ADVERTISEMENT

ರಾಯಚೂರು: ಕುಡಿಯುವ ನೀರಿಗೆ ತಪ್ಪದ ಪರದಾಟ

ಮಂದಗತಿಯಲ್ಲಿ ಸಾಗಿರುವ ಕಲ್ಮಲಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾಮಗಾರಿ

ಚಂದ್ರಕಾಂತ ಮಸಾನಿ
Published 21 ಏಪ್ರಿಲ್ 2025, 7:02 IST
Last Updated 21 ಏಪ್ರಿಲ್ 2025, 7:02 IST
ರಾಯಚೂರು ತಾಲ್ಲೂಕಿನ ಕಲ್ಮಲಾ ಸಮೀಪ ಬಹು ಗ್ರಾಮ ಕುಡಿಯುವ ನೀರು ಯೋಜನೆ ಅಡಿ ನಿರ್ಮಿಸಲಾದ ಕೆರೆ
ರಾಯಚೂರು ತಾಲ್ಲೂಕಿನ ಕಲ್ಮಲಾ ಸಮೀಪ ಬಹು ಗ್ರಾಮ ಕುಡಿಯುವ ನೀರು ಯೋಜನೆ ಅಡಿ ನಿರ್ಮಿಸಲಾದ ಕೆರೆ   

ರಾಯಚೂರು: ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು 2019ರಲ್ಲಿ ರೂಪಿಸಿದ ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಇಂದಿಗೂ ಸಾಕಾರಗೊಂಡಿಲ್ಲ. ಕಾಮಗಾರಿ ಆರಂಭವಾದ ದಿನದಿಂದಲೂ ಕುಂಟುತ್ತ ಸಾಗಿರುವ ಕಾರಣ ಗ್ರಾಮಸ್ಥರ ಕುಡಿಯುವ ನೀರಿನ ಬವಣೆ ತಪ್ಪಿಲ್ಲ.

ಕಲ್ಮಲಾ, ಹುಣಶ್ಯಾಳ ಹುಡಾ, ವಿಜಯನಗರ ಕ್ಯಾಂಪ್, ಮಾರೆಮ್ಮ ಕ್ಯಾಂಪ್, ಸೀತಾ ಕ್ಯಾಂಪ್ ಹಾಗೂ ಅಶೋಕ ದಳವಾಯಿ ಕ್ಯಾಂಪ್ ಸೇರಿಸಿ ₹ 8.5 ಕೋಟಿ ವೆಚ್ಚದ ಬಹು ಗ್ರಾಮ ಕುಡಿಯುವ ನೀರು ಯೋಜನೆ ಅನುಷ್ಠಾನಗೊಳಿಸಲಾಗಿದೆ. 2020ರಲ್ಲೇ ಕಾಮಗಾರಿ ಆರಂಭವಾದರೂ ಮುಗಿಯುವ ಲಕ್ಷಣಗಳು ಕಂಡು ಬರುತ್ತಿಲ್ಲ.

ಕೆರೆ ಒಡ್ಡಿಗೆ ಶಹಾಬಾದ್‌ ಕಲ್ಲು ಅಳವಡಿಸಿರುವ ಕಾರಣ ಅವು ನೆಲದೊಳಗೆ ಗಟ್ಟಿಯಾಗಿ ಕೂತುಕೊಂಡಿಲ್ಲ. ಕಲ್ಲುಗಳ ಮಧ್ಯೆ ಗಿಡಗಳು ಬೆಳೆದು ಕಳಚಿ ಬೀಳುತ್ತಿವೆ. ಉದ್ದ, ದಪ್ಪನೆಯ ಕಲ್ಲು ಹಾಕಿದರೆ ಕೆರೆ ಒಡ್ಡು ಗಟ್ಟಿಯಾಗಲು ಸಾಧ್ಯವಾಗುತ್ತಿತ್ತು. ಶಹಾಬಾದ್‌ ಕಲ್ಲು ಕೆರೆಯ ಒಡ್ಡಿನ ಸುರಕ್ಷತೆಗೆ ಸವಾಲು ಹಾಕುವಂತಿದೆ.

ADVERTISEMENT

ಕೆರೆ ದಡದಲ್ಲಿ ನಿರ್ಮಿಸಿರುವ ಪಂಪ್‌ಹೌಸ್‌ನಿಂದ ಒಂದು ಬಾರಿ ಪ್ರಾಯೋಗಿಕವಾಗಿ ನೀರು ಹರಿಸಲಾಗಿದೆ. ಕೆರೆಯಿಂದ ಗುಡ್ಡದ ಮೇಲೆ ನಿರ್ಮಿಸಿರುವ ಓವರ್‌ ಹೆಡ್‌ ಟ್ಯಾಂಕ್‌ವರೆಗೆ ಚಿಕ್ಕ ಪೈಪ್‌ ಅಳವಡಿಸಿದ ಕಾರಣ ಸಮಸ್ಯೆ ಆಗಿತ್ತು. ಇದೀಗ ದೊಡ್ಡ ಗಾತ್ರದ ಪೈಪ್‌ ಅಳವಡಿಸುವ ಕಾರ್ಯ ನಡೆದಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜೂನ್‌ 15ರ ವೇಳೆಗೆ ಕಾಮಗಾರಿ ಮುಗಿಸಬಹುದಾಗಿದೆ. ಆದರೆ, ಅಧಿಕಾರಿಗಳು ಈ ದಿಸೆಯಲ್ಲಿ ಹೆಚ್ಚಿನ ಆಸಕ್ತಿ ತೋರಿಸುತ್ತಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

‘ಐದು ವರ್ಷಗಳಿಂದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕುಂಟುತ್ತ ಸಾಗಿದೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳ ಗಮನಕ್ಕೂ ತರಲಾಗಿದೆ. ಕಾಲಮಿತಿಯೊಳಗೆ ಯೋಜನೆ ಪೂರ್ಣಗೊಳ್ಳದ ಕಾರಣ ಜನರ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಮುಂದಾಗಬೇಕು’ ಎನ್ನುತ್ತಾರೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಶರಣಪ್ಪ.

‘ಕಲ್ಮಲಾ ಕೆರೆ ಕಾಮಗಾರಿ ಪರಿಶೀಲಿಸಿದ್ದೇನೆ. ಬಂಡಿಂಗ್‌ಗೆ ಅಳವಡಿಸಿದ್ದ ಶಹಾಬಾದ್‌ ಕಲ್ಲು ತೆಗೆದು ಗಟ್ಟಿ ಕಲ್ಲುಗಳನ್ನು ಅಳವಡಿಸಿ ಒಡ್ಡು ಬಲಪಡಿಸುವಂತೆ ಗುತ್ತಿಗೆದಾರರಿಗೆ ಸ್ಪಷ್ಟ ಸೂಚನೆ ನೀಡಿದ್ದೇನೆ. ಕಾಮಗಾರಿಯ ಗುಣಮಟ್ಟದ ಮೇಲೆ ನಿಗಾವಹಿಸುವಂತೆ ಎಂಜಿನಿಯರ್‌ಗಳಿಗೆ ನಿರ್ದೇಶನ ನೀಡಿದ್ದೇನೆ. ಒಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್‌ ಪಾಂಡ್ವೆ ಹೇಳುತ್ತಾರೆ.

ರಾಯಚೂರು ತಾಲ್ಲೂಕಿನ ಕಲ್ಮಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಳವಾಯಿ ಕ್ಯಾಂಪ್‌ನಲ್ಲಿ ಕೊಳಚೆ ನೀರಿನಲ್ಲಿರುವ ಪೈಪ್‌ನಿಂದ ಕುಡಿಯುಲು ಕೊಡಗಳಲ್ಲಿ ನೀರು ತುಂಬಿಕೊಳ್ಳುತ್ತಿರುವ ಮಹಿಳೆಯರು
ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಕುಡಿಯುವ ನೀರಿಗೆ ಸಂಬಂಧಿಸಿದಂತೆ ವಿಶೇಷ ಕೆಡಿಪಿ ಸಭೆ ಕರೆದು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು
ರಂಗನಾಥ ಪೊಲೀಸ್‌ ಪಾಟೀಲ, ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಜಿಲ್ಲಾ ಮಟ್ಟದ ಅಧಿಕಾರಿಗಳು ನಿರಂತರವಾಗಿ ಮೇಲ್ವಿಚಾರಣೆ ನಡೆಸಿದ್ದರೆ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಜನರ ಸಮಸ್ಯೆ ಹೆಚ್ಚಿಸಿದೆ
ಕೆ.ಶರಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ
ಅಶೋಕ ದಳವಾಯಿ ಕ್ಯಾಂಪ್‌ನಲ್ಲಿ ಕೊಳಚೆ ನೀರಲ್ಲಿ ಅಳವಡಿಸಿರುವ ಕುಡಿಯುವ ನೀರಿನ ಪೈಪ್‌ ತೆಗೆಸಿ ಶುದ್ಧ ನೀರು ಕೊಡಲು ಪ್ರಯತ್ನಿಸಲಾಗುವುದು
ರಾಹುಲ್‌ ಪಾಂಡ್ವೆ, ಜಿ.ಪಂ ಸಿಇಒ
ಮನೆ ಹೊಲದ ಕೆಲಸಗಳ ಮಧ್ಯೆ ತಲೆಯ ಮೇಲೆ ಕುಡಿಯುವ ನೀರು ಹೊತ್ತ ತರಬೇಕಾಗಿದೆ. ಜಿಲ್ಲೆಯಲ್ಲಿ ಮಹಿಳೆಯರ ಗೋಳು ಕೇಳುವವರಿಲ್ಲ.
ನರಸಮ್ಮ, ಕ್ಯಾಂಪ್‌ ನಿವಾಸಿ

ಕೊಳಚೆ ನೀರಲ್ಲಿ ಕುಡಿಯುವ ನೀರಿನ ಪೈಪ್‌

ದಳವಾಯಿ ಕ್ಯಾಂಪ್: ಕೊಳಚೆ ನೀರು ಹಾಗೂ ಗಟಾರುಗಳಲ್ಲಿ ಕುಡಿಯುವ ನೀರಿನ ಪೈಪ್‌ ಅಳವಡಿಸಿದರೆ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಿದ್ದರೂ ಅಧಿಕಾರಿಗಳು ಅಶೋಕ ದಳವಾಯಿ ಕ್ಯಾಂಪ್‌ನಲ್ಲಿ ಕೊಳಚೆ ನೀರಲ್ಲೇ ಪೈಪ್‌ ಅಳವಡಿಸಿ ಗ್ರಾಮಸ್ಥರಿಗೆ ಅಪಾಯ ತಂದೊಡ್ಡಿದ್ದಾರೆ. ಕ್ಯಾಂಪನ್‌ ನಿವಾಸಿಗಳು ಕುಡಿಯುವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಿದ್ದಾರೆ. ಅಪರೂಪಕ್ಕೆ ಬರುವ ಕುಡಿಯುವ ನೀರು ಹಿಡಿದುಕೊಳ್ಳಲು ಹರ ಸಾಹಸ ಮಾಡುತ್ತಾರೆ. ಹಲವು ವರ್ಷಗಳಿಂದ ನೀರು ಹೊತ್ತು ತಂದು ಬೇಸತ್ತಿರುವ ಜನ ಕೈಗಾಡಿ ಮಾಡಿಕೊಂಡು ನೀರು ತರಲು ಆರಂಭಿಸಿದ್ದಾರೆ.

ಇದೆಲ್ಲ ಕಣ್ಣೆದುರೇ ಕಂಡರೂ ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಕೆ.ಶರಣಪ್ಪ ಮೌನಕ್ಕೆ ಜಾರಿದ್ದಾರೆ. ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಸಹ ಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಜಲಕುಂಭ ನಿರ್ಮಿಸಿ ಕ್ಯಾಂಪ್‌ ನಿವಾಸಿಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಇದೆ. ಅಲ್ಲಿ ಜಲಕುಂಭ ನಿರ್ಮಾಣಕ್ಕೆ ಪೈಪ್‌ ಸಹ ತಂದಿಡಲಾಗಿದೆ. ಅನುದಾನದ ಕೊರತೆ ಇಲ್ಲ. ಆದರೆ ಗ್ರಾಮ ಪಂಚಾಯಿತಿ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ನಮಗೆ ನೀರಿನ ವ್ಯವಸ್ಥೆ ಮಾಡಿಕೊಡಲು ಸಿದ್ಧರಿಲ್ಲ ಎಂದು ಕ್ಯಾಂಪನ್‌ ಮಹಿಳೆಯರು ಬೇಸರ ವ್ಯಕ್ತಪಡಿಸಿದರು.

ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ನಿರ್ದಿಷ್ಟ ಸಮಯದಲ್ಲಿ ನೀರು ಬಿಡುವುದಿಲ್ಲ. ವಿದ್ಯುತ್‌ ಇದ್ದಾಗ ಒಂದು ಟ್ಯಾಂಕ್‌ನಲ್ಲಿ ನೀರು ತುಂಬಿಸಿಕೊಟ್ಟರೂ ಗ್ರಾಮಸ್ಥರಿಗೆ ಅನುಕೂಲವಾಗಲಿದೆ. ಆದರೆ ಅದಕ್ಕೂ ಸ್ಪಂದಿಸುತ್ತಿಲ್ಲ. ಕನಿಷ್ಠ ಪಕ್ಷ ಜನಪ್ರತಿನಿಧಿಗಳಾದರೂ ಇಲ್ಲಿಗೆ ಬಂದು ನಮ್ಮ ಸಮಸ್ಯೆ ನೋಡಲಿ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.