ADVERTISEMENT

ಒಪ್ಪೊತ್ತಿನ ಗಂಜಿಗೆ ನಡುಗಡ್ಡೆ ತೊರೆಯುವುದಿಲ್ಲ: ಕೃಷ್ಣಾ ನಡುಗಡ್ಡೆ ಸಂತ್ರಸ್ತರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 7:24 IST
Last Updated 25 ಜುಲೈ 2024, 7:24 IST
ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿಯ ಕರಡಕಲಗಡ್ಡಿಯಲ್ಲಿ ಬದುಕು ಕಟ್ಟಿಕೊಂಡ ಕುಟುಂಬ
ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿಯ ಕರಡಕಲಗಡ್ಡಿಯಲ್ಲಿ ಬದುಕು ಕಟ್ಟಿಕೊಂಡ ಕುಟುಂಬ   

ಲಿಂಗಸುಗೂರು: ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳಲ್ಲಿನ ಸಂತ್ರಸ್ತ ಕುಟುಂಬಸ್ಥರ ಶಾಶ್ವತ ಸ್ಥಳಾಂತರ ಕಾರ್ಯ ವರ್ಷದಿಂದ ವರ್ಷಕ್ಕೆ ಕಬ್ಬಿಣದ ಕಡಲೆಯಾಗಿ ಪರಿಣಮಿಸುತ್ತಿದೆ. ಒಪ್ಪೊತ್ತಿನ ಗಂಜಿಗಾಗಿ ನಡುಗಡ್ಡೆಯ ಜೋಪಡಿ, ಆಸ್ತಿ ಹಾಗೂ ದನಕರುಗಳನ್ನು ತೊರೆಯುವುದಿಲ್ಲ ಎಂದು ಸಂತ್ರಸ್ತ ಕುಟುಂಬಸ್ಥರು ಸಂದೇಶ ರವಾನಿಸಿದ್ದಾರೆ.

ಕರಕಲಗಡ್ಡಿ 03 ಕುಟುಂಬದ 22 ಜನ, ಮ್ಯಾದರಗಡ್ಡಿಯ 10 ಕುಟುಂಬದ 68 ಜನ, ವಂಕಮ್ಮನಗಡ್ಡಿ 02 ಕುಟುಂಬದ 14 ಜನರನ್ನು ಸ್ಥಳಾಂತರಿಸಬೇಕು. ನಡುಗಡ್ಡೆ ಆಸ್ತಿಗೆ ಸಮಾನವಾಗಿ ಬೇರೆ ಕಡೆಗೆ ಆಸ್ತಿ ಹಾಗೂ ಮನೆ ನೀಡಿ ಸ್ಥಳಾಂತರ ಮಾಡಬೇಕು ಎಂದು ಸಂತ್ರಸ್ತರು ಪಟ್ಟು ಹಿಡಿದಿದ್ದರು. ನಾಲ್ಕು ದಶಕಗಳಲ್ಲಿ ಯಾವೊಂದು ಸರ್ಕಾರ ಸ್ಪಷ್ಟ ನಿರ್ಣಯ ತೆಗೆದು ಕೊಳ್ಳದಿರುವುದು ಸಂತ್ರಸ್ತರ ಆಕ್ರೋಶಕ್ಕೆ ದಾರಿ ಮಾಡಿಕೊಟ್ಟಿದೆ.

ಆರಂಭದಲ್ಲಿ ಯಳಗುಂದಿ ಸರ್ಕಾರಿ ಜಮೀನು ಗುರುತಿಸಿ ಬಡಾವಣೆ ನಿರ್ಮಿಸಿ ಅಗತ್ಯ ಸೌಲಭ್ಯ ಕಲ್ಪಿಸಲು ಸಿದ್ಧತೆಗಳು ನಡೆದವು. ಒಂದು ಹಂತದಲ್ಲಿ 2019ರಲ್ಲಿ ಮ್ಯಾದರಗಡ್ಡಿಯ 06 ಕುಟುಂಬ ಮತ್ತು ಕಡದರಗಡ್ಡಿಯ 05 ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ನೀಡಲಾಗಿದೆ. ಅಕ್ರಮ ಸಾಗುವಳಿದಾರನ ತಕರಾರು ಬಗೆಹರಿಸಿ ನಿವೇಶನ ಹಂಚಿಕೆ ಮಾಡುವಲ್ಲಿ ಆಡಳಿತ ಸಂಪೂರ್ಣ ವಿಫಲವಾದದ್ದು ಸ್ಥಳಾಂತರಕ್ಕೆ ಅಡ್ಡಿಯಾಗಿದೆ.

ADVERTISEMENT

‘ನಡುಗಡ್ಡೆಗಳಿಂದ ಶಾಶ್ವತ ಸ್ಥಳಾಂತರಕ್ಕೂ ಮುಂದಾಗದೆ, ಪ್ರತಿ ವರ್ಷ ಪ್ರವಾಹ ಸಂದರ್ಭದಲ್ಲಿ ವಾಸ್ತವ್ಯಕ್ಕೂ ಬಿಡದೆ ಒಕ್ಕಲೆಬ್ಬಿಸುತ್ತಿದ್ದಾರೆ. ಕುರಿ, ಮೇಕೆ, ಜಾನುವಾರು ಸಮೇತ ಸುಂದರ ಬದುಕು ಕಟ್ಟಿಕೊಂಡ ನಮಗೆ ಪ್ರವಾಹ ಒಪ್ಪೊತ್ತಿನ ಗಂಜಿಗೂ ಗತಿ ಇಲ್ಲದಂತೆ ಸಂಕಷ್ಟ ತಂದೊಡ್ಡಿದೆ. ವರ್ಷಕ್ಕೊಂದು ನೆಪ ಮುಂದಿಟ್ಟು ಕಾಲ ಹರಣ ಮಾಡುತ್ತಿದ್ದಾರೆ’ ಎಂದು ಮಲ್ಲಪ್ಪ, ದೇವಮ್ಮ ಕಣ್ಣೀರಿಟ್ಟಿದ್ದಾರೆ.

‘ಹದಿನೈದು ಸಂತ್ರಸ್ತ ಕುಟುಂಬಸ್ಥರು ಅಂದಾಜು 75 ಎಕರೆ ಜಮೀನು ಹೊಂದಿದ್ದಾರೆ. ಅಷ್ಟೇ ಫಲವತ್ತಾದ ಜಮೀನು ನೀಡಿ, ಬಡಾವಣೆ ನಿರ್ಮಿಸಿ ಸ್ಥಳಾಂತರ ಮಾಡಬೇಕು ಎಂದು ಹೋರಾಟ ನಡೆಸಲಾಗುತ್ತಿದೆ. ಆಡಳಿತ ಸ್ಪಷ್ಟ ನಿರ್ಣಯ ಕೈಗೊಳ್ಳದೆ, ಪ್ರವಾಹಕ್ಕೆ ಸಿಲುಕಿ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರವೂ ನೀಡದೆ ನಿರ್ಲಕ್ಷ್ಯಿಸುತ್ತಿದೆ’ ಎಂದು ದಲಿತ ಸಂಘರ್ಷ ಸಮಿತಿ ಸಂಚಾಲಕ ಹನುಮಂತಪ್ಪ ವೆಂಕಟಾಪುರ ಅಸಮಾಧಾನ ವ್ಯಕ್ತಪಡಿಸಿದರು.

ಈ ಕುರಿತು ತಹಶೀಲ್ದಾರ್ ಶಂಶಾಲಂ ಅವರನ್ನು ಸಂಪರ್ಕಿಸಿದಾಗ, ‘ಕೃಷ್ಣಾ ನದಿ ನಡುಗಡ್ಡೆ ಪ್ರದೇಶದ ಸ್ಥಳಾಂತರ ಕುರಿತಂತೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ಸದ್ಯ ಯಾವ ಹಂತದಲ್ಲಿದೆ ಎಂಬುದು ದಾಖಲೆಗಳ ಪರಿಶೀಲನೆ ನಂತರ ತಿಳಿದು ಬರುತ್ತದೆ. ಈ ಕುರಿತು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿಯ ಮ್ಯಾದರಗಡ್ಡಿಯಲ್ಲಿ ಕುರಿ ಮೇಕೆಗಳನ್ನು ಪ್ರವಾಹದಿಂದ ರಕ್ಷಿಸಲು ಜಾಲಿ ಹಾಕಿ ರಕ್ಷಣೆ ಮಾಡಿರುವುದು
ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿಯ ವಂಕಮ್ಮನಗಡ್ಡಿಯಲ್ಲಿ ಪ್ರವಾಹದ ಭೀತಿ ಮಧ್ಯೆಯು ಜಾನುವಾರುಗಳು ಮೇವಿಗಾಗಿ ಹುಡುಕಾಟ ನಡೆಸಿರುವುದು

ನಡುಗಡ್ಡೆ ಗ್ರಾಮಗಳ ಕಥೆ–ವ್ಯಥೆ

ಮಹಾರಾಷ್ಟ್ರದಲ್ಲಿ ಅತಿವೃಷ್ಟಿಯಾಗುತ್ತಲೇ ಲಿಂಗಸುಗೂರು ತಾಲ್ಲೂಕಿನ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಆತಂಕ ಶುರುವಾಗುತ್ತದೆ. ಕೃಷ್ಣಾ ನದಿಗೆ ಮಹಾಪುರ ಬಂದ ತಕ್ಷಣ ಬದುಕು ಮೂರಾಬಟ್ಟೆಯಾಗುತ್ತದೆ. ಅಧಿಕಾರಿಗಳು ಕಾಟಾಚಾರಕ್ಕೆ ಎಂಬಂತೆ ಕೆಲಸ ಮಾಡಿದರೆ ಜನಪ್ರತಿನಿಧಿಗಳು ನಡುಗಡ್ಡೆ ವಾಸಿಗಳ ಸಮಸ್ಯೆಗಳನ್ನು ಇಂದಿಗೂ ಗಂಭೀರವಾಗಿ ಪರಿಗಣಿಸಿಲ್ಲ. ನಡುಗಡ್ಡೆ ವಾಸಿಗಳ ಸ್ಥಿತಿ–ಗತಿಗಳ ಮೇಲೆ ಬೆಳಕು ಚೆಲ್ಲುವ ನಡುಗಡ್ಡೆಗಳ ಸರಣಿ ಇಂದಿನಿಂದ ಶುರುವಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.