ADVERTISEMENT

ಮರಳುಗಾರಿಕೆಗೆ ಹಿಟಾಚಿ ಬಳಕೆ ನಿಷೇಧಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 27 ಮೇ 2019, 14:52 IST
Last Updated 27 ಮೇ 2019, 14:52 IST

ರಾಯಚೂರು: ನದಿಯಲ್ಲಿ ಮರಳು ತೆಗೆಯುವುದಕ್ಕೆ ಹಿಟಾಚಿ ಯಂತ್ರ ಬಳಸುವುದರ ಮೇಲೆ ನಿಷೇಧ ಹೇರಬೇಕು. ಕಾನೂನು ಬಾಹಿರ ಮರಳುಗಾರಿಕೆ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಕಾರ್ಯಕರ್ತ ಹಣಮಂತ ದೇವಪ್ಪ ಭಂಗಿ ಒತ್ತಾಯಿಸಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ನದಿಯಲ್ಲಿ ಒಂದು ಮೀಟರ್‌ ಮಾತ್ರ ಮರಳು ತೆಗೆಯುವುದಕ್ಕೆ ಮತ್ತು ಕಾರ್ಮಿಕರಿಂದ ಮರಳು ತುಂಬಿಸಲು ಅವಕಾಶ ನೀಡಲಾಗಿತ್ತು. ಇದರಿಂದ ಬಡ ಕೂಲಿಕಾರ್ಮಿಕರಿಗೂ ಅನುಕೂಲವಾಗಿತ್ತು. ಈಗ ಹಿಟಾಚಿ ಬಳಕೆ ಮಾಡುತ್ತಿರುವುದರಿಂದ ಬಡವರಿಗೆ ಕೆಲಸ ಸಿಗುತ್ತಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.

ರಾಯಲ್ಟಿ ಮೂಲಕ ಮರಳು ಸಾಗಿಸುವ ಸಮಯವನ್ನು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೂ ನಿಗದಿಪಡಿಸಬೇಕು. ದೇವದುರ್ಗ ತಾಲ್ಲೂಕಿನ ಮುಷ್ಟಳ್ಳಿ, ಬೇವಿನಾಳ, ಗೌಡೂರು ಸ್ಟಾಕ್‌ ಯಾರ್ಡ್‌ನಲ್ಲಿ ಅರ್ಧ ಟ್ರಿಪ್‌ ಲೋಡ್ ಮಾಡಿಕೊಂಡು ವೇ ಬ್ರಿಜ್‌ನಲ್ಲಿ ತೂಕವಾದ ಬಳಿಕ ಫುಲ್‌ ಲೋಡ್‌ ಮಾಡಲಾಗುತ್ತಿದೆ. ಗುತ್ತಿಗೆದಾರರು ಸ್ಥಳದಲ್ಲೇ ಕಾನೂನು ಪಾಲನೆ ಮಾಡುತ್ತಿಲ್ಲ. ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವನ್ನುಂಟು ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ADVERTISEMENT

ಐದು ವರ್ಷಗಳವರೆಗಿನ ಮರಳು ಗುತ್ತಿಗೆ ಅವೈಜ್ಞಾನಿಕವಾಗಿದೆ. ಮರಳು ಸಾಗಣೆಯನ್ನು ಆಯಾ ಜಿಲ್ಲೆಗೆ ನಿರ್ಬಂಧ ಮಾಡಬೇಕು. ಗುಳೆ ಹೋಗುತ್ತಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಜನರಿಗೆ ಮರಳುಗಾರಿಕೆಯಲ್ಲಿ ಉದ್ಯೋಗ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಅಕ್ರಮ ಮರಳು ಸಾಗಣೆ ಕುರಿತು ಜಿಲ್ಲಾಧಿಕಾರಿಗಳು ಗುಪ್ತವಾಗಿ ತನಿಖೆ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.