ADVERTISEMENT

ದೇವದುರ್ಗ| 5 ದಶಕದಿಂದ ಬಗೆಹರಿಯದ ಸಮಸ್ಯೆ

ಕುಡಿಯುವ ನೀರಿಗಾಗಿ ಚಿಕ್ಕಬುದೂರು ಗ್ರಾಮಸ್ಥರ ಪರದಾಟ: ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 14 ಮೇ 2025, 5:11 IST
Last Updated 14 ಮೇ 2025, 5:11 IST
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರು
ದೇವದುರ್ಗ ತಾಲ್ಲೂಕಿನ ಚಿಕ್ಕಬುದೂರು ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಪರದಾಡುತ್ತಿರುವ ಜನರು   

ದೇವದುರ್ಗ: ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ತಾಲ್ಲೂಕಿನ ಚಿಕ್ಕಬುದೂರು ಜನರ ನೀರಿನದಾಹ ಮಾತ್ರ 50 ವರ್ಷದಿಂದ ಈಡೇರದೆ ಜ್ವಲಂತ ಸಮಸ್ಯೆಯಾಗಿ ಉಳಿದಿದೆ.

ಪ್ರತಿ ವರ್ಷ ಚುನಾವಣಾ ಸಂದರ್ಭದಲ್ಲಿ ಭರವಸೆ ನೀಡುವ ರಾಜಕೀಯ ಪಕ್ಷಗಳ ಮುಖಂಡರು ಜನಪ್ರತಿನಿಧಿಗಳಾಗಿ ಆಯ್ಕೆಯಾದ ಮೇಲೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಚಕಾರ ಎತ್ತುವುದಿಲ್ಲ. ಸ್ಥಳೀಯ ಸಂಸ್ಥೆ ಗ್ರಾಮ ಪಂಚಾಯಿತಿಯವರು ಅನುದಾನದ ಕೊರತೆಯಿಂದ ಇರುವ ಹಳೆಯ ಪೈಪ್‌ಲೈನ್ ವ್ಯವಸ್ಥೆಯಲ್ಲಿ ವಾರದಲ್ಲಿ ಎರಡು ಮೂರು ಬಾರಿ ನೀರು ಸರಬರಾಜು ಮಾಡುತ್ತಾರೆ.

ಪ್ರತಿ ವರ್ಷ ಜಿಲ್ಲಾ ಮತ್ತು ತಾಲ್ಲೂಕು ಟಾಸ್ಕ್‌ಫೋರ್ಸ್‌ ಸಮಿತಿಯಲ್ಲಿ ಚರ್ಚೆಗೆ ಬರುವ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಚರ್ಚೆಗಷ್ಟೇ ಸೀಮಿತವಾಗಿದೆ ಹೊರತು ಶಾಶ್ವತ ಪರಿಹಾರ ಸಿಕ್ಕಿಲ್ಲ.

ADVERTISEMENT

2 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 400ಕ್ಕೂ ಅಧಿಕ ಮನೆಗಳಿವೆ. ಎಲ್ಲ ವರ್ಗದ ಜನರು ವಾಸವಾಗಿದ್ದಾರೆ. 5 ವರ್ಷಗಳ ಹಿಂದೆ ₹15 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಶುದ್ಧ ಕುಡಿಯುವ ನೀರಿನ ಘಟಕ ಪಾಳು ಬಿದ್ದಿದೆ. ಗ್ರಾಮದ ಸೀಮಾಂತರ ವ್ಯಾಪ್ತಿಯಲ್ಲಿ 20 ಕಿ.ಮೀ ವ್ಯಾಪ್ತಿಯಲ್ಲಿ ಬೋರ್‌ವೆಲ್ ಕೊರೆದರೂ ಉಪ್ಪು ನೀರು ಬರುವುದರಿಂದ ಜನರಿಗೆ ಶುದ್ಧೀಕರಿಸಿದ ನೀರು ಬಳಕೆ ಅನಿವಾರ್ಯ. ಆದರೆ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಯಾಗದೆ ವರ್ಷಗಳೇ ಕಳೆದು ಹೋಗಿದೆ.

ಗ್ರಾಮದಲ್ಲಿ 3 ವರ್ಷಗಳ ಹಿಂದೆ ಜಲ ಜೀವನ್ ಮಿಷನ್‌ ಯೋಜನ ಅಡಿ ಮನೆಮನೆಗಳಿಗೆ ನಲ್ಲಿ ಅಳವಡಿಸಲಾಗಿದೆ. ಆದರೆ ನೀರು ಹರಿದಿಲ್ಲ. ಹಲವು ಕಡೆ ನಲ್ಲಿಗಳನ್ನು ಕಿತ್ತೆಸೆಯಲಾಗಿದೆ.

ವರ್ಷದ ಹಿಂದೆ ಯಾಟಗಲ ಗ್ರಾಮದಿಂದ ಕೃಷ್ಣಾ ನದಿಯ ನೀರು ಕುಡಿಯಲು ಸರಬರಾಜು ಆಗುತ್ತಿದೆ. ಆದರೆ ವಿದ್ಯುತ್ ಸಮಸ್ಯೆಯಿಂದ ಜನರ ಅಗತ್ಯಕ್ಕೆ ಅನುಸಾರ ಸಮರ್ಪಕವಾಗಿ ನೀರು ಸರಬರಾಜು ಆಗುತ್ತಿಲ್ಲ. ಪ್ರಸ್ತುತ ಪಕ್ಕದ ಗ್ರಾಮವಾದ ಜೇರಬಂಡಿ ಗ್ರಾಮದಿಂದ ಬೋರ್‌ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಶೇಕಡ 70ರಷ್ಟು ಜನರಿಗೆ ಈ ನೀರು ತಲುಪುವ ಮುಂಚೆ ಕಾಲಿಯಾಗುತ್ತದೆ ಎನ್ನುತ್ತಾರೆ ಗ್ರಾಮದ ಮಹಿಳೆಯರು.

‘ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಧಿಕಾರಿಗಳು ಪ್ರತಿ ವರ್ಷ ಕುಡಿಯುವ ನೀರಿಗಾಗಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದ್ದಾರೆ. ಕುಡಿಯುವ ನೀರು ಎಲ್ಲಿ ಒದಗಿಸಿದ್ದಾರೆ ಎಂದು ತೋರಿಸಲಿ’ ಎಂದು ಹೆಸರು ಹೇಳಲಿಚ್ಚಿಸದ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯರೊಬ್ಬರು ದೂರಿದರು.

ಗ್ರಾಮದ ಕುಡಿಯುವ ನೀರಿನ ಸಮಸ್ಯೆಯನ್ನು ಬಂಡವಾಳವನ್ನಾಗಿ ಮಾಡಿಕೊಂಡ ಖಾಸಗಿ ಶುದ್ಧ ನೀರಿನ ಘಟಕದವರು ದೇವದುರ್ಗ ಪಟ್ಟಣದಿಂದ ಟಾಟಾ ಎಸಿ ಮತ್ತು ಟ್ರ್ಯಾಕ್ಟರ್‌ಗಳಲ್ಲಿ ದುಬಾರಿ ಬೆಲೆಗೆ ಜನರಿಗೆ ನೀರು ಒದಗಿಸುತ್ತಾರೆ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕ ದುರಸ್ತಿಗೊಳಿಸಿ ಸಮರ್ಪಕವಾಗಿ ನೀರು ಸರಬರಾಜು ಮಾಡಬೇಕೆಂಬುದು ಗ್ರಾಮಸ್ಥರ ಒತ್ತಾಯವಾಗಿದೆ.

ಗ್ರಾಮ ಪಂಚಾಯಿತಿ ವತಿಯಿಂದ ಲಭ್ಯವಿರುವ ಅನುದಾನದಲ್ಲಿ ನೆರೆಯ ಜೇರಬಂಡ್ಡಿ ಮತ್ತು ಯಾಟಗಲ ಗ್ರಾಮದಿಂದ ಕುಡಿಯುವ ನೀರು ಒದಗಿಸಲಾಗುತ್ತಿದೆ
ಬಸವರಾಜ ಹಟ್ಟಿ ಇಒ ತಾಲ್ಲೂಕು ಪಂಚಾಯಿತಿ ದೇವದುರ್ಗ
50 ವರ್ಷದಿಂದ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಜನಪ್ರತಿನಿಧಿಗಳು ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಶಾಶ್ವತ ಪರಿಹಾರ ಕಾಣದೆ ಗ್ರಾಮಸ್ಥರು ಪರದಾಡುವಂತಾಗಿದೆ
ಮಹಾದೇವಪ್ಪಗೌಡ ಪಾಟೀಲ ಚಿಕ್ಕಬುದೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.