ADVERTISEMENT

ಸಹಜ ಸ್ಥಿತಿಯತ್ತ ಸಾರಿಗೆ ವ್ಯವಸ್ಥೆ

ಗೊಂದಲಗಳ ಮಧ್ಯೆಯೂ ಸರ್ಕಾರಿ ಬಸ್‌ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2020, 11:36 IST
Last Updated 14 ಡಿಸೆಂಬರ್ 2020, 11:36 IST
ರಾಯಚೂರು ಕೇಂದ್ರ ಬಸ್‌ ನಿಲ್ದಣಕ್ಕೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಸೋಮವಾರ ಭೇಟಿನೀಡಿ ಪರಿಶೀಲಿಸಿದರು
ರಾಯಚೂರು ಕೇಂದ್ರ ಬಸ್‌ ನಿಲ್ದಣಕ್ಕೆ ಜಿಲ್ಲಾಧಿಕಾರಿ ಆರ್‌.ವೆಂಕಟೇಶಕುಮಾರ್‌ ಅವರು ಸೋಮವಾರ ಭೇಟಿನೀಡಿ ಪರಿಶೀಲಿಸಿದರು   

ರಾಯಚೂರು: ಸರ್ಕಾರಿ ಬಸ್‌ ಚಾಲಕರು ಮತ್ತು ನಿರ್ವಾಹಕರು ಆರಂಭಿಸಿರುವ ಮುಷ್ಕರಕ್ಕೆ ಸಂಬಂಧಿಸಿದಂತೆ ಹಲವು ಗೊಂದಲಗಳ ನಿರ್ಮಾಣವಾದರೂ ಸೋಮವಾರ ಬೆಳಿಗ್ಗೆಯಿಂದಲೇ ರಾಯಚೂರಿನ ಎಲ್ಲ ಎಂಟು ಡಿಪೋಗಳಿಂದ ಕೆಲವು ಸರ್ಕಾರಿ ಬಸ್‌ಗಳು ಸಂಚಾರ ಆರಂಭಿಸಿದ್ದವು.

ಮುಷ್ಕರ ಅಂತ್ಯವಾಗುತ್ತಿದ್ದಂತೆ ಸೋಮವಾರ ಸಂಜೆಯಿಂದ ಜಿಲ್ಲೆಯಲ್ಲಿ ಸರ್ಕಾರಿ ಬಸ್ಸುಗಳ ಸಂಚಾರ ವ್ಯವಸ್ಥೆಯು ಸಹಜ ಸ್ಥಿತಿಯತ್ತ ಮರಳುತ್ತಿದೆ. ನೌಕರರೆಲ್ಲ ಕರ್ತವ್ಯಕ್ಕೆ ಮರಳುತ್ತಿದ್ದು, ಬಹುತೇಕ ಬುಧವಾರದಿಂದ ವೇಳಾಪಟ್ಟಿಯಂತೆ ಬಸ್ಸುಗಳು ಸಂಚರಿಸಲಿವೆ.
ರಾಜ್ಯ ಸರ್ಕಾರದ ಪರವಾಗಿ ಸಚಿವರಾದ ಆರ್‌.ಅಶೋಕ, ಬಸವರಾಜ ಬೊಮ್ಮಾಯಿ ಹಾಗೂ ಲಕ್ಷ್ಮಣ ಸವದಿ ಅವರು ನೀಡಿದ್ದ ಹೇಳಿಕೆಯನ್ನು ಮನ್ನಿಸಿ ಕೆಲವು ಚಾಲಕರು ಮತ್ತು ನಿರ್ವಾಹಕರು ಮುಷ್ಕರ ಅಂತ್ಯಗೊಳ್ಳುವ ಮೊದಲೇ ನೌಕರಿಗೆ ಹಾಜರಾಗಿದ್ದರು. ಇದರಿಂದ ರಾಯಚೂರು ವಲಯದ ಎಂಟು ಡಿಪೋಗಳಿಂದ ಬೆರಳೆಣಿಕೆಯಷ್ಟು ಬಸ್ ಗಳು ಯಥಾಪ್ರಕಾರ ಸಂಚಾರ ಆರಂಭಿಸಿದವು.

ಜಿಲ್ಲೆಯ ಯಾವುದೇ ಭಾಗದಲ್ಲಿ ಗಲಾಟೆ ಪ್ರಕರಣಗಳು ನಡೆದಿಲ್ಲ. ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸರ್ಕಾರದಿಂದ ನೀಡಿದ್ದ ಹೇಳಿಕೆಯನ್ನು ಆಲಿಸಿದ್ದ ಪ್ರಯಾಣಿಕರು ಬಸ್ ನಿಲ್ದಾಣದತ್ತ ಬರಲಾರಂಭಿಸಿದ್ದರು. ಸೋಮವಾರ ಸಂಜೆವರೆಗೂ ಸಮರ್ಪಕವಾಗಿ ಬಸ್‌ಗಳ ವ್ಯವಸ್ಥೆ ಇರಲಿಲ್ಲ. ಶಾಂತಿ‌ ಸುವ್ಯವಸ್ಥೆ ಕಾಪಾಡಲು ಮುನ್ನಚ್ಚರಿಕೆ ವಹಿಸಿದ್ದ ಪೊಲೀಸರು ಬಸ್ ನಿಲ್ದಾಣದಲ್ಲಿ ಬಂದೋಬಸ್ತ್‌ ಏರ್ಪಡಿಸಿದ್ದರು.

ADVERTISEMENT

ಬಸ್ ನಿಲ್ದಾಣದಲ್ಲಿ ಜನದಟ್ಟಣೆ ಇರಲಿಲ್ಲ. ಆದರೆ ಅಲ್ಲಲ್ಲಿ ಪ್ರಯಾಣಿಕರು ಕುಳಿತಿರುವುದು ಗಮನ ಸೆಳೆಯುವಂತಿತ್ತು. ಡಿಪೋ ಅಧಿಕಾರಿಗಳು ಪ್ರಯಾಣಿಕರನ್ನು ವಿಚಾರಿಸಿ ಬಸ್ ಬಿಡುವ ವ್ಯವಸ್ಥೆ ಮಾಡಿದರು. ಆದರೂ ಬಸ್‌ಗಳು ಪ್ರಯಾಣಿಕರಿಗಾಗಿ ಬಹಳ ಹೊತ್ತಿನವರೆಗೂ ಕಾದುನಿಂತು ಸಂಚರಿಸಿದರು.

ಐದು ದಿನಗಳಿಂದ ನಡೆದ ಮುಷ್ಕರದಿಂದ ಬಸ್ ನಿಲ್ದಾಣದೊಳಗಿನ ಅಂಗಡಿ ಮುಗ್ಗಟ್ಟು ಮಾಲೀಕರು ನಷ್ಟ ಅನುಭವಿಸಿದ್ದರು. ಇದೀಗ ವ್ಯಾಪಾರಿಗಳ ಮುಖದಲ್ಲಿ ಮತ್ತೆ ಮಂದಹಾಸ ಮರಳಿದ್ದು ವಹಿವಾಟು ಆರಂಭಿಸಿದ್ದಾರೆ.

ಬಸ್ ನಿಲ್ದಾಣಕ್ಕೆ ಜಿಲ್ಲಾಧಿಕಾರಿ ಭೇಟಿ: ಬೇರೆಬೇರೆ ಊರುಗಳಿಗೆ ತೆರಳುವ ಸಾರ್ವಜನಿಕರಿಗೆ ತೊಂದರೆ ಆಗದಂತೆ ವಾಹನಗಳ‌ ವ್ಯವಸ್ಥೆ ಮಾಡುವುದಕ್ಕೆ ಸರ್ಕಾರದಿಂದ ತುರ್ತು ಆದೇಶ ಬಂದಿದ್ದರಿಂದ ಜಿಲ್ಲಾಧಿಕಾರಿ ಆರ್.ವೆಂಕಟೇಶಕುಮಾರ್ ಅವರು ಕೇಂದ್ರ ಬಸ್ ನಿಲ್ದಾಣಕ್ಕೆ ಸೋಮವಾರ ಭೇಟಿನೀಡಿ ಪರಿಶೀಲಿಸಿದರು.

ಆನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಜನರ ಬೇಡಿಕೆಗೆ ಅನುಗುಣವಾಗಿ ಸರ್ಕಾರಿ ಬಸ್ ಗಳನ್ನು ಬಿಡುವಂತೆ ಎನ್ ಇಕೆಆರ್ ಟಿಸಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅದರಂತೆ ಈಗಾಗಲೇ 35 ಬಸ್ ಗಳು ತೆರಳಿವೆ. ಪ್ರತಿದಿನದ ವೇಳಾಪಟ್ಟಿಯಂತೆಯೇ ಬಸ್ ಗಳು ಸಂಚರಿಸುತ್ತಿವೆ. ಹೈದರಾಬಾದ್, ಕರ್ನೂಲ್ ಸೇರಿದಂತೆ ಅಂತರರಾಜ್ಯ ಪ್ರಯಾಣದ ಬಸ್ ಗಳು ಕೂಡಾ ಸಂಚರಿಸುತ್ತಿವೆ' ಎಂದರು.

'ಈಗಾಗಲೇ ಬಸ್ ಚಾಲಕರು ಹಾಗೂ‌ ನಿರ್ವಾಹಕರು ಸಾಕಷ್ಟು ಸಂಖ್ಯೆಯಲ್ಲಿ ಹಾಜರಾಗಿದ್ದಾರೆ. ನೌಕರರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆ ಆಗದಂತೆ ಸೂಕ್ತ ಭದ್ರತೆ ಒದಗಿಸಲು ಪೊಲೀಸ್ ಇಲಾಖೆಯವರಿಗೂ ತಿಳಿಸಲಾಗಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ಸಹ ಜನರಿಗೆ ಅನುಕೂಲ‌ ಕಲ್ಪಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರತಿ ಬಸ್ ನಲ್ಲಿ ಒಬ್ಬರು ಕಾನ್ ಸ್ಟೇಬಲ್ ಸಂಚರಿಸಲು ತಿಳಿಸಲಾಗಿದೆ' ಎಂದು ಹೇಳಿದರು.

'ಬಸ್ ಗಳಿಗೆ ಕಲ್ಲು ಎಸೆಯುವುದು ಅಥವಾ‌ ಇನ್ನಿತರೆ ಕೃತ್ಯಗಳನ್ನು ಎಸಗುವವರ ವಿರುದ್ಧ ಕಠಿಣ ಕ್ರಮ‌ ಜರುಗಿಸಲಾಗುವುದು. ಖಾಸಗಿ ವಾಹನಗಳು‌ ಹೆಚ್ಚಿನ ಪ್ರಯಾಣ ವಸೂಲಿ ಮಾಡುತ್ತಿರುವುದನ್ನು ಪರಿಶೀಲಿಸಿ ತಿಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ' ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.