ADVERTISEMENT

ಸೌಲಭ್ಯ, ಚಿಕಿತ್ಸೆಗೆ ಪರದಾಡುವ ದಂಪತಿ; ಅಸಹಾಯಕವಾದ ಬುದ್ಧಿಮಾಂದ್ಯ ಮಕ್ಕಳ ಕುಟುಂಬ

ಕುಟುಂಬದ ಗೋಳು ಕೇಳುವವರು ಯಾರು

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 24 ಮೇ 2019, 19:45 IST
Last Updated 24 ಮೇ 2019, 19:45 IST
ಲಿಂಗಸುಗೂರು ತಾಲ್ಲೂಕು ರಾಮಲೂಟಿಯಲ್ಲಿ ಪರಮಣ್ಣ ದುರುಗಮ್ಮ ದಂಪತಿಗೆ ಜನಿಸಿದ ಮೂರು ಮಕ್ಕಳು ಹುಟ್ಟಿನಿಂದಲೆ ಬುದ್ದಿಮಾಂದ್ಯ ಮತ್ತು ಬಹುಅಂಗವಿಕಲತೆಯಿಂದ ಬಳಲುತ್ತಿದ್ದಾರೆ
ಲಿಂಗಸುಗೂರು ತಾಲ್ಲೂಕು ರಾಮಲೂಟಿಯಲ್ಲಿ ಪರಮಣ್ಣ ದುರುಗಮ್ಮ ದಂಪತಿಗೆ ಜನಿಸಿದ ಮೂರು ಮಕ್ಕಳು ಹುಟ್ಟಿನಿಂದಲೆ ಬುದ್ದಿಮಾಂದ್ಯ ಮತ್ತು ಬಹುಅಂಗವಿಕಲತೆಯಿಂದ ಬಳಲುತ್ತಿದ್ದಾರೆ   

ಲಿಂಗಸುಗೂರು: ತಾಲ್ಲೂಕಿನ ರಾಮಲೂಟಿ ಗ್ರಾಮದಲ್ಲಿ ಒಂದೇ ಕುಟುಂಬದಲ್ಲಿ ಮೂರು ಮಕ್ಕಳು ಬುದ್ಧಿಮಾಂದ್ಯಮತ್ತು ಬಹು ಅಂಗವಿಕಲತೆಯಿಂದ ಬಳಲುತ್ತಿದ್ದು ಕನಿಷ್ಠ ಸೌಲಭ್ಯ ಮತ್ತು ಚಿಕಿತ್ಸೆ ಸಿಗಬಹುದು ಎನ್ನುವ ಪಾಲಕರ ನಿರೀಕ್ಷೆ ಹುಸಿಯಾಗಿದ್ದು, ಅವರಪರದಾಟವು ಮನ ಕಲಕುತ್ತದೆ.

ಗುರುಗುಂಟಾ ಹೋಬಳಿಯ ರಾಮಲೂಟಿಯಲ್ಲಿ ಪರಮಣ್ಣ ಮಲ್ಲಪ್ಪ ಕಕ್ಕೇರಿ ಮತ್ತು ದುರುಗಮ್ಮಪರಮಣ್ಣ ದಂಪತಿ ಕುಟುಂಬಕ್ಕೆ ಇರುವ ಎರಡು ಎಕರೆ ಜವಳು ಭೂಮಿ ಇದೆ. ಅದರಲ್ಲಿ ಹಿಡಿ ಕಾಳು ಬೆಳೆಯದೆಗ್ರಾಮದಲ್ಲಿಯೆ ಕೂಲಿ ಮಾಡಿಕೊಂಡು ಮಕ್ಕಳನ್ನು ಜೋಪಾನ ಮಾಡುತ್ತ ಸಂಕಷ್ಟದ ಬದುಕುಕಟ್ಟಿಕೊಂಡಿದ್ದಾರೆ. ದಂಪತಿಯ ಪೈಕಿ ಒಬ್ಬರು ಕೂಲಿಗೆ ಹೋದರೆ ಒಬ್ಬರು ಮಕ್ಕಳನ್ನು ಜೋಪಾನ ಮಾಡುವ ಅನಿವಾರ್ಯತೆ ಇದೆ.

ಈ ದಂಪತಿಗೆ ಮಾಳಪ್ಪ (14), ಬಸವರಾಜ (10), ರೇಣಮ್ಮ (9) ಎಂಬ ಮೂರು ಮಕ್ಕಳಿದ್ದಾರೆ. ಮೂವರು ಹುಟ್ಟುತ್ತಲೆ ಬುದ್ದಿಮಾಂದ್ಯ, ಬಹುಅಂಗವಿಕಲತೆ ಶಾಪದಿಂದನರಳಾಡುತ್ತಿವೆ. ಮಕ್ಕಳ ಚಿಂತಾಜನಕ ಸ್ಥಿತಿಯನ್ನು ನೋಡಿದವರು ಕಣ್ಣೀರಿಟ್ಟು ಹೀಗಾಗಬಾರದಿತ್ತುಎಂದು ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿರುವುದು ಬಿಟ್ಟರೆ ಬೇರೆ ಸಹಾಯಕ್ಕೂ ಮುಂದಾಗುತ್ತಿಲ್ಲ.

ADVERTISEMENT

‘ಹಿರಿಯ ಮಗ ಮಾಳಪ್ಪ ಹುಟ್ಟಿದಾಗಲೆ ಬುದ್ದಿಮಾಂದ್ಯ ಮತ್ತು ಅಂಗವಿಕಲತೆ ಹೊಂದಿದ್ದ.ಆಗಿನಿಂದಲೆ ಚಿಕಿತ್ಸೆ ಕೊಡಿಸುತ್ತ ಬರಲಾಗಿದೆ. ಆನಂತರದಲ್ಲಿ ಜನಿಸಿದ ಬಸವರಾಜ, ರೇಣಮ್ಮ ಕೂಡ ಇಂತಹುದೆ ಕಾಯಿಲೆಯಿಂದ ಬಳಲುತ್ತಿದ್ದಾರೆ. ರಾಯಚೂರು, ವಿಜಯಪುರದ ಸರ್ಕಾರಿ, ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿ ಸಾಕಾಗಿ ಎಲ್ಲವೂ ಹಣೆಬರಹ ಎಂದು ಮೌನಕ್ಕೆಶರಣಾಗಿದ್ದೇವೆ’ ಎಂದು ಪರಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.

‘ಬುದ್ದಿಮಾಂದ್ಯ ಮಕ್ಕಳ ಚಿಕಿತ್ಸೆ, ಕುಟುಂಬ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ.ದಂಪತಿ ಪೈಕಿ ಒಬ್ಬರೆ ಕೂಲಿ ಮಾಡಿ ತರುವ ಹಣದಿಂದ ಕುಟುಂಬ ನಿರ್ವಹಣೆ ಸಾಧ್ಯವಾಗುತ್ತಿಲ್ಲ. ಕೆಲ ತಿಂಗಳಿಂದ ಎರಡು ಮಕ್ಕಳಿಗೆ ಅಂಗವಿಕಲ ಮಾಸಾಶನ ಬರುತ್ತಿದೆ.ಅದರಲ್ಲಿಯೆ ತುತ್ತಿನ ಚೀಲ ತುಂಬಿಸಿಕೊಳ್ಳುತ್ತ ದಿನಗಳ ಕಳೆಯುತ್ತಿದ್ದೇವೆ’ ಎಂದುದುರುಗಮ್ಮ ಕಣ್ಣೀರಿಡುತ್ತ ಹೇಳಿದರು.

‘ಬುದ್ದಿಮಾಂದ್ಯ ಮತ್ತು ಬಹುಅಂಗವಿಕಲತೆ ಹೆಚ್ಚಾಗಿ ಸಂಬಂಧಿಗಳಲ್ಲಿಯೆ ಮದುವೆಮಾಡುವುದರಿಂದ ಸಹಜ ಕಾಯಿಲೆಯಾಗಿದೆ. ಕೆಲ ಸಂದರ್ಭಗಳಲ್ಲಿ ಆಹಾರ ಪದ್ಧತಿ, ಮಹಿಳೆಗರ್ಭಚೀಲದಲ್ಲಿ ಅಂಗಾಂಗಳ ಬೆಳವಣಿಗೆಗೆ ಪೂರಕ ವಾತಾವರಣ ಇರದಿರುವುದು, ವೈರಲ್‌ಡಿಸೀಜ್‌, ಕ್ರೊಮೊಜೋಮ್ಸ್‌ನಂತ ಇತರೆ ಕಾರಣಗಳು ಇರಬಹುದು’ ಎನ್ನುತ್ತಾರೆ ತಾಲ್ಲೂಕುಆರೋಗ್ಯಾಧಿಕಾರಿ ಡಾ. ರುದ್ರಗೌಡ ಪಾಟೀಲ.

ನವಜೀವನ ಅಂಗವಿಕಲರ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷ ವಿರುಪಾಕ್ಷಯ್ಯ ಕಾಳಾಪುರ, ಮುಖಂಡರಾದ ಅಸ್ಕಿಹಾಳ ನಾಗರಾಜ ಅವರನ್ನು ಪ್ರಜಾವಾಣಿಗೆ ಸಂಪರ್ಕಿಸಿದಾಗ ‘ತಮಗೆ ರಾಮಲೂಟಿಯ ಕಕ್ಕೇರಿ ಕುಟುಂಬದವರ ಬಗ್ಗೆ ಮಾಹಿತಿ ದೊರೆತಿಲ್ಲ. ಬುದ್ದಿಮಾಂದ್ಯ ಕುಟುಂಬಸ್ಥರನ್ನು ಸಂಪರ್ಕಿಸಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಾಧ್ಯವಾದ ಸೌಲಭ್ಯಕೊಡಿಸಲು ಪ್ರಯತ್ನಿಸುವುದಾಗಿ’ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.