ಕೇಂದ್ರ ಉಗ್ರಾಣ ನಿಗಮದಿಂದ ಅಧಿಕಾರಿಗಳಿಂದ ನಿರಾಕರಣೆ
30ಕ್ಕೂ ಹೆಚ್ಚು ಗ್ರಾಮಗಳ ರೈತರ ಸ್ಥಿತಿ ಚಿಂತಾಜನಕ
ಮಿನಿವಿಧಾನಸೌಧ ಕಚೇರಿಗೆ ಬೀಗ ಹಾಕಿ ಪ್ರತಿಭಟಿಸುವ ಎಚ್ಚರಿಕೆ
ಸಿಂಧನೂರು: ಒಂದು ವಾರದಿಂದ ಜಿಟಿ ಜಿಟಿ ಮಳೆ, ಸೂರ್ಯ ಹೊರಬರದಂತೆ ಮುಚ್ಚಿರುವ ಮೋಡ, ಇದರಿಂದ ಮುಚ್ಚಿಟ್ಟ ಜೋಳದ ರಾಶಿಗಳಲ್ಲಿ ಹುಳ, ಕೆಲ ರಾಶಿಗಳಲ್ಲಿ ಮೊಳಕೆಯೊಡೆದ ಜೋಳ...
ಇದು ಹಿಂಗಾರಿನಲ್ಲಿ ಜೋಳ ಬೆಳೆದ ರೈತರ ಗೋಳು..
ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬೆಂಬಲ ಬೆಲೆ ನೀಡಿ ಜೋಳ ಖರೀದಿಸುವ ಭರವಸೆ ನೀಡಿದ್ದವು. ಏಪ್ರಿಲ್ ತಿಂಗಳಲ್ಲಿಯೇ ಖರೀದಿ ಕೇಂದ್ರಗಳಲ್ಲಿ ನೋಂದಣಿ ಮಾಡಿ ನಾಳೆ ಖರೀದಿಸುತ್ತಾರೆ. ನಾಡಿದ್ದು ಖರೀದಿಸುತ್ತಾರೆ ಎಂದು ಭರವಸೆಯಿಟ್ಟು ರೈತರು ಕಾಯುತ್ತಿದ್ದರು.
ಇತ್ತೀಚಿಗೆ ಕೇಂದ್ರ ಉಗ್ರಾಣ ನಿಗಮದ ಅಧಿಕಾರಿಗಳು ಜೋಳದಲ್ಲಿ ನುಸಿ ಮತ್ತು ಹುಳಗಳಿವೆ ಎಂದು ಖರೀದಿ ಮಾಡಲು ನಿರಾಕರಿಸಿದ್ದಕ್ಕೆ ರೈತರು ಅತ್ತ ಮಾರುಕಟ್ಟೆಯಲ್ಲಿ ಮಾರದೆ, ಇತ್ತ ಖರೀದಿ ಕೇಂದ್ರಕ್ಕೂ ಮಾರಾಟ ಮಾಡದೆ ಜೋಳದ ರಾಶಿ ಮನೆ ಮುಂದೆಯೋ, ಹೊಲದಲ್ಲಿಯೋ ಹಾಕಿಕೊಂಡು ತ್ರಿಶಂಖು ಪರಿಸ್ಥಿತಿ ಅನುಭವಿಸುತ್ತಿದ್ದಾರೆ.
ಹಳ್ಳದ ನೀರಿನಿಂದ ಜೋಳ ಬೆಳೆದ ಉದ್ಬಾಳ, ಗೋಮರ್ಸಿ, ಮಾಡಶಿರವಾರ, ಬೆಳಗುರ್ಕಿ, ಅಲಬನೂರು, ವಳಬಳ್ಳಾರಿ, ಗೊಣ್ಣಿಗನೂರು, ಗಿಣಿವಾರ, ಬಾದರ್ಲಿ ಹೀಗೆ ಸುಮಾರು 30ಕ್ಕೂ ಅಧಿಕ ಹಳ್ಳಿಗಳ ರೈತರು ಖರೀದಿ ಕೇಂದ್ರದ ಸೌಕರ್ಯದಿಂದ ವಂಚಿತರಾಗಿದ್ದಾರೆ.
‘ಸ್ವಂತ 8 ಎಕರೆ ಜಮೀನಿನಲ್ಲಿ ಜೋಳ ಬೆಳೆದು ಫೆಬ್ರುವರಿ ತಿಂಗಳಲ್ಲಿಯೇ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದೇನೆ. ಇಲ್ಲಿಯವರೆಗೂ ಒಂದು ಚೀಲ ಜೋಳವನ್ನು ಸಹ ಸರ್ಕಾರದವರು ಖರೀದಿ ಮಾಡಿಲ್ಲ. ಯಾವ ಗಿಡಕ್ಕೆ ಹೋಗಿ ನೇಣು ಹಾಕಿಕೊಳ್ಳಬೇಕು’ ಎಂದು ಮಾಡ ಶಿರವಾರ ಗ್ರಾಮದ ಬಸಮ್ಮ ಕಣ್ಣೀರಿಡುತ್ತಾರೆ.
ಇದೇ ರೀತಿ ಗೋಮರ್ಸಿ ಗ್ರಾಮದ ರೈತರಾದ ಶ್ರೀನಿವಾಸ, ಯಂಕನಗೌಡ, ಮಾಡ ಶಿರವಾರ ಗ್ರಾಮದ ನಾಗರಾಜ, ಕರಿಯಪ್ಪ, ಮೌಲಾಸಾಬ್ ತಾವು ಬೆಳೆದ ಜೋಳವನ್ನು ಚೀಲಗಳಲ್ಲಿ ತುಂಬಿ ನಿಟ್ ಹಾಕಿರುವುದನ್ನು ತೋರಿಸಿ ಚೀಲದಲ್ಲಿಯೇ ಜೋಳ ಮೊಳಕೆ ಬಂದಿರುವುದು ಮತ್ತು ಹುಳಗಳು ಆಗಿರುವುದಕ್ಕೆ ಅಧಿಕಾರಿಗಳ ವಿರುದ್ಧ ತಮ್ಮ ಒಡಲ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಪ್ರಾಂತ ರೈತ ಸಂಘ ಆಗ್ರಹ: ರಾಜ್ಯ ಸರ್ಕಾರ ಮಾರ್ಚ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಜೋಳ ಖರೀದಿಸಿದ್ದರೆ ರೈತರು ಬೆಳೆದ ಜೋಳದಲ್ಲಿ ಹುಳ ಬೀಳುತ್ತಿರಲಿಲ್ಲ. 15 ದಿನಗಳಿಂದ ತಂಪು ವಾತಾವರಣ ಮತ್ತು ಮಳೆಗೆ ಜೋಳದಲ್ಲಿ ಹುಳ ಕಾಣಿಸಿಕೊಂಡಿವೆ.
ಈ ಹುಳದಿಂದ ಶೇ 1ರಷ್ಟು ಮಾತ್ರ ಜೋಳಕ್ಕೆ ಹಾನಿಯುಂಟಾಗುತ್ತದೆ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವಿಜ್ಞಾನಿಗಳು ವರದಿ ಸಲ್ಲಿಸಿದ್ದಾರೆ. ಆದಾಗ್ಯೂ ರಾಜ್ಯ ಸರ್ಕಾರ ರೈತರ ಪರವಾದ ನಿರ್ಧಾರ ಕೈಗೊಳ್ಳಲು ಮೀನಾಮೇಷ ಮಾಡುತ್ತಿರುವುದು ಸರಿಯಲ್ಲ. ತಕ್ಷಣ ಈಗ ಇರುವ ಸ್ಥಿತಿಯಲ್ಲಿಯೇ ಜೋಳವನ್ನು ಖರೀದಿಸಬೇಕು. ಇಲ್ಲದಿದ್ದರೆ ಅನಿರ್ದಿಷ್ಟಾವಧಿ ಧರಣಿ ಕೂರುವ ಜೊತೆಗೆ ಮಿನಿವಿಧಾನಸೌಧ ಕಚೇರಿಗೆ ಬೀಗ ಹಾಕುವ ಚಳವಳಿ ನಡೆಸಬೇಕಾಗುತ್ತದೆ ಎಂದು ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸವಂತರಾಯಗೌಡ ಕಲ್ಲೂರು ಎಚ್ಚರಿಸಿದ್ದಾರೆ.
ಮುಂಗಾರು ಹಂಗಾಮಿನ ಪೈಕಿ 3.60 ಲಕ್ಷ ಕ್ವಿಂಟಲ್ ರೈತರ ಜೋಳ ಬಾಕಿ ಉಳಿದಿದ್ದು 2.50 ಲಕ್ಷ ಕ್ವಿಂಟಲ್ ಜೋಳ ಖರೀದಿ ನಡೆಯುತ್ತಿದೆ. ಹಿಂಗಾರು ಜೋಳ ಖರೀದಿಗೆ ಇರುವ ನಿಯಮ ಸಡಿಲಿಕೆಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಿದೆಶೃತಿ ಪ್ರಭಾತಿ ತಹಶೀಲ್ದಾರ್
‘ಅಧಿಕಾರಿಗಳಿಗೆ ಪರಿಸ್ಥಿತಿ ಮನವರಿಕೆ’
‘ಈಗಾಗಲೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕೃಷಿ ಇಲಾಖೆ ಸಚಿವರು ಮತ್ತು ಕಾರ್ಯದರ್ಶಿಗಳನ್ನು ಭೇಟಿಯಾಗಿ ಜೋಳ ಬೆಳೆದ ರೈತರ ಪರಿಸ್ಥಿತಿ ಮನವರಿಕೆ ಮಾಡಿದ್ದೇನೆ’ ಎಂದು ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು. ‘ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸಿ ಕೇಂದ್ರ ಸರ್ಕಾರದ ಉಗ್ರಾಣದವರು ಜೋಳ ಖರೀದಿಗೆ ವಿಧಿಸಿರುವ ನಿಯಮ ಸಡಿಲಿಸಿ ಪ್ರತಿ ಎಕರೆಗೆ 20 ಕ್ವಿಂಟಲ್ ಜೋಳ ಖರೀದಿಸುವಂತೆ ಗಮನ ಸೆಳೆದಿದ್ದೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.