ADVERTISEMENT

ವಿವಿಧ ಬೇಡಿಕೆ ಈಡೇರಿಸಲು ಒತ್ತಾಯ

ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್ ಕಾಂಗ್ರೆಸ್‌ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 14:39 IST
Last Updated 21 ಆಗಸ್ಟ್ 2019, 14:39 IST
ರಾಯಚೂರಿನಲ್ಲಿ ಬುಧವಾರ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್ ಕಾಂಗ್ರೆಸ್‌ (ಎಐಯುಟಿಯುಸಿ) ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಬುಧವಾರ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್ ಕಾಂಗ್ರೆಸ್‌ (ಎಐಯುಟಿಯುಸಿ) ಜಿಲ್ಲಾ ಸಮಿತಿ ಸದಸ್ಯರು ಪ್ರತಿಭಟನೆ ನಡೆಸಿದರು   

ರಾಯಚೂರು: ಕೃಷ್ಣಾನದಿ ಪಾತ್ರದಲ್ಲಿ ಬರುವ ಗ್ರಾಮೀಣ ಪ್ರದೇಶದ ನೆರೆ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಿ, ಬೆಳೆನಷ್ಟದ ಸಮೀಕ್ಷೆ ನಡೆಸಬೇಕು. ಜಾನುವಾರು ಹಾಗೂ ಮನೆಗಳು ಕಳೆದುಕೊಂಡವರಿಗೆ ಸಮರ್ಪಕವಾಗಿ ಪರಿಹಾರ ನೀಡಬೇಕು. ಸಾರ್ವಜನಿಕರು ಮಾಡುತ್ತಿರುವ ಸಹಾಯವನ್ನು ಸರಿಯಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿ ಆಲ್‌ ಇಂಡಿಯಾ ಟ್ರೇಡ್‌ ಯೂನಿಯನ್ ಕಾಂಗ್ರೆಸ್‌ (ಎಐಯುಟಿಯುಸಿ) ಜಿಲ್ಲಾ ಸಮಿತಿ ಸದಸ್ಯರು ನಗರದ ಟಿಪ್ಪುಸುಲ್ತಾನ ಉದ್ಯಾನದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಹಟ್ಟಿ ಚಿನ್ನದ ಗಣಿ ಕಾರ್ಮಿಕರ ವೇತನ ಒಪ್ಪಂದ 2016 ಮಾರ್ಚ್ 31ಕ್ಕೆ ಮುಗಿದಿದ್ದು, ಹೊಸ ವೇತನ ಒಪ್ಪಂದಕ್ಕಾಗಿ 2016 ಜೂನ್‌ 23ರಂದು ಬೇಡಿಕೆ ಪಟ್ಟಿ ಸಂಘಟನೆಯಿಂದ ಸಲ್ಲಿಸಲಾಗಿದೆ. ನಂತರ ಅಧಿಕಾರಕ್ಕೆ ಬಂದಿರುವ ಟಿಯುಸಿಐ ಸಂಯೋಜಿತ ಸಂಘ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ಮಸ್ಕಿ ತಾಲ್ಲೂಕಿನಿಂದ ಸುರಪುರದವರೆಗೆ ಗುರುತಿಸಿರುವ 14 ಬ್ಲಾಕ್‌ಗಳಲ್ಲಿ ಚಿನ್ನದ ಗಣಿಗಾರಿಕೆ ನಡೆಸಲು ಖಾಸಗಿ ವ್ಯಕ್ತಿಗಳು ಒಡ್ಡಿರುವ ಕಾನೂನು ತೊಡಕು ನಿವಾರಿಸಿ ಗಣಿಗಾರಿಕೆ ನಡೆಸಲು ಅಗತ್ಯ ಕ್ರಮ ಜರುಗಿಸಬೇಕು. ಹಟ್ಟಿ ಚಿನ್ನದ ಗಣಿಯಲ್ಲಿ ಗುತ್ತಿಗೆ ಪದ್ಧತಿ ರದ್ದುಪಡಿಸಿ ಕಾರ್ಮಿಕರನ್ನು ಕಾಯಂಗೊಳಿಸಬೇಕು. ಕೆಎಸ್‌ಆರ್‌ಟಿಸಿ ನೌಕರರ 42 ಬೇಡಿಕೆಗಳನ್ನು ಚರ್ಚಿಸಿ ಇತ್ಯರ್ಥಪಡಿಸಬೇಕು. 500 ಕಿ.ಮೀ. ಒಳಗೆ ಖಾಸಗಿ ಬಸ್‌ಗಳು ಪ್ರಯಾಣಿಕರನ್ನು ಕರೆದೊಯ್ಯದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೂ, ಜಾರಿಗೊಳಿಸಿಲ್ಲ. ಪೊಲೀಸ್ ಇಲಾಖೆ ಸೂಚನೆ ನೀಡಿ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ಕಾಂಟ್ರಾಕ್ಟ್‌ ಕ್ಯಾರೇಜ್‌ ಪರವಾನಿಗೆ ಪಡೆದು ಸ್ಟೇಜ್‌ ಕ್ಯಾರೇಜ್‌ ಆಗಿ ಖಾಸಗಿ ಬಸ್‌ಗಳನ್ನು ಚಲಿಸುವ ಮೂಲಕ ಸರ್ಕಾರಕ್ಕೆ ನಷ್ಟ ಮಾಡಲಾಗುತ್ತಿದೆ. ಸಾರಿಗೆ ನೌಕರರ ನಾಲ್ಕು ನಿಮಗಳನ್ನು ಒಂದೇ ಸಂಸ್ಥೆಯಾಗಿ ಮುಂದುವರೆಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ಅಡಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಹಾಗೂ ಸಹಾಯಕಿರಿಗೆ ಕನಿಷ್ಠ ವೇತನ ₨18 ಸಾವಿರ ನಿಗದಿಪಡಿಸಬೇಕು. ಪಿಂಚಣಿ ಯೋಜನೆ ಜಾರಿಗೊಳಿಸಿ ಇಡುಗಂಟು ನೀಡಲು ಬಜೆಟ್‌ನಲ್ಲಿ ಘೋಷಣೆ ಮಾಡಬೇಕು. ಪೂರ್ವ ಪ್ರಾಥಮಿಕ ಶಾಲೆಗಳನ್ನು ಅಂಗನವಾಡಿಗಳಲ್ಲಿ ಆರಂಭಿಸಿ ಉದ್ಯೋಗ ಭದ್ರತೆ ಒದಗಿಸಬೇಕು. ಎಂದರು.

ದೇವರಾಜು ಅರಸು ಹಾಗೂ ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಅರ್ಜಿ ಸಲ್ಲಿಸಿ ಎರಡು ವರ್ಷವಾಗಿದ್ದು, ಫಲಾನುಭವಿಗಳಿಗೆ ತೀವ್ರಗತಿಯಲ್ಲಿ ಮನೆ ನಿರ್ಮಿಸಬೇಕು. ಅಂಬೇಡ್ಕರ್ ಸಹಾಯಹಸ್ತ ಯೋಜನೆಯಲ್ಲಿ ಹಮಾಲರು 600 ಕ್ಕೂ ಅಧಿಕ ಅರ್ಜಿ ಸಲ್ಲಿಸಿದ್ದು, ಸ್ಮಾರ್ಟ್‌ಕಾರ್ಡ್ ನೀಡಬೇಕು ಎಂದು ಆಗ್ರಹಿಸಿದರು.

ಕಟ್ಟಡ ಕಾರ್ಮಿಕರಿಗೆ ಸಾಲ ರಹಿತವಾಗಿ ಮನೆ ನಿರ್ಮಾಣಕ್ಕೆ ₹ 5 ಲಕ್ಷ ಸಹಾಯಧನ ನೀಡಬೇಕು. ಕೆಲಸದ ಉಪಕರಣ ಖರೀದಿಗೆ ₹20 ಸಾವಿರ ನೀಡಬೇಕು. ಜಿಲ್ಲೆಯಲ್ಲಿ ಜಿಲ್ಲಾ ಕಾರ್ಮಿಕ ಅಧಿಕಾರಿ ಎರಡು ವರ್ಷಗಳಿಂದ ಇಲ್ಲವಾಗಿದ್ದು, ನಿಯೋಜಿಸಬೇಕು. ಆನ್‌ಲೈನ್‌ ಮೂಲಕ ನೋಂದಣಿ ಆರಂಭಿಸಬೇಕು ಎಂದು ಮನವಿ ಮಾಡಿದರು.

ಎಐಯುಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎ.ವಿಜಯಭಾಸ್ಕರ, ಎಐಯುಟಿಯುಸಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಬಾಷುಮಿಯಾ, ಎಸ್.ಎಂ.ಪೀರಸಾಬ್, ಶ್ರೀಶೈಲರೆಡ್ಡಿ, ನಾಗಾರಜ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.