ADVERTISEMENT

ಮಧು ಪತ್ತಾರ್‌ ಸಾವು: ತನಿಖೆಗೆ ಒತ್ತಾಯ, ಜಾಲತಾಣದಲ್ಲಿ ವ್ಯಾಪಕ ಸ್ಪಂದನೆ, ಚರ್ಚೆ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 15:46 IST
Last Updated 19 ಏಪ್ರಿಲ್ 2019, 15:46 IST
   

ರಾಯಚೂರು:ನಗರದ ನವೋದಯ ಎಂಜಿನಿಯರಿಂಗ್‌ ಕಾಲೇಜಿನ ವಿದ್ಯಾರ್ಥಿನಿ ಮಧು ಪತ್ತಾರ ಅವರ ಅನುಮಾನಾಸ್ಪದ ಸಾವು ಪ್ರಕರಣವು ವ್ಯಾಪಕ ಚರ್ಚೆಗೀಡು ಮಾಡಿದ್ದು, ಪೊಲೀಸರು ಈ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿಲ್ಲ. ಆರೋಪಿಗಳನ್ನು ರಕ್ಷಿಸುವ ಹುನ್ನಾರ ನಡೆಸಿದ್ದಾರೆ ಎನ್ನುವ ಆರೋಪವನ್ನು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಪೋಷಕರು ಮಾಡುತ್ತಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಸುದರ್ಶನ ಯಾದವ್‌ ಎನ್ನುವ ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಐಪಿಸಿ ಸೆಕ್ಷೆನ್‌ 174 ಅಡಿ ಪ್ರಕರಣ ದಾಖಲಾಗಿದೆ. ಆದರೆ, ಮರಣೋತ್ತರ ಪರೀಕ್ಷಾ ವರದಿ ಬಂದ ನಂತರ ಹೆಚ್ಚಿನ ವಿವರ ಗೊತ್ತಾಗುತ್ತದೆ ಎಂದು ನೇತಾಜಿ ನಗರ ಠಾಣೆ ಪೊಲೀಸರು ಹೇಳು‌ತ್ತಿದ್ದಾರೆ.

ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಹಾಗೂ ಸಂಘಟನೆಗಳು ಹೋರಾಟ ಆರಂಭಿಸಿವೆ. ‘ಮಧುಗೆ ನ್ಯಾಯಕೊಡಿ’ ಎಂಬು ಹ್ಯಾಷ್‌ಟ್ಯಾಗ್‌ನೊಂದಿಗೆ ಈ ಪ್ರಕರಣ ಸಾಮಾಜಿಕ ಮಾಧ್ಯಮಗಳಲ್ಲೂ ಸದ್ದು ಮಾಡುತ್ತಿದೆ.

ADVERTISEMENT

ಏತನ್ಮಧ್ಯೆ ‘ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವಿನ ಪ್ರಕರಣ ಅತೀವ ನೋವು ತಂದಿದೆ.ರಾಯಚೂರು ಎಸ್‌ಪಿ ಅವರಿಂದ ಮಾಹಿತಿ ಪಡೆದಿದ್ದು,ನಿಷ್ಪಕ್ಷಪಾತ ತನಿಖೆ ನಡೆಸುವಂತೆ ಹಾಗೂ ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ’ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದಾರೆ.

‘ಈ ಪ್ರಕರಣ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಾಣ ಮಾಡಿದೆ.ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಉಗ್ರ ಕ್ರಮ ಕೈಗೊಳ್ಳಬೇಕು’ ಎಂದು ವಿದ್ಯಾರ್ಥಿ ಸಮೂಹ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ.

ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್‌,ಅಖಿಲ ಭಾರತ ಜನವಾದಿ ಮಹಿಳಾ ಸಂಘ ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಮುಚ್ಚಿಹೋಗಬಾರದು

ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಕರಣ ಸದ್ದು ಮಾಡಿದ್ದು, ‘ಚುನಾವಣೆಯ ಸುದ್ದಿಗಳಲ್ಲಿ ಈ ಸುದ್ದಿ ಮುಚ್ಚಿ ಹೋಗಬಾರದು.ಇದು ಇಡೀ ಭಾರತವೇ ತಲೆ ತಗ್ಗಿಸುವಂತ ಹೇಯ ಕೃತ್ಯ’ ಎಂದು ಬಹುಪಾಲು ಜನರು ಬರೆದುಕೊಂಡಿದ್ದರೆ, ‘ಈ ದೇಶದಲ್ಲಿ ಮತ್ತೆ ಹುಟ್ಟಿಬರಬೇಡ ಮಗಳೆ’ ಎಂದು ಬಿಂದು ಗೌಡ ಎಂಬುವರು ಆಕ್ರೋಶ ಭರಿತ ಬರಹದ ಪೋಸ್ಟ್‌ ಮಾಡಿದ್ದಾರೆ.

ಹಿನ್ನೆಲೆ: ರಾಯಚೂರಿನ ಐಡಿಎಸ್‌ಎಂಟಿ ಬಡಾವಣೆ ನಿವಾಸಿ ನಾಗರಾಜ ಅವರ ಕಿರಿಯ ಪುತ್ರಿ ಮಧು ಪತ್ತಾರ ಏಪ್ರಿಲ್‌ 13 ರಂದು ಬೆಳಿಗ್ಗೆ ಕಾಲೇಜಿಗೆ ಹೋಗಿ ವಾಪಸ್‌ ಬಂದಿರಲಿಲ್ಲ. ಇದರಿಂದ ಆತಂಕಗೊಂಡ ಪಾಲಕರು ಸಂಬಂಧಿಕರನ್ನು ವಿಚಾರಿಸಿದ್ದಾರೆ.

ಕಾಲೇಜು ಹಿಂಭಾಗದಲ್ಲಿರುವ ಮಾಣಿಕಪ್ರಭು ದೇವಸ್ಥಾನಕ್ಕೆ ಹೊಂದಿಕೊಂಡ ಗುಡ್ಡದ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮಧು ಶವವು ಏ. 15 ರ ಸಂಜೆ ಪತ್ತೆಯಾಗಿತ್ತು. ಶವ ಸುಟ್ಟ ಸ್ಥಿತಿಯಲ್ಲಿ ನೆಲಕ್ಕೆ ತಾಗಿತ್ತು. ಅಲ್ಲದೆ, ನೇಣು ಕುಣಿಕೆ ಮುಖದ ಮುಂಭಾಗದಲ್ಲಿತ್ತು.

ಪ್ರಕರಣ ತನಿಖೆ ದಾರಿ ತಪ್ಪುತ್ತದೆ ಎಂದು ಮಧು ಪತ್ತಾರ ಅವರ ಪೋಷಕರು ಮಾಧ್ಯಮಗಳೊಂದಿಗೆ ಮಾತನಾಡಲು ನಿರಾಕರಿಸುತ್ತಿದ್ದಾರೆ.

ಮನ ಕಲಕುವ ಪತ್ರ

‘ಜನ್ಮದಿನದ ಶುಭಾಶಯಗಳು ತಂಗಿ ಮಧು (ಸಿಸ್ಸಿ). ಇಂದು ಏಪ್ರಿಲ್‌ 17 ನಿನ್ನ ಜನ್ಮದಿನ ಇದ್ದರೂ ಸಂತೋಷ ಸಂಭ್ರಮ ಉಳಿದಿಲ್ಲ. ಏ. 16 ರಂದು ನಿನ್ನ ಅಂತ್ಯಕ್ರಿಯೆ ಮಾಡಿ ಒಬ್ಬಂಟಿಯಾಗಿದ್ದೇನೆ. ಎಲ್ಲ ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದೇನೆ ಎಂದು ನೀನು ಡೆತ್‌ನೋಟ್‌ನಲ್ಲಿ ಬರೆದುಕೊಂಡಿದ್ದು ಶುದ್ಧ ಸುಳ್ಳು. ಏ. 12 ರಂದು ಫಲಿತಾಂಶ ನೋಡಿದಾಗ ಎಲ್ಲ ವಿಷಯಗಳಲ್ಲಿ ಉತ್ತೀರ್ಣರಾಗಿರುವುದು ಸ್ಪಷ್ಟವಾಗಿತ್ತು. ಈ ಡೆತ್‌ನೋಟ್‌ ಬರೆಯುವುದಕ್ಕೆ ಯಾವುದೋ ಪಾಪಿಗಳು ನಿನಗೆ ಒತ್ತಾಯ ಮಾಡಿದ್ದಾರೆ. ಇದು ಆತ್ಮಹತ್ಯೆಯಲ್ಲ ಎನ್ನುವುದಕ್ಕೆ ಇದು ಸಾಕ್ಷಿ. ಇದೊಂದು ಯೋಜಿತ ಕೊಲೆ. ನ್ಯಾಯ ಸಿಗಬೇಕು. ಆರೋಪಿ ಸುದರ್ಶನ ಯಾದವ್‌ ಮತ್ತು ಜೊತೆಗಿದ್ದವರನ್ನು ಗಲ್ಲಿಗೇರಿಸಬೇಕು....’ ಎಂದು ಮಧು ಪತ್ತಾರ ಅವರ ಸಹೋದರಿ ಮೇಘನಾ ಪತ್ತಾರ ಬರೆದ ಪತ್ರವು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.