನಡುವೆ ಮಂಜು ಮುಸುಕಿದಂತೆ ಕಾಣುವ ತಿಳಿ ಗುಲಾಬಿ ಬಿಳಿ ಬಣ್ಣದ ಹೂವುಗಳು ಬಿರು ಬೇಸಿಗೆಯಲ್ಲೂ ಕಣ್ಮನ ಸೆಳೆಯುತ್ತಿವೆ
ಹನುಮಂತ ಹೀರಾ ಕವಿತಾಳ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.