ADVERTISEMENT

ಅಭಿವೃದ್ಧಿ ವಿಚಾರದಲ್ಲಿ ಹೋಲಿಕೆ ಸರಿಯಲ್ಲ: ಶಾಸಕ ರಾಜಾ ವೆಂಕಟಪ್ಪ ನಾಯಕ

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 12:32 IST
Last Updated 14 ಜನವರಿ 2022, 12:32 IST
ರಾಜಾ ವೆಂಕಟಪ್ಪ ನಾಯಕ
ರಾಜಾ ವೆಂಕಟಪ್ಪ ನಾಯಕ   

ಮಾನ್ವಿ: ‘ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ಕಾಂಗ್ರೆಸ್ ಶಾಸಕರ ಅವಧಿ ಜತೆಗೆ ನನ್ನ ಅಧಿಕಾರದ ಅವಧಿಯನ್ನು ಹೋಲಿಕೆ ಮಾಡುವುದು ಸರಿಯಲ್ಲ’ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹೇಳಿದರು.

ಶುಕ್ರವಾರ ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ ಮಾನ್ವಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಎನ್.ಎಸ್.ಬೋಸರಾಜು ಹಾಗೂ ಜಿ.ಹಂಪಯ್ಯ ನಾಯಕ ತಲಾ ಎರಡು ಬಾರಿ ಸತತವಾಗಿ ಆಧಿಕಾರ ನಡೆಸಿದ್ದಾರೆ. ನನ್ನದು ಕೇವಲ ಮೂರೂವರೆ ವರ್ಷ. ಕೋವಿಡ್ ಕಾರಣದಿಂದಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುದಾನದ ಕೊರತೆ ಇದೆ. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ನನ್ನ ಸಾಧನೆಯನ್ನು ಪ್ರಶ್ನಿಸುವುದು ಹಿರಿಯರಾದ ಮಾಜಿ ಶಾಸಕರಿಗೆ ಗೌರವ ತರುವಂತದ್ದಲ್ಲ’ ಎಂದರು.

‘ಜ.11ರಂದು ತಾಯಿ-ಮಕ್ಕಳ ಆಸ್ಪತ್ರೆಯ ಉದ್ಘಾಟನೆ ಸಂದರ್ಭದಲ್ಲಿ ಆಸ್ಪತ್ರೆಯ ಶಂಕುಸ್ಥಾಪನೆಯ ನಾಮಫಲಕವನ್ನು ನಾವು ತೆರವುಗೊಳಿಸಿಲ್ಲ. ಅದು ಅಧಿಕಾರಿಗಳಿಗೆ ಸಂಬಂಧಿಸಿದ ವಿಷಯ. ತಾಯಿ-ಮಕ್ಕಳ ಆಸ್ಪತ್ರೆ ನನ್ನಿಂದಲೇ ನಿರ್ಮಾಣ ಆಗಿದೆ ಎಂದು ಎಲ್ಲೂ ಹೇಳಿಲ್ಲ. ಅಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಮೊದಲಿಗೆ ₹ 7ಕೋಟಿ ಹಾಗೂ ನಂತರ ₹ 4ಕೋಟಿ ಅನುದಾನ ಬಿಡುಗಡೆ ಮಾಡಿಸಿದ್ದಾಗಿ ಹೇಳಿದ್ದೇನೆ. ಇದನ್ನೇ ವಿರೋಧ ಪಕ್ಷದವರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ’ ಎಂದು ಅವರು ಸ್ಪಷ್ಟಪಡಿಸಿದರು.

ADVERTISEMENT

‘ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣಕ್ಕೆ ಗುರುತಿಸಲಾದ ಜಾಗವನ್ನು ನೀರಾವರಿ ಇಲಾಖೆಯಿಂದ ಕಂದಾಯ ಇಲಾಖೆಗೆ ವರ್ಗಾಯಿಸಲಾಗಿದೆ. ಅನುದಾನ ಕೊರೆತೆಯಿಂದಾಗಿ ಕಟ್ಟಡ ನಿರ್ಮಾಣ ಕಾರ್ಯಕ್ಕೆ ವಿಳಂಬವಾಗಿದೆ’ ಎಂದು ತಿಳಿಸಿದರು.

ಜೆಡಿಎಸ್ ಪಕ್ಷದ ಮುಖಂಡರಾದ ಮಲ್ಲಿಕಾರ್ಜುನಗೌಡ ಬಲ್ಲಟಗಿ, ಜೆ.ಎಚ್.ದೇವರಾಜ , ಖಲೀಲ್ ಖುರೇಷಿ, ಈರಣ್ಣ ಮರ್ಲಟ್ಟಿ ಹಾಗೂ ಮಹ್ಮದ್ ಇಸ್ಮಾಯಿಲ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.