ADVERTISEMENT

ವಿದ್ಯಾರ್ಥಿನಿ ಶಂಕಾಸ್ಪದ ಕೊಲೆ ಪ್ರಕರಣ ಮುಚ್ಚಲು ಹುನ್ನಾರ: ತನಿಖೆಗೆ ಮನವಿ

​ಪ್ರಜಾವಾಣಿ ವಾರ್ತೆ
Published 20 ಮೇ 2019, 13:21 IST
Last Updated 20 ಮೇ 2019, 13:21 IST
ಬೆಂಗಳೂರಿನ ಸಿಐಡಿ ವಿಭಾಗದ ಡಿಜಿಪಿಐ ಡಾ.ಟಿ.ಡಿ. ಪವಾರ್‌ ಅವರಿಗೆ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು
ಬೆಂಗಳೂರಿನ ಸಿಐಡಿ ವಿಭಾಗದ ಡಿಜಿಪಿಐ ಡಾ.ಟಿ.ಡಿ. ಪವಾರ್‌ ಅವರಿಗೆ ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಸೋಮವಾರ ಮನವಿ ಸಲ್ಲಿಸಿದರು   

ರಾಯಚೂರು: ಎಂಜಿನಿಯರಿಂಗ್‌ ವಿದ್ಯಾರ್ಥಿನಿ ಶಂಕಾಸ್ಪದ ಕೊಲೆ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷಾ ವರದಿ ಹೇಗೆ ಹೊರಬಂತು? ಕೊಲೆಯಾಗಿಲ್ಲ, ಅತ್ಯಾಚಾರವಾಗಿಲ್ಲ, ಇದು ಆತ್ಮಹತ್ಯೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವುದನ್ನು ಗಮನಿಸಿದರೆ, ಪ್ರಭಾವಿಗಳು ಈ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆಸಿದ್ದಾರೆ ಎನ್ನುವ ಅನುಮಾನವಿದೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸಬೇಕು ಎಂದು ರಾಯಚೂರು ಜಿಲ್ಲಾ ವಿಶ್ವಕರ್ಮ ಸಮಾಜದ ಮುಖಂಡರು ಸಿಐಡಿ ವಿಭಾಗದ ಡಿಜಿಪಿಐ ಡಾ.ಟಿ.ಡಿ. ಪವಾರ್‌ ಅವರಿಗೆ ಬೆಂಗಳೂರಿನಲ್ಲಿ ಸೋಮವಾರ ಮನವಿ ಸಲ್ಲಿಸಿದ್ದಾರೆ.

ಪ್ರಕರಣದ ತನಿಖಾ ಅಧಿಕಾರಿ ಡಿವೈಎಸ್‌ಪಿ ರವಿಶಂಕರ್‌ ಅವರಿಗೂ ಮನವಿ ಸಲ್ಲಿಸಿ ಮುಖಂಡರು ಚರ್ಚಸಿದ್ದಾರೆ.

ಬಂಧಿತ ಆರೋಪಿ ಸುದರ್ಶನ ಯಾದವ್‌ ಹಾಗೂ ಆತನ ಸಂಬಂಧಿ ಕಾನ್‌ಸ್ಟೆಬಲ್‌ ಆಂಜಿನೇಯ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಇದರಿಂದ ಸತ್ಯ ಹೊರಬರಲಿದೆ. ಈ ಕೊಲೆಗೆ ಆಂಜಿನೇಯ ಅವರದ್ದು ಕುಮ್ಮಕ್ಕು ಇದೆ ಎನ್ನುವ ಅನುಮಾನ ಬಂದಿದೆ. ಹೀಗಾಗಿ ಬರೀ ಅಮಾನತುಗೊಳಿಸಿದರೆ ಸಾಲದು, ಕೂಡಲೇ ಸೇವೆಯಿಂದ ತೆಗೆದು ಹಾಕಬೇಕು ಎಂದು ಕೋರಿದರು.

ADVERTISEMENT

ಕಾಲೇಜು ಕ್ಯಾಂಪಸ್‌ನಲ್ಲಿ ನಡೆಯುವ ಕೊಲೆಗಳನ್ನು ಆತ್ಮಹತ್ಯೆ ಎಂದು ಬಿಂಬಿಸಲಾಗುತ್ತಿದೆ. ಹೀಗಾಗಿ ಶಾಸಕ ಎಸ್‌.ಆರ್‌. ರೆಡ್ಡಿ ಹಾಗೂ ಅವರ ಪುತ್ರಿ ನಂದಿಕಾರೆಡ್ಡಿ ವಿರುದ್ಧವೂ ಕ್ರಮವಾಗಬೇಕು. ಮರಣೋತ್ತರ ಪರೀಕ್ಷೆ ಬಹಿರಂಗವಾಗದಿದ್ದರೂ ‘ಇದು ಆತ್ಮಹತ್ಯೆ’ ಎಂದು ಸಾಮಾಜಿಕ ತಾಲತಾಣಗಳಲ್ಲಿ ಹಾಕಲಾಗಿತ್ತು. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ವಿದ್ಯಾರ್ಥಿನಿ ಸಾವಿಗೆ ನ್ಯಾಯ ಒದಗಿಸಬೇಕು ಎಂದು ಮನವಿಯಲ್ಲಿ ಕೇಳಿಕೊಳ್ಳಲಾಗಿದೆ.

ವಿಶ್ವಕರ್ಮ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಬಾಬು ಪತ್ತಾರ್‌, ಜಿಲ್ಲಾ ಘಟಕದ ಅಧ್ಯಕ್ಷ ಗುರು ವಿಶ್ವಕರ್ಮ, ಉಪಾಧ್ಯಕ್ಷ ಮಾರುತಿ ಬಡಿಗೇರ, ಈಶ್ವರ ವಿಶ್ವಕರ್ಮ, ವಿದ್ಯಾರ್ಥಿನಿಯ ಪಾಲಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.