ADVERTISEMENT

ಭೂಗಳ್ಳರಿಗೆ ನಗರಸಭೆ ಅಧಿಕಾರಿಗಳ ಬೆಂಬಲ: ಆರೋಪ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2019, 12:30 IST
Last Updated 20 ಆಗಸ್ಟ್ 2019, 12:30 IST

ರಾಯಚೂರು: ನಗರದ ವಾರ್ಡ್‌ ನಂಬರ್ 14ರ ಮಂಗಳವಾರಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಗೆ ಹೊಂದಿಕೊಂಡು 18 ಅಡಿ ಅಗಲದ ರಾಜಕಾಲುವೆಯನ್ನು ಮುಚ್ಚಿ 6 ಅಡಿ ಚರಂಡಿ ನಿರ್ಮಿಸಿರುವ ನಗರಸಭೆಯು ಭೂಗಳ್ಳರಿಗೆ ಅನುಕೂಲ ಮಾಡಿಕೊಟ್ಟಿದೆ. ನಗರಸಭೆ ಮಾಜಿ ಸದಸ್ಯ ಹರೀಶ ನಾಡಗೌಡ ಅವರು ಅಧಿಕಾರಿಗಳ ಮೇಲೆ ದೌರ್ಜನ್ಯ ಮಾಡುತ್ತಿದ್ದು, ಪೊಲೀಸರು ಕೂಡ ಬೆಂಬಲವಾಗಿ ನಿಂತಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಭೀಮವಾದ) ಜಿಲ್ಲಾ ಸಂಚಾಲಕ ರಾಜುಪಟ್ಟಿ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಒತ್ತುವರಿ ಮಾಡಿಕೊಂಡಿರುವ ನಗರಸಭೆಯ ಜಾಗದಲ್ಲಿ ರಾಜಾರೋಷವಾಗಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡುತ್ತಿರುವ ಬಗ್ಗೆ ಆಗಸ್ಟ್ 18ರಂದು ದೂರವಾಣಿ ಮೂಲಕ ಪೌರಾಯುಕ್ತರಿಗೆ ದೂರು ನೀಡಲಾಗಿದೆ. ಯಾವುದೇ ಕ್ರಮ ಜರುಗಿಸಿಲ್ಲ. ಸದರ್ ಬಜಾರ್‌ ಠಾಣೆಯ ಪಿಎಸ್‌ಐ ಕೂಡ ಒತ್ತುವರಿದಾರಿಗೆ ಬೆಂಬಲವಾಗಿ ನಿಂತಿದ್ದು, ಪ್ರಶ್ನೆ ಮಾಡಿದವರ ವಿರುದ್ಧವೇ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ. ಈ ಬಗ್ಗೆಯೂ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರೂ, ಕ್ರಮ ಜರುಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆಪಾದಿಸಿದರು.

ರಾಜಕಾಲುವೆ ಒತ್ತುವರಿ ಮಾಡಿಕೊಂಡು ಕಾನೂನು ಬಾಹಿರವಾಗಿ ಕಟ್ಟಿಕೊಂಡಿರುವ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಲು ಪೌರಾಡಳಿತ ನಿರ್ದೇಶನಾಲಯದ ಅಧಿಕಾರಿ ಆದೇಶ ನೀಡಿದರೂ, ತೆರವುಗೊಳಿಸುವ ಕಾರ್ಯವೇ ಮಾಡಿಲ್ಲ. ಜಿಲ್ಲಾ ಕೇಂದ್ರದಲ್ಲಿನ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸದಿರುವುದು ಭೂಗಳ್ಳರಿಗೆ ವರದಾನವಾಗಿದೆ. ಶೀಘ್ರವಾಗಿ ಕ್ರಮಕ್ಕೆ ಮುಂದಾಗದಿದ್ದರೆ ನಗರಸಭೆ ಕಚೇರಿಗೆ ಬೀಗಹಾಕಿ ಪ್ರತಿಭಟನೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ADVERTISEMENT

ಆರ್.ಚಂದ್ರಶೇಖರ, ಮಂಜುನಾಥಸಿಂಗ್ ತಿವಾರಿ, ಹನುಮಂತು, ಲಕ್ಷ್ಮಣ, ಪರಶುರಾಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.