ADVERTISEMENT

ಸಿಪಿಐ ಸಂಜೀವ ಕುಮಾರ ವರ್ಗಾವಣೆ ರದ್ದುಪಡಿಸದಿದ್ದರೆ ಹೋರಾಟ: ರಾಘವೇಂದ್ರ ಕುಷ್ಟಗಿ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2018, 12:39 IST
Last Updated 12 ಡಿಸೆಂಬರ್ 2018, 12:39 IST

ರಾಯಚೂರು: ದೇವದುರ್ಗ ತಾಲ್ಲೂಕಿನಲ್ಲಿ ಅಕ್ರಮ ದಂಧೆಗಳಿಗೆ ಕಡಿವಾಣ ಹಾಕಲು ಶ್ರಮಿಸುತ್ತಿದ್ದ ಸಿಪಿಐ ಸಂಜೀವಕುಮಾರ ಅವರನ್ನು ಸಂಸದ ಬಿ.ವಿ.ನಾಯಕ ವರ್ಗಾವಣೆ ಮಾಡಿಸಿದ್ದು, ವರ್ಗಾವಣೆ ರದ್ದುಪಡಿಸದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಜನಸಂಗ್ರಾಮ ಪರಿಷತ್‌ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಎಚ್ಚರಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಕ್ರಮ ಮರಳು ಸಾಗಿಸಲು ನಕಲಿ ಪರ್ಮಿಟ್‌, ಖೋಟಾ ನೋಟು ಹಾಗೂ ಮಟ್ಕಾ ದಂಧೆ ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳು ಜನಪ್ರತಿನಿಧಿಗಳ ಕೃಪಾಕಟಾಕ್ಷದಿಂದಲೇ ನಡೆಯುತ್ತಿವೆ. ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರು ಅಕ್ರಮಗಳಿಗೆ ಕಡಿವಾಣ ಹಾಕಲು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ನಕಲಿ ಪರ್ಮಿಟ್‌ ಹಗರಣದಲ್ಲಿ ಆರೋಪಿಗಳನ್ನು ಬಂಧಿಸಿದ 24 ಗಂಟೆಯಲ್ಲಿ ಸಿಪಿಐ ವರ್ಗಾವಣೆ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿರುವ ಸಂಜೀವಕುಮಾರ ಮೇಲೆ ಯಾವುದೇ ಆರೋಪಗಳಿಲ್ಲ. ವರ್ಗಾವಣೆ ಮಾಡಿದ್ದರೂ ಸ್ಥಳ ತೋರಿಸಿಲ್ಲ ಎಂದು ಆರೋಪಿಸಿದರು.

ADVERTISEMENT

ಖೋಟಾ ನೋಟು ಪ್ರಕರಣ ಪತ್ತೆ ಮಾಡಿ ಆರೋಪಿಗಳನ್ನು ಬಂಧಿಸಿದ್ದರು. ಈ ಪ್ರಕರಣದಲ್ಲಿ ಇನ್ನಷ್ಟು ಆರೋಪಿಗಳು ಬಂಧನವಾಗಬೇಕಿದೆ. ಪ್ರಕರಣದ ತನಿಖಾಧಿಕಾರಿ ಆಗಿರುವ ಸಂಜೀವಕುಮಾರ ವರ್ಗಾವಣೆಗೊಂಡಿರುವುದರಿಂದ ಈ ಪ್ರಕರಣ ತಾರ್ಕಿಕ ಅಂತ್ಯವಾಗುವ ಸಾಧ್ಯತೆಗಳು ಕ್ಷೀಣಿಸಿವೆ ಎಂದರು.

ಮಟ್ಕಾ ದಂಧೆಗೆ ಸಂಬಂಧಿಸಿದ 30ಕ್ಕೂ ಅಧಿಕ ಪ್ರಕರಣ ದಾಖಲಿಸಿದ್ದಾರೆ. ಯರಮಸಾಳ ಸ್ವಾಮಿ ಹಾಗೂ ರಾಚಯ್ಯ ಸ್ವಾಮಿ ಈ ದಂಧೆಯ ಮುಂಚೂಣಿಯಲ್ಲಿದ್ದು, ಇವರು ಬಿಜೆಪಿಯ ಕಾರ್ಯಕರ್ತರಾಗಿದ್ದಾರೆ. ಈ ವಿಷಯದಲ್ಲಿ ಸಚಿವ ವೆಂಕಟರಾವ ನಾಡಗೌಡ ಇಚ್ಛಾಶಕ್ತಿ ಪ್ರದರ್ಶಿಸಿ ಕ್ರಮ ಜರುಗಿಸಬೇಕು. ಸಂಸದ ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಖಾಜಾ ಅಸ್ಲಂ ಅಹ್ಮದ್, ಭೀಮರಾಯ ಜರದಬಂಡಿ, ಮೋಹನರಾವ್ ಕಾಡ್ಲೂರು ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.