ADVERTISEMENT

‘ಅಂತರ್ಜಲ ಉಳಿಸಲು ಕೆರೆಗಳು ಅಗತ್ಯ’

ರಾಯಚೂರು, ಯಾದಗಿರಿ ಕೆರೆ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನೀಡಿದ ಸಚಿವರು

​ಪ್ರಜಾವಾಣಿ ವಾರ್ತೆ
Published 1 ಫೆಬ್ರುವರಿ 2019, 13:43 IST
Last Updated 1 ಫೆಬ್ರುವರಿ 2019, 13:43 IST
ರಾಯಚೂರಿನಲ್ಲಿ ಭಾರತೀಯ ಜೈನ ಸಂಘ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹಯೋಗದಿಂದ ಕಟ್ಲಟ್ಕೂರ್(ಉಟ್ಕೂರು) ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆರೆಗಳ ಹೂಳೆತ್ತುವ ಕಾರ್ಯಕ್ರಮವನ್ನು ಸಚಿವ ಬಂಡೆಪ್ಪ ಕಾಶೆಂಪುರ ಉದ್ಘಾಟಿಸಿ ಮಾತನಾಡಿದರು
ರಾಯಚೂರಿನಲ್ಲಿ ಭಾರತೀಯ ಜೈನ ಸಂಘ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹಯೋಗದಿಂದ ಕಟ್ಲಟ್ಕೂರ್(ಉಟ್ಕೂರು) ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆರೆಗಳ ಹೂಳೆತ್ತುವ ಕಾರ್ಯಕ್ರಮವನ್ನು ಸಚಿವ ಬಂಡೆಪ್ಪ ಕಾಶೆಂಪುರ ಉದ್ಘಾಟಿಸಿ ಮಾತನಾಡಿದರು   

ಶಕ್ತಿನಗರ: ಹವಾಮಾನ ವೈಪರೀತ್ಯದಿಂದ ಮಳೆ ಕ್ಷೀಣಿಸುತ್ತಿರುವುದರಿಂದ ನೀರಿನ ಮಟ್ಟ ಕುಸಿಯುತ್ತಿದ್ದು, ಅಂತರ್ಜಲವನ್ನು ಉಳಿಸಲು ಕೆರೆಗಳನ್ನು ಹೂಳೆತ್ತುವುದು ಅವಶ್ಯಕ ಎಂದು ಬರ ಅಧ್ಯಯನ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ ಬಂಡೆಪ್ಪ ಕಾಶೆಂಪುರ ಹೇಳಿದರು.

ಭಾರತೀಯ ಜೈನ ಸಂಘ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಹಯೋಗದಿಂದ ಕಟ್ಲಟ್ಕೂರ್ (ಉಟ್ಕೂರು) ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕೆರೆಗಳ ಹೂಳೆತ್ತುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷ್ಣಾ ಮತ್ತು ತುಂಗಭದ್ರ ಎರಡು ನದಿಗಳು ಇದ್ದರೂ ಕೂಡ ಸಕಾಲಕ್ಕೆ ಮಳೆಯಾಗದೆ ಇರುವುದರಿಂದ ಅಂತರ್ಜಲದ ಮಟ್ಟ ನಿರಂತರವಾಗಿ ಕ್ಷೀಣಿಸುತ್ತಿದೆ. ಇದರಿಂದ ಕುಡಿಯುವ ನೀರಿನ ಲಭ್ಯತೆ ಇಲ್ಲ. ಬೀದರ್‌ನಲ್ಲಿ ಸಣ್ಣ ನೀರವಾರಿ ಯೋಜನೆಯಡಿ 124 ಕೆರೆಯಲ್ಲಿ 100 ಕೆರೆಗಳನ್ನು ರಾಜ್ಯ ಸರ್ಕಾರದಿಂದ ಹೂಳು ತೆಗೆಯಲಾಗಿದ್ದು ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಪರದಾಡುವುದನ್ನು ಹೆಚ್ಚಿನ ಒತ್ತು ನೀಡಲಾಗಿದೆ. ಒಣ ಮತ್ತು ನೀರಾವರಿ ಬೇಸಾಯದಲ್ಲಿ ಬೆಳೆಗಳು ಬೆಳೆಯುವ ರೈತರು ಬರುವ ದಿನಗಳಲ್ಲಿ ಕೃಷಿಯಲ್ಲಿ ಇಸ್ರೇಲ್ ತಂತ್ರಜ್ಞಾನ ಅನುಸರಿಸುವಂತೆ ಅವರು ಸಲಹೆ ನೀಡಿದರು.

ADVERTISEMENT

ಕೃಷಿ ಇಲಾಖೆಯ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಮಾತನಾಡಿ, ಕೆರೆಗಳು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಬರಗಾಲ ಪೀಡಿತ ಪ್ರದೇಶದ ರೈತರು, ಮಳೆಯಾಶ್ರಿತ ನೀರು ಪಡೆದುಕೊಂಡು ಬೆಳೆಗಳನ್ನು ಬೆಳೆಯುವ ಪರಿಸ್ಥಿತಿ ಇದೆ. ಕೆರೆಗಳು ರೈತರ ಜೀವರನಾಡಿಗಳಾಗಿವೆ. ಮರಗಿಡಗಳನ್ನು ಬೆಳೆಸಿ ಜಲಮೂಲಗಳನ್ನು ಸಂರಕ್ಷಣೆ ಮಾಡಿದಾಗ ರೈತರಿಗೆ ಅನುಕೂಲವಾಗಲಿದೆ ಎಂದರು.

ಹಿಂದಿನ ಪೂರ್ವಜರು ಕೆರೆಗಳ ನಿರ್ಮಿಸುವುದಕ್ಕೆ ಜೆಸಿಬಿ, ಟ್ರಾಕ್ಟ್ಯರ್‌ಗಳಿಲ್ಲದೆ,ಎತ್ತಿನ ಬಂಡಿಗಳ ಸಹಾಯದಿಂದ ಕೆರೆಗಳು ನಿರ್ಮಿಸಿದರು. ರಾಜ್ಯ ಸರ್ಕಾರ ಕೆರೆಗಳ ಹೂಳೆತ್ತುವ ಕೈಗೊಂಡ ಕಾರ್ಯಕ್ಕೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಬಸನಗೌಡ ದದ್ದಲ ಮಾತನಾಡಿ, ಅಂತರ್ಜಲ ಹೆಚ್ಚಿಸಲು ಗ್ರಾಮೀಣ ಕ್ಷೇತ್ರದಲ್ಲಿ 120 ಕೆರೆಗಳಲ್ಲಿ ಹೂಳೆತ್ತುವ ಕಾರ್ಯಕ್ಕೆ ಪ್ರತಿಯೊಬ್ಬರು ಸಹಕಾರ ನೀಡಿದಾಗ ಮಾತ್ರ ಸಮೃದ್ಧಿಯಾಗಿ ಬೆಳೆಯಲು ಸಾಧ್ಯ. ಕೆರೆಗಳಲ್ಲಿ ಸಂಪೂರ್ಣವಾಗಿ ನೀರು ಸಂಗ್ರಹ ಮಾಡಿಕೊಂಡು ಉತ್ತಮ ಬೆಳೆಗಳನ್ನು ಬೆಳೆದಾಗ ಮಾತ್ರ ರೈತರ ಮುಖದಲ್ಲಿ ಮಂದಹಾಸ ಮೂಡುತ್ತದೆ ಎಂದರು.

ವೇದಿಕೆಯಲ್ಲಿ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ,ಗಣಿ ಮತ್ತು ಭೂ ವಿಜ್ಞಾನಿ ಇಲಾಖೆಯ ಸಚಿವ ರಾಜಶೇಖರ ಪಾಟೀಲ, ಸಾಮಾಜಿಕ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿ.ಕುಮಾರನಾಯಕ, ಸಂಸದ ಬಿ.ವಿ.ನಾಯಕ, ಶಾಸಕರಾದ ಎನ್.ಎಸ್.ಬೋಸರಾಜು, ಶಿವನಗೌಡ ನಾಯಕ, ಪ್ರತಾಪಗೌಡ ಪಾಟೀಲ, ಡಾ.ಶಿವರಾಜಪಾಟೀಲ, ರಾಜಾ ವೆಂಕಟಪ್ಪ ನಾಯಕ, ಜಿಲ್ಲಾಧಿಕಾರಿ ಬಿ.ಶರತ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆದಿಮನಿವೀರಲಕ್ಷ್ಮೀ ಪರಮೇಶಪ್ಪ, ಜಿಪಂ ಮುಖ್ಯ ಕಾರ್ಯನಿರ್ವಹಾಕಧಿಕಾರಿ ನಳಿನ್ ಅತುಲ್,ಬಿಜೆಎಸ್ ರಾಷ್ಟ್ರೀಯ ಅಧ್ಯಕ್ಷ ರಾಜೇಂದ್ರ ಲುನಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.