ADVERTISEMENT

ಕವಿತಾಳ | ‘ಬರಗಾಲ’ದ ಬಿಸಿಯೂಟಕ್ಕೆ ಮಕ್ಕಳಿಂದ ಉತ್ತಮ ಸ್ಪಂದನೆ

ಬಿಸಿಲಲ್ಲಿ ಅನಗತ್ಯ ಅಲೆಯುತ್ತಿದ್ದ ಮಕ್ಕಳು ಶಾಲೆಯಲ್ಲಿ: ಪಾಲಕರು ನಿರಾತಂಕ

ಮಂಜುನಾಥ ಎನ್ ಬಳ್ಳಾರಿ
Published 27 ಏಪ್ರಿಲ್ 2024, 6:37 IST
Last Updated 27 ಏಪ್ರಿಲ್ 2024, 6:37 IST
ಕವಿತಾಳ ಸಮೀಪದ ಹಿರೇಬಾದರದಿನ್ನಿ ಸರ್ಕಾರ ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡುತ್ತಿರುವುದು
ಕವಿತಾಳ ಸಮೀಪದ ಹಿರೇಬಾದರದಿನ್ನಿ ಸರ್ಕಾರ ಶಾಲೆಯಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ ಮಾಡುತ್ತಿರುವುದು   

ಕವಿತಾಳ: ಬೇಸಿಗೆ ರಜೆ ದಿನಗಳಲ್ಲಿ ಶಾಲಾ ಮಕ್ಕಳಿಗಾಗಿ ಶಿಕ್ಷಣ ಇಲಾಖೆ ಆರಂಭಿಸಿದ ಬರಗಾಲದ ಬಿಸಿಯೂಟ ಯೋಜನೆಗೆ ಮಕ್ಕಳಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ತೀವ್ರ ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ಪಾಲಕರು ಗುಳೇ ಹೋಗಿದ್ದಾರೆ, ಪಾಲಕರನ್ನು ಬಿಟ್ಟು ಹಳ್ಳಿಗಳಲ್ಲಿರುವ ಮಕ್ಕಳಿಗೆ ಬರಗಾಲದ ಬಿಸಿಯೂಟ ಅನುಕೂಲವಾಗಿದೆ. ಬೇಸಿಗೆ ರಜೆಯಲ್ಲಿ ಎಲ್ಲೆಲ್ಲೊ ಹೊರಗಡೆ ಬಿಸಿಲಲ್ಲಿ ಅಲೆಯುತ್ತಿದ್ದ ಮಕ್ಕಳು ಈಗ ಶಾಲೆಗೆ ಬಂದು ಊಟ ಮಾಡಿ ಹೋಗುತ್ತಿದ್ದಾರೆ,

ಕೆಲವು ಶಾಲೆಗಳಲ್ಲಿ ಬೆಳಿಗ್ಗೆ 9 ಗಂಟೆಯಿಂದ ಮಕ್ಕಳಿಗೆ ಪಾಠಗಳನ್ನು ಮಾಡಲಾಗುತ್ತಿದೆ ನಂತರ ಒಂದು ಗಂಟೆ ಆಟೋಟಗಳನ್ನು ನಡೆಸಿ ಮದ್ಯಾಹ್ನ ಬಿಸಿಯೂಟ ಮಾಡಿಸಿ ಮನೆಗೆ ಕಳುಹಿಸಲಾಗುತ್ತಿದೆ ಹೀಗಾಗಿ ಬಿಸಿಲಲ್ಲಿ ಅಲ್ಲಲ್ಲಿ ಅಲೆಯುತ್ತಿದ್ದ ಮಕ್ಕಳು ಬಿಸಿಯೂಟ ಸವಿದು ಮನೆಗೆ ಹೋಗುತ್ತಿದ್ದಾರೆ.

ಸಮೀಪದ ಹಿರೇಬಾದರದಿನ್ನಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂದಾಜು 250 ದಾಖಲಾತಿ ಇದೆ ಬರಗಾಲ ಯೋಜನೆಯಡಿ ಮದ್ಯಾಹ್ನದ ಬಿಸಿಯೂಟಕ್ಕೆ 160 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದು ಪ್ರತಿನಿತ್ಯ 120 ಮಕ್ಕಳು ಊಟಕ್ಕೆ ಬರುತ್ತಿದ್ದಾರೆ.

ADVERTISEMENT

ಅನ್ನ ಸಾಂಬಾರು, ಬಿಸಿ ಬೇಳೇ ಬಾತ್ , ಪುಲಾವ್ ಸೇರಿದಂತೆ ಶಾಲಾ ದಿನಗಳಲ್ಲಿ ಮಾಡಿದಂತೆಯೇ ನಿತ್ಯ ಬೇರೆ ಬೇರೆ ಅಡುಗೆ ಮಾಡುವ ಮೂಲಕ ಮಕ್ಕಳನ್ನು ಮದ್ಯಾಹ್ನದ ಬಿಸಿಯೂಟಕ್ಕೆ ಸೆಳೆಯಲು ಶಿಕ್ಷಕರು ಪ್ರಯತ್ನಿಸುತ್ತಿದ್ದಾರೆ.

ʼಮಗ, ಸೊಸೆ ದುಡಿಯಲು ಬೆಂಗಳೂರಿಗೆ ಗುಳೇ ಹೋಗಿದ್ದಾರೆ, ಬಸಿಲಲ್ಲಿ ಆಟವಾಡಿ ಅಲ್ಲಲ್ಲಿ ಅಲೆದು ಸುಮ್ಮನೆ ಕಾಲಹರಣ ಮಾಡುತ್ತಿದ್ದರು ಅವರನ್ನು ನೋಡಿಕೊಳ್ಳುವುದು ಚಿಂತೆಯಾಗಿತ್ತು ಈಗ ಬಿಸಿಯೂಟ ಆರಂಭವಾದ ಮೇಲೆ ಮದ್ಯಾಹ್ನದ ವರಗೆ ಮಕ್ಕಳು ಶಾಲೆಯಲ್ಲಿರುತ್ತಾರೆ ಅದರಿಂದ ನೆಮ್ಮದಿಯಾಗಿದೆʼ ಎಂದು ಎರಡು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿರುವ ಅಜ್ಜಿ ಮಾರೆಮ್ಮ ಹೇಳಿದರು.

ʼಗ್ರಾಮದ ಪ್ರತಿ ಮನೆ ಮನೆಗೆ ಹೋಗಿ ಬಿಸಿಯೂಟ ಯೋಜನೆ ಬಗ್ಗೆ ಪಾಲಕರಿಗೆ ಮಾಹಿತಿ ನೀಡಲಾಗಿದೆ 160 ಜನ ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ ಅದರಲ್ಲಿ 120 ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಪ್ಪದೆ ಊಟಕ್ಕೆ ಬರುತ್ತಾರೆ, ಬೆಳಿಗ್ಗೆ ಒಂದು ತರಗತಿ ನಡೆಸಿ ನಂತರ ಆಟವಾಡಿಸಿ ಊಟ ಕೊಡಲಾಗುತ್ತದೆ, ಮರು ದಿನದ ಹೋಂ ವರ್ಕ ನೀಡಲಾಗುತ್ತಿದೆ ಹೀಗಾಗಿ ಮಕ್ಕಳ ಬಗ್ಗೆ ಪಾಲಕರು ಆತಂಕ ಪಡುವುದು ತಪ್ಪಿದೆʼ ಎಂದು ಮುಖ್ಯ ಶಿಕ್ಷಕ ಹುಸೇನಬಾಷಾ ಹೇಳಿದರು.

ಸೌಮ್ಯಶ್ರೀ

2 ಕಿ.ಮೀ ವ್ಯಾಪ್ತಿಯ ಶಾಲೆಗಳನ್ನು ಒಂದುಗೂಡಿಸಿ ಬಿಸಿಯೂಟ ತಯಾರಿಸಲಾಗುತ್ತಿದೆ. ಜಾತ್ರೆ ಮದುವೆ ಸಮಾರಂಭಗಳ ಹಿನ್ನೆಲೆಯಲ್ಲಿ ಪಟ್ಟಣದ ಶಾಲೆಗಳಲ್ಲಿ ಸದ್ಯ ಮಕ್ಕಳ ಸಂಖ್ಯೆ ಕಡಿಮೆ ಇದೆ. ಹಳ್ಳಿ ಶಾಲೆಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ

-ಸೌಮ್ಯಶ್ರೀ ಸಂಪನ್ಮೂಲ ವ್ಯಕ್ತಿ ಕವಿತಾಳ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.