ADVERTISEMENT

ಮುಸ್ಲಿಂ, ದಲಿತರ ಮೇಲಿನ ದೌರ್ಜನ್ಯ ತಡೆಗೆ ಒತ್ತಾಯ

ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 15:34 IST
Last Updated 25 ಜೂನ್ 2019, 15:34 IST
ರಾಯಚೂರಿನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಸದಸ್ಯರು ದೌರ್ಜನ್ಯಗಳನ್ನು ತಡೆಗಟ್ಟಲು ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು
ರಾಯಚೂರಿನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಜಿಲ್ಲಾ ಘಟಕದ ಸದಸ್ಯರು ದೌರ್ಜನ್ಯಗಳನ್ನು ತಡೆಗಟ್ಟಲು ಒತ್ತಾಯಿಸಿ ಮಂಗಳವಾರ ಪ್ರತಿಭಟನೆ ನಡೆಸಿದರು   

ರಾಯಚೂರು: ಮುಸ್ಲಿಂ ಹಾಗೂ ದಲಿತರ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿಗೆ ಎದುರಿಗೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಕಳೆದ ನಾಲ್ಕು ತಿಂಗಳಿನಿಂದ ರಾಜ್ಯದಲ್ಲಿ ದೌರ್ಜನ್ಯಗಳು ನಿರಂತರವಾಗಿ ನಡೆಯುತ್ತಿದ್ದು, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ದಲಿತ ಯುವಕನ ಮೇಲೆ ಹಲ್ಲೆ ಮಾಡಿ ಅವಮಾನಿಸಲಾಗಿದೆ. ರಾಮನಗರ ವ್ಯಾಪ್ತಿಯಲ್ಲಿ ಅಮಾಯಕ ಯುವಕನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿದ ಮನವಿಯಲ್ಲಿ ಆರೋಪಿಸಿದರು.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಅಸ್ಲಾಮ್ ಎಂಬ ಯುವಕನ ಕೊಲೆಮಾಡಿ ಚುನಾವಣೆ ವೇಳೆಯ ರಾಜಕೀಯ ದ್ವೇಷವೆಂದು ಬಿಂಬಿಸಲಾಗಿದೆ. ಕೊಲೆಯಲ್ಲಿ ಬಿಜೆಪಿ ಮುಖಂಡರು ಭಾಗಿಯಾಗಿರುವ ಮಾಹಿತಿಯಿದೆ. ಬೆಂಗಳೂರಿನಲ್ಲಿ ತನ್ವೀರ್‌ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ. ರಾಜ್ಯದಲ್ಲಿ ಇಂತಹ ಪ್ರಕರಣಗಳನ್ನು ಹೆಚ್ಚುತ್ತಿರುವುರಿಂದ ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ದೌರ್ಜನ್ಯ ಪ್ರಕರಣಗಳಿಗೆ ಕಾರಣರಾದವರನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು. ಅಮಾಯಕ ಯುವಕರನ್ನು ಬಿಡುಗಡೆ ಮಾಡಬೇಕು. ಕೊಲೆಯಾದವರ ಕುಟುಂಬಕ್ಕೆ ಪರಿಹಾರ ನೀಡಬೇಕು. ರಾಜ್ಯದಲ್ಲಿ ಶಾಂತಿ ಕಾಪಾಡುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಸೈಯದ್ ಇರ್ಫಾನ್, ಮಾರ್ಟಿನ್, ಅನ್ಸಾರಿ, ಮಸ್ರೂರ್ ಅಮ್ಮದ್, ಶಫಿ, ಶಾಲಂ, ಸಲೀಮ್ ಖಾದ್ರಿ, ಅಜಾರ್, ಅಜಾಜುದ್ದಿನ್, ಸಲ್ಮಾ ಖದೀರ್, ಇನಾಯತ್, ಆಸೀಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.