ADVERTISEMENT

ಉಪಕೇಂದ್ರದಲ್ಲಿ ಬೆಂಕಿ; ವಿದ್ಯುತ್‌ ಇಲ್ಲದೇ ಪರದಾಡಿದ ಜನ

ತಾಪಮಾನ ಹೆಚ್ಚಿದ್ದರಿಂದ ಹೊತ್ತಿ ಉರಿದ ಟಿಸಿ?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2024, 15:27 IST
Last Updated 30 ಮಾರ್ಚ್ 2024, 15:27 IST
ರಾಯಚೂರಿನ ಕೆಇಬಿ ಕಾಲೊನಿಯಲ್ಲಿರುವ 220 ಕೆವಿ ಸಬ್ ಸ್ಟೇಷನ್‌ನಲ್ಲಿ ಬೆಂಕಿಗೆ ಆಹುತಿಯಾಗಿದ್ದ ಟಿಸಿಯನ್ನು ಜೆಸ್ಕಾಂ ಸಿಬ್ಬಂದಿ ಶನಿವಾರ ದುರಸ್ತಿ ಮಾಡಿದರು.
ರಾಯಚೂರಿನ ಕೆಇಬಿ ಕಾಲೊನಿಯಲ್ಲಿರುವ 220 ಕೆವಿ ಸಬ್ ಸ್ಟೇಷನ್‌ನಲ್ಲಿ ಬೆಂಕಿಗೆ ಆಹುತಿಯಾಗಿದ್ದ ಟಿಸಿಯನ್ನು ಜೆಸ್ಕಾಂ ಸಿಬ್ಬಂದಿ ಶನಿವಾರ ದುರಸ್ತಿ ಮಾಡಿದರು.   

ರಾಯಚೂರು: ನಗರದ ಲಿಂಗಸುಗೂರು ರಸ್ತೆಯ ಕೆಇಬಿ ಕಾಲೊನಿಯಲ್ಲಿರುವ 220 ಕೆವಿ ಸ್ಟೇಷನ್‌ನಲ್ಲಿ ಶುಕ್ರವಾರ ರಾತ್ರಿ ಬೆಂಕಿ ಅವಘಡ ಸಂಭವಿಸಿ ಮೂರು ಟ್ರಾನ್ಸ್‌ಫಾರ್ಮರ್‌ಗಳು ಹೊತ್ತಿ ಉರಿದಿವೆ. ಸ್ಟೇಷನ್‌ನಲ್ಲಿರುವ ವೈರ್‌ಗಳು ಸಹ ಬೆಂಕಿಗೆ ಸುಟ್ಟು ಕರಕಲಾಗಿವೆ.

ರಾತ್ರಿ 11 ಗಂಟೆಗೆ ಕೆಇಬಿ ಕಾಲೊನಿ 220 ಕೆವಿ ಸಬ್ ಸ್ಟೇಷನ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ವಿದ್ಯುತ್‌ ಸ್ಥಗಿತವಾಗಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕತ್ತಲು ಆವರಿಸಿತ್ತು. ಹಲವು ಗಂಟೆಗಳ ಕಾಳ ವಿದ್ಯುತ್ ಕಡಿತದಿಂದಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಬೇಕಾಯಿತು. ಬೆಳಿಗ್ಗೆ ಕೆಂಡದಂತಹ ಬಿಸಿಲು ಹಾಗೂ ರಾತ್ರಿ ಧಗೆ ಕಾಡುತ್ತಿದೆ. ಈ ನಡುವೆಯೇ ವಿದ್ಯುತ್‌ ಕೈಕೊಟ್ಟ ಕಾರಣ ಜನ ನಿದ್ರಿಸಲಾಗದೇ ಹಿಂಸೆ ಅನುಭವಿಸುವಂತಾಯಿತು.

‘ರಾಯಚೂರಲ್ಲಿ ತಾಪಮಾನ 40ರಿಂದ 44 ಡಿಗ್ರಿ ಸೆಲ್ಸಿಯಸ್‌ ಇದೆ. ಬಿಸಿಯಾದ ವಾತಾವರಣ ಹಾಗೂ ತಾಂತ್ರಿಕ ಸಮಸ್ಯೆಯಿಂದ ಬೆಂಕಿ ಹೊತ್ತಿಕೊಂಡಿರಬಹುದು. ಜೆಸ್ಕಾಂ ಸಿಬ್ಬಂದಿ ನಿರಂತರ ಪ್ರಯತ್ನ ನಡೆಸಿ ಲೈನ್‌ಗಳನ್ನು ಬೈಪಾಸ್ ಮಾಡುವ ಮೂಲಕ ವಿದ್ಯುತ್ ಸರಬರಾಜು ಮಾಡಿದ್ದಾರೆ’ ಎಂದು ಸಬ್ ಸ್ಟೇಷನ್‌ನ ಎಇಇ ರಾಜೇಶ್ ತಿಳಿಸಿದರು.

ADVERTISEMENT

ಪರ್ಯಾಯ ಮಾರ್ಗಗಳ ಮೂಲಕ ಬೆಳಗಿನ ಜಾವ 2 ಗಂಟೆಗೆ ನಗರಕ್ಕೆ ವಿದ್ಯುತ್‌ ಸರಬರಾಜು ಮಾಡಲಾಯಿತು. ಬೆಳಗಿನ ಜಾವ 5 ಗಂಟೆಯ ವೇಳೆಗೆ ಸಂಪೂರ್ಣ ಲೈನ್‌ ದುರಸ್ತಿ ಪಡಿಸಿ ನಗರ ಹಾಗೂ ಹೊರ ವಲಯದ ಪ್ರದೇಶಕ್ಕೂ ವಿದ್ಯುತ್‌ ಪೂರೈಕೆ ಮಾಡಲಾಗಿದೆ.

ಅಗ್ನಿ ಸಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ. ಯಾವುದೇ ಜೀವ ಹಾನಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.