ಸಿಂಧನೂರು: ತುಂಗಭದ್ರಾ ಜಲಾಶಯದ 6 ಗೇಟ್‍ಗಳು ಬಾಗಿವೆ. ಅವುಗಳ ಮೂಲಕ ನೀರನ್ನು ಹೊರಗೆ ಕಳುಹಿಸಲು ಸಾಧ್ಯವಿಲ್ಲ ಎನ್ನುವ ನೀರಾವರಿ ಸಲಹಾ ಸಮಿತಿ ಸಭೆಯ ಅಧ್ಯಕ್ಷರಾದ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ಎಸ್.ತಂಗಡಗಿ ಹೇಳಿಕೆ ನೀಡಿದ ನಂತರ ತಾಲ್ಲೂಕಿನ ರೈತರಲ್ಲಿ ತೀವ್ರ ಆತಂಕ ಸೃಷ್ಟಿಯಾಗಿದೆ.
ಈಗ ನಾಟಿ ಮಾಡಿರುವ ಭತ್ತದ ಬೆಳೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ನೀರು ಸಿಗುತ್ತದೆಯೋ ಇಲ್ಲವೋ ಎಂಬ ಸಂಶಯ ಒಂದು ಕಡೆಯಾದರೆ, ಬೇಸಿಗೆ ಬೆಳೆಗೆ ನೀರು ಲಭ್ಯವಾಗುವುದಿಲ್ಲ ಎನ್ನುವ ಕೆಲವರ ಮಾತುಗಳಿಂದ ರೈತರು ದಿಗಿಲುಗೊಂಡಿದ್ದಾರೆ.
ತಾಲ್ಲೂಕಿನಲ್ಲಿ ಈಗಾಗಲೇ 6240 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದು, 370 ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, 155 ಹೆಕ್ಟೇರ್‌ನಲ್ಲಿ ಹೈಬ್ರಿಡ್ ಸಜ್ಜಿ, 13820 ಹೆಕ್ಟೇರ್‌ನಲ್ಲಿ ತೊಗರಿ, 3830 ಹೆಕ್ಟೇರ್‌ನಲ್ಲಿ ಸೂರ್ಯಕಾಂತಿ, 2900 ಹೆಕ್ಟೇರ್‌ನಲ್ಲಿ ಹತ್ತಿ, 90 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆ ಬೆಳೆದಿದ್ದಾರೆ. ಏಕಾಏಕಿ ತುಂಗಭದ್ರಾ ಜಲಾಶಯದ ಗೇಟ್‍ಗಳು ಬಾಗಿವೆ ಎನ್ನುವ ಸುದ್ದಿ ಹರಡಿರುವುದಕ್ಕೆ ಕೆಲ ಪ್ರಜ್ಞಾವಂತ ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಜಲಾಶಯದಲ್ಲಿ 80 ಟಿಎಂಸಿ ಅಡಿ ಸದ್ಯ ನೀರು ಸಂಗ್ರಹವಿದೆ. ಆದಾಗ್ಯೂ ಗೇಟ್‍ಗಳು ಬಾಗಿವೆ ಎಂದು ಹೇಳಿರುವುದು ಸಂಶಯಕ್ಕೆ ಆಸ್ಪದ ಮಾಡಿಕೊಟ್ಟಿದೆ. ಜಲಾಶಯಕ್ಕೆ ನೀರು ಬಿಡುವ ಸಮಯದಲ್ಲಿ ಗೇಟ್‍ಗಳ ಸ್ಥಿತಿಗತಿಯನ್ನು ಅಧಿಕಾರಿಗಳು ನೋಡಿರಲಿಲ್ಲವೇ. ಬೇಸಿಗೆ ಬೆಳೆಗೆ ನೀರು ಕೊಡಬಾರದೆನ್ನುವ ದುರುದ್ದೇಶದಿಂದಲೇ ಈ ಸಮಸ್ಯೆಯನ್ನು ಸೃಷ್ಟಿ ಮಾಡಿದ್ದಾರೆ ಎಂಬುದು ರೈತ ಸಂಘಟನೆಗಳ ಮುಖಂಡರಾದ ಡಿ.ಎಚ್.ಪೂಜಾರ ಹಾಗೂ ಶರಣಪ್ಪ ಮರಳಿ ಅವರ ಗಂಭೀರ ಆರೋಪ.
ರೈತರು ಈಗಾಗಲೇ ಭತ್ತ ಸೇರಿದಂತೆ ವಿವಿಧ ಬೆಳೆಗಳನ್ನು ಹಾಕಿ ಒಂದು ತಿಂಗಳು ಮುಗಿದಿದೆ. ಈ ಸಮದಯಲ್ಲಿ ರೈತರಲ್ಲಿ ಭಯವುಂಟು ಮಾಡುವ ಅಧಿಕಾರಿಗಳ ಮತ್ತು ಸರ್ಕಾರದ ಧೋರಣೆ ಪ್ರಶ್ನಾರ್ಹವಾಗಿದೆ. ಸರ್ಕಾರಕ್ಕೆ ಯಾವುದೇ ದೂರದೃಷ್ಠಿಯಿಲ್ಲ. 103 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 80 ಟಿಎಂಸಿ ಅಡಿ ಮಾತ್ರ ನೀರಿನ ಸಂಗ್ರಹವಿದೆ. ಗೇಟ್‍ಗಳು ಒಂದೇ ದಿನ ಅಥವಾ ಒಂದೇ ತಿಂಗಳಲ್ಲಿ ಬಾಗುವುದಿಲ್ಲ. ಅವುಗಳಿಗೆ ಏನಾದರೂ ಧಕ್ಕೆಯಾಗಿದ್ದರೆ ಈ ಹಿಂದೆಯೇ ಆಗಿರಬಹುದು. ಈ ಸಮಯದಲ್ಲಿ ಹೇಳಿ ಮುಂದಿನ ದಿನಗಳಲ್ಲಿ ರೈತರು ನೀರನ್ನು ಕೇಳಿರಬಾರದು ಎನ್ನುವ ಕಾರಣಕ್ಕಾಗಿ ರೈತರ ಮನಸ್ಥಿತಿಯನ್ನು ಗಟ್ಟಿಗೊಳಿಸಲು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹೆಣೆದಿರುವ ವ್ಯವಸ್ಥಿತ ಕತೆಯಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನಪಾಷಾ ದಿದ್ದಿಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನೀರಾವರಿ ಇಲಾಖೆಯ ಸಿಂಧನೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಸತ್ಯನಾರಾಯಣ ಶೆಟ್ಟಿ ಅವರನ್ನು ಸಂಪರ್ಕಿಸಿದಾಗ ‘ಕ್ರಸ್ಟ್‌ಗೇಟ್ ಅಳವಡಿಕೆಗೆ ಈಗಾಗಲೇ ಟೆಂಡರ್ ಕರೆಯಲಾಗಿದ್ದು, ಗುಜರಾತ ಮೂಲದ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ಗುತ್ತಿಗೆದಾರರು ಗೇಟ್ ಅಳವಡಿಕೆಗೆ ಸಂಬಂಧಿಸಿದ ಸಾಮಾಗ್ರಿಗಳನ್ನು ತಂದು ಹಾಕಿದ್ದಾರೆ. ಮುಂಗಾರು ಬೆಳೆಗೆ ಯಾವುದೇ ವಿಧದಲ್ಲಿ ನೀರಿನ ತೊಂದರೆಯಾಗುವುದಿಲ್ಲ. ಬೇಸಿಗೆ ಬೆಳೆಯ ವಿಷಯದ ಬಗ್ಗೆ ಮುಂಬರುವ ದಿನಗಳಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ತೀರ್ಮಾನ ಕೈಗೊಳ್ಳುತ್ತದೆ’ ಎಂದು ಪ್ರತಿಕ್ರಿಯಿಸಿದರು.
ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನ ವಿವಿಧ ಬೆಳೆಗಳನ್ನು ಬಿತ್ತಿ ತಿಂಗಳಿಗಿಂತ ಹೆಚ್ಚಿನ ಅವಧಿ ಮುಗಿದಿದೆ. ಈ ಬೆಳೆಗಳಿಗೆ ನೀರಿನ ತೊಂದರೆಯಾಗುವುದಿಲ್ಲ. ರೈತರು ಆತಂಕಪಡುವ ಅಗತ್ಯವೂ ಇಲ್ಲಸತ್ಯನಾರಾಯಣ ಶೆಟ್ಟಿ ಕಾರ್ಯಪಾಲಕ ಎಂಜಿನಿಯರ್ ನೀರಾವರಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.