ರಾಯಚೂರು: ತಾಲ್ಲೂಕಿನ ದೇವಸೂಗೂರು ಬಳಿಯ ಹೈದರಾಬಾದ್ ರಸ್ತೆಯ ಕೃಷ್ಣ ನದಿ ಮೇಲ್ಸೇತುವೆ ಮೇಲೆ ಜ.12ರಿಂದ ವಾಹನ ಸಂಚಾರ ನಿಷೇಧ ಮಾಡಿದ್ದನ್ನು ರದ್ದುಗೊಳಿಸಿ 17ರ ವರೆಗೆ ಅವಕಾಶ ಕಲ್ಪಿಸಲಾಗಿದೆ.
ಸಂಕ್ರಾಂತಿ ಹಬ್ಬ ಮತ್ತು ಯಾದಗಿರಿಯ ಮೈಲಾಪೂರು ಜಾತ್ರೆಯ ಹಿನ್ನಲೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಈ ಕುರಿತು ಜಿಲ್ಲಾಧಿಕಾರಿ ಚಂದ್ರಶೇಖರ ನಾಯಕ ಅವರ ಜೊತೆ ಚರ್ಚೆಸಲಾಗಿದೆ ಎಂದು ಶಾಸಕ ಡಾ.ಶಿವರಾಜ ಪಾಟೀಲ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ಕಳೆದ ಒಂದು ವಾರದ ಹಿಂದೆ ಕೃಷ್ಣನದಿ ಸೇತುವೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಇದೇ ಜ.10ರಿಂದ ರಸ್ತೆ ಸಂಚಾರ ಬಂದ್ ಮಾಡಲು ಸಭೆ ಮಾಡಿ ತಿಳಿಸಲಾಗಿತ್ತು. ಕೃಷ್ಣ ನದಿ ಸೇತುವೆಯಿಂದ ಸಂಚಾರ ಬಂದ್ ಮಾಡಿದ ಕಾರಣ ಹೈದರಾಬಾದ್ ಗೆ ತೆರಳುವ ಬಸ್ ಗದ್ವಾಲ್– ಪಬ್ಬೇರ್ ಕೊತ್ತಕೋಟ ಮಾರ್ಗವಾಗಿ 38 ಕಿ. ಮೀ ಸುತ್ತುವರೆದು ಪ್ರಯಾಣ ಮಾಡಿದರೆ ರಾಯಚೂರಿನಿಂದ ಯಾದಗಿರಿ– ಕಲಬುರಗಿಗೆ ತೆರಳಲು ದೇವದುರ್ಗ, ಹೂವಿನಹಡಗಿ ಸೇತುವೆ ಮೂಲಕ ಪ್ರಯಾಣ ಬೆಳೆಸಬೇಕಿದೆ.
ಸಂಕ್ರಾಂತಿಯ ಸಂದರ್ಭದಲ್ಲಿ ಕೃಷ್ಣನದಿಯಲ್ಲಿ ಸ್ನಾನ ಮಾಡುವ ಕಾರಣ ಜ.17ರ ವರೆಗೆ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.