ADVERTISEMENT

ವೀರಶೈವ ಪದ ತೆಗೆಯಲಿ ಎನ್ನುವುದು ಮೂರ್ಖತನ: ರಂಭಾಪುರಿ ಶ್ರೀ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2025, 14:25 IST
Last Updated 4 ಮಾರ್ಚ್ 2025, 14:25 IST
ಲಿಂಗಸುಗೂರು ತಾಲ್ಲೂಕಿನ ದೇವರಭೂಪುರ ತೋಪಿನಕಟ್ಟಿ ಮಠಕ್ಕೆ ಮಂಗಳವಾರ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹಾಗೂ ಕೇದಾರನಾಥ ಪೀಠದ  ಭೀಮಾಶಂಕರ ಲಿಂಗಸ್ವಾಮೀಜಿ ಭೇಟಿ ನೀಡಿದರು
ಲಿಂಗಸುಗೂರು ತಾಲ್ಲೂಕಿನ ದೇವರಭೂಪುರ ತೋಪಿನಕಟ್ಟಿ ಮಠಕ್ಕೆ ಮಂಗಳವಾರ ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹಾಗೂ ಕೇದಾರನಾಥ ಪೀಠದ  ಭೀಮಾಶಂಕರ ಲಿಂಗಸ್ವಾಮೀಜಿ ಭೇಟಿ ನೀಡಿದರು   

ಲಿಂಗಸುಗೂರು: ‘ವೀರಶೈವ ಲಿಂಗಾಯತ ಮಹಾಸಭಾದಲ್ಲಿನ ವೀರಶೈವ ಪದ ತೆಗೆದು ಲಿಂಗಾಯತವೊಂದೇ ಇರಲಿ ಎಂದಿರುವ ಹಿರಿಯ ಸಾಹಿತಿ ಗೋ.ರು.ಚೆನ್ನಬಸಪ್ಪ, ಶಿವಾನಂದ ಜಾಮದಾರ ಹಾಗೂ ಕೆಲ ಮಠಾಧೀಶರು ಹೇಳಿಕೆಯು ಮೂರ್ಖತನದಿಂದ ಕೂಡಿದೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ದೇವರಭೂಪುರ ತೋಪಿನಕಟ್ಟಿ ಮಠಕ್ಕೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ  ಮಾತನಾಡಿದ ಅವರು, ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ವಚನ ದರ್ಶನ ಮಿಥ್ಯ-ಸತ್ಯ ಗ್ರಂಥ ಬಿಡುಗಡೆ ಸಮಾರಂಭದಲ್ಲಿ ವೀರಶೈವ ಪದ ತೆಗೆದು ಬರೀ ಲಿಂಗಾಯತ ಇರಲಿ ಎಂದು ಹಿರಿಯ ಸಾಹಿತಿ ಗೋ.ರು.ಚೆನ್ನಬಸಪ್ಪ, ಶಿವಾನಂದ ಜಾಮದಾರ ಹಾಗೂ ಕೆಲವು ಮಠಾಧೀಶರು ಹೇಳಿಕೆ ನೀಡಿದ್ದು ಖಂಡನೀಯ. ವೀರಶೈವ ಪದ ಅನಾದಿ ಕಾಲದಿಂದಲೂ ಇದೆ. ಮೊದಲು ವೀರಶೈವ ಮಹಾಸಭಾ ಎಂದಿತ್ತು. ವೀರಶೈವ– ಲಿಂಗಾಯತರು ಒಂದೇ ನಾಣ್ಯದ ಎರಡು ಮುಖವಿದ್ದಂತೆ. ಈ ಹಿನ್ನಲೆಯಲ್ಲಿ ವೀರಶೈವ ಲಿಂಗಾಯತ ಮಹಾಸಭಾ ಎಂದು ಸಂಘಟನೆ ಮುನ್ನಡೆಸಲಾಗುತ್ತಿದ್ದರೂ ಪಂಚಪೀಠಗಳು ಒಪ್ಪಿಗೆ ಸೂಚಿಸಿದ್ದವು. ಆದರೆ ಈಗ ವೀರಶೈವ ಪದವನ್ನೇ ತೆಗೆಯುವಂತೆ ಹೇಳುತ್ತಿರುವುದು ಸಣ್ಣತನ ಹಾಗೂ ಮೂರ್ಖತನದ ವಿಚಾರವಾಗಿದೆ’ ಎಂದು ತಿಳಿಸಿದರು.

‘ಕೆಲವರು ಜಾಗತಿಕ ಲಿಂಗಾಯತ ಮಹಾಸಭಾ ಕಟ್ಟಿಕೊಂಡು ಜಾತಿ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಬಸವಣ್ಣನವರ ಚಿಂತನೆಗಳನ್ನು ಗಾಳಿಗೆ ತೂರಿ ಅವರನ್ನೇ ವ್ಯಾಪಾರದ ವಸ್ತು ಮಾಡಿಕೊಂಡಿದ್ದಾರೆ. ಪಂಚಪೀಠಗಳು ವೀರಶೈವ ಧರ್ಮ ಉಳಿವಿಗಾಗಿ ಶ್ರಮಿಸುತ್ತಿವೆ. ಆದರೆ ಕೆಲವರು ವೈಯಕ್ತಿಕ ಲಾಭಕ್ಕಾಗಿ ವಿನಾಕಾರಣ ಗೊಂದಲ ಸೃಷ್ಟಿ ಮಾಡಿ ಧರ್ಮ ಒಡೆಯುವ ಕೆಲಸ ಮಾಡುತ್ತಿದ್ದಾರೆ. ಇಂತಹ ಕೆಲಸ ಮಾಡುವುದನ್ನು ಬಿಡಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಜಗದ್ಗುರು ಪಂಚಾಚಾರ್ಯರನ್ನು ಟೀಕೆ ಮಾಡುವುದೇ ಕೆಲವರ ಕೆಲಸವಾಗಿದೆ. ಬಸವಣ್ಣನವರ ಸಪ್ತ ಸೂತ್ರ ಹೇಳಿದ್ದಾರೆ. ಆದರೆ ಏಳರಲ್ಲಿ ಹುಸಿ ನುಡಿಯಬೇಡ ಎಂಬ ಸೂತ್ರವನ್ನು ಜಾಗತಿಕ ಲಿಂಗಾಯತ ಮಹಾಸಭಾದವರು ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.

‘ವೀರಶೈವ ಯಾರಪ್ಪನ ಸ್ವತ್ತಲ್ಲ’: 

‘ವೀರಶೈವ ಪದ ತೆಗೆಯಲು ಅದು ಅವರ ಅಪ್ಪನ ಆಸ್ತಿಯಲ್ಲ. ಅದು ಧರ್ಮದ ಆಸ್ತಿಯಾಗಿದೆ. ಗೋ.ರು.ಚೆನ್ನಬಸಪ್ಪ ಅವರ ಅಪೂರ್ವ ಸಂಗಮ ಕೃತಿಯಲ್ಲಿ ವೀರಶೈವ ಎಂಬ ಪದ ಉಲ್ಲೇಖ ಮಾಡಿದ್ದಾರೆ. ಚಪಲಕ್ಕಾಗಿ ವೀರಶೈವ ಪದ ತೆಗೆಯಲಿ ಎಂದು ಹೇಳುತ್ತಿರುವುದು ಸರಿಯಲ್ಲ. ವೀರಶೈವ ಪದ ತೆಗೆದು ಹಾಕಲಿ ಎಂದು ಯಾವ ಆಧಾರ ಮೇಲೆ ಹೇಳಿಕೆ ನೀಡಿದ್ದೀರಿ ಎಂದು ಸ್ಪಷ್ಟಪಡಿಸಬೇಕು’ ಎಂದು ಕೇದಾರನಾಥ ಪೀಠದ ಭೀಮಾಶಂಕರ ಲಿಂಗಸ್ವಾಮೀಜಿ ಒತ್ತಾಯಿಸಿದ್ದಾರೆ.

ಈ ವೇಳೆ ಅಭಿನವ ಗಜದಂಡ ಶಿವಾಚಾರ್ಯ, ನಾವದಗಿ ಶ್ರೀ, ಹುನುಕುಂಟಿ ಶರಣಯ್ಯ ತಾತ, ಅಮರಯ್ಯಸ್ವಾಮಿ ಜಾಲಿಬೆಂಚಿ, ಗಂಗಾಧರಯ್ಯ ಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.