ADVERTISEMENT

ಸಿಂಧನೂರು: ರಂಗ ಮಂದಿರ ನಿರ್ಮಾಣ ಕಾಮಗಾರಿ ಚುರುಕು

ಡಿ.ಎಚ್.ಕಂಬಳಿ
Published 25 ಮೇ 2022, 13:18 IST
Last Updated 25 ಮೇ 2022, 13:18 IST
ಸಿಂಧನೂರಿನ ಸುಕಾಲಪೇಟೆ ರಸ್ತೆಯಲ್ಲಿ ರಂಗಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದು
ಸಿಂಧನೂರಿನ ಸುಕಾಲಪೇಟೆ ರಸ್ತೆಯಲ್ಲಿ ರಂಗಮಂದಿರ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿರುವುದು   

ಸಿಂಧನೂರು: ನಗರದ ಸುಕಾಲಪೇಟೆ ರಸ್ತೆಯಲ್ಲಿ ರಂಗ ಮಂದಿರ ನಿರ್ಮಾಣ ಕಾಮಗಾರಿ ಅತ್ಯಂತ ಚುರುಕಿನಿಂದ ಸಾಗಿದ್ದು, ತಾಲ್ಲೂಕಿನ ಕಲಾಸಕ್ತರ 25 ವರ್ಷಗಳ ಕನಸು ನನಸಾಗುವ ಸಮಯ ಸನ್ನಿಹಿತವಾಗಿದೆ.

1992 ರಲ್ಲಿ ಕನ್ನಡ ಮ್ತತು ಸಂಸ್ಕೃತಿ ಇಲಾಖೆ ನಿಧಿಯಿಂದ ಪುರಸಭೆ ಅಧ್ಯಕ್ಷರಾಗಿದ್ದ ಕೆ.ನಾಗಪ್ಪ ಮತ್ತು ಆಗ ಶಾಸಕರಾಗಿದ್ದ ಹಂಪನಗೌಡ ಬಾದರ್ಲಿ ಅವರಿಂದ ಶಂಕುಸ್ಥಾಪನೆಗೊಂಡ ರಂಗಮಂದಿರ ನಿರ್ಮಾಣ ಹಂತಕ್ಕೆ ಬರಲು 30 ವರ್ಷಗಳು ಸಂದಿವೆ.

2008 ರಲ್ಲಿ ಶಾಸಕರಾದ ವೆಂಕಟರಾವ್ ನಾಡಗೌಡ ಕನ್ನಡ ಸಂಸ್ಕೃತಿ ಇಲಾಖೆ, ರಾಜ್ಯಸಭಾ ಸದಸ್ಯರ ಅನುದಾನ, ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯ ಅನುದಾನದಲ್ಲಿ ರಂಗಮಂದಿರ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಹಲವು ಕಾಮಗಾರಿಗಳಲ್ಲಿ ನಿರ್ಮಿತಿ ಕೇಂದ್ರ ಭಾರೀ ಪ್ರಮಾಣದಲ್ಲಿ ಅವ್ಯವಹಾರ ಮಾಡಿದೆ ಎನ್ನುವ ಪ್ರಕರಣ ಸಿಬಿಐ ಮೆಟ್ಟಿಲೇರಿದ ಕಾರಣ ರಂಗಮಂದಿರದ ನಿರ್ಮಾಣ ಕಾಮಗಾರಿಯ ಪ್ರಗತಿ ಸ್ಥಗಿತಗೊಂಡಿತ್ತು.

ADVERTISEMENT

ಕಳೆದ 10 ತಿಂಗಳಿನಿಂದ ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಯಿಂದ ಮೊದಲ ಹಂತದಲ್ಲಿ ₹ 2 ಕೋಟಿ, ಎರಡನೇ ಹಂತದಲ್ಲಿ ₹ 1.80 ಕೋಟಿ ಹಣ ಬಿಡುಗಡೆಯಾಗಿದ್ದು, ಕರ್ನಾಟಕ ಮೂಲ ಸೌಕರ್ಯ ಅಭಿವೃದ್ದಿ ನಿಗಮದಿಂದ ರಂಗಮಂದಿರದ ಕಟ್ಟಡ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿವೆ.

ಈಗಾಗಲೇ ಶೇ 70 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಎರಡು ಡ್ರೆಸ್ಸಿಂಗ್ ರೂಮ್‍ಗಳು, ಶೌಚಾಲಯಗಳು, ಬಾಲ್ಕನಿ, ಸಭಾಂಗಣ ಹೊಂದಿದ ಸುಸಜ್ಜಿತ ರಂಗ ಮಂಟಪ ನಿರ್ಮಾಣವಾಗಲಿದೆ ಎಂದು ಎಂಜನಿಯರ್ ಮಹಾಂತೇಶ ತಿಳಿಸಿದರು.

ಕಟ್ಟಡ ನಿರ್ಮಾಣಗೊಳ್ಳುತ್ತಿರುವ ಪಕ್ಕದಲ್ಲಿ ಸಾರ್ವಜನಿಕರು ಘನತ್ಯಾಜ್ಯ ವಸ್ತುಗಳನ್ನು ಹಾಕುತ್ತಿದ್ದು, ಎರಡು ದಿನಕ್ಕೊಮ್ಮೆ ಕಸದ ರಾಶಿ ತೆರವುಗೊಳಿಸುವದೊಂದು ಕೆಲಸವೇ ಆಗಿದೆ. ಕಾರಣ ಸಾರ್ವಜನಿಕರು ತ್ಯಾಜ್ಯ ವಸ್ತುಗಳನ್ನು ಹಾಕಬಾರದು ಎಂದು ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್ ಮನವಿ ಮಾಡಿದ್ದಾರೆ.

**

ರಂಗಮಂದಿರ ನಿರ್ಮಾಣ ಮಾಡುವುದಾಗಿ ಜನರಿಗೆ ಮಾತು ಕೊಟ್ಟಿದ್ದೆ. ಅದರಂತೆ ನಡೆದುಕೊಂಡಿದ್ದೇನೆ. ಇನ್ನೂ ಆರು ತಿಂಗಳೊಳಗೆ ರಂಗಮಂದಿರ ಪೂರ್ಣಗೊಳ್ಳಲಿದೆ

-ವೆಂಕಟರಾವ್ ನಾಡಗೌಡ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.