ADVERTISEMENT

ಸಿಡಿಇಎಲ್ ಹಗರಣದ ಸಮಗ್ರ ತನಿಖೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2020, 12:36 IST
Last Updated 2 ಡಿಸೆಂಬರ್ 2020, 12:36 IST
ಎಸ್‌.ಆರ್‌.ಹಿರೇಮಠ
ಎಸ್‌.ಆರ್‌.ಹಿರೇಮಠ   

ರಾಯಚೂರು: 'ಕಾಫಿ ಡೇ ಎಂಟರ್ ಪ್ರೈಜಸ್ ಲಿಮಿಟೆಡ್ (ಸಿಡಿಇಎಲ್) ಹಗರಣದ ಕುರಿತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮಗ್ರ ತನಿಖೆ ನಡೆಸುವಂತೆ, ಪೂರಕ ಮಾಹಿತಿ ಸಹಿತ ಪ್ರಧಾನಮಂತ್ರಿ ಸೇರಿ 11 ಕಚೇರಿಗಳಿಗೆ ಪತ್ರ ರವಾನಿಸಲಾಗಿದೆ’ ಎಂದು ಸಮಾಜ ಪರಿವರ್ತನೆ ಸಮುದಾಯ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿಬಿಐ ನಿವೃತ್ತ ಡಿಐಜಿ ಅಶೋಕಕುಮಾರ್‌ ಮಲ್ಹೋತ್ರಾ ಅವರು ಹಗರಣದ ತನಿಖೆ ಮಾಡಿ ಸಲ್ಲಿಸಿದ ವರದಿಯು ಕಂಪೆನಿ ಫಲಾನುಭವಿಗಳಾದ ಮಾಳವಿಕಾ. ನಿತೀನ್‌ ಬಾಗಮಾನೆ, ಬಾಲರಾಜ ಕುರಿತು ಉಲ್ಲೇಖಿಸಿಲ್ಲ. ಷೇರುಪೇಟೆ ಮೂಲಕ ಸಾರ್ವಜನಿಕರ ಹಣ ಕಬಳಿಸಿ ಪ್ರಪಂಚದಾದ್ಯಂತ ಹೂಡಿಕೆ ಮಾಡಿರುವ ವಿಷಯ ಅದರಲ್ಲಿ ಬಹಿರಂಗಗೊಳಿಸಿಲ್ಲ’ ಎಂದರು.

‘ದಿ.ವಿ.ಜಿ.ಸಿದ್ದಾರ್ಥ ಅಕ್ರಮ ಸಂಪಾದನೆಗೆ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರ ಸಹಕಾರವೂ ಇದೆ. ಸಾರ್ವಜನಿಕ ಆಸ್ತಿ ಕಬಳಿಸಿದಕ್ಕಾಗಿ ಎಸ್‌.ಎಂ.ಕೃಷ್ಣ, ಅವರ ಪುತ್ರಿಯರು, ಅಳಿಯ ಹಾಗೂ ಸಂಬಂಧಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿಯಲ್ಲಿ ತನಿಖೆ ಮಾಡಬೇಕು ಎಂದು ಕೋರಲಾಗಿದೆ’ ಎಂದು ಹೇಳಿದರು.

ADVERTISEMENT

‘ಕಂಪೆನಿ ನಷ್ಟದ ಕುರಿತು ನಿರ್ದೇಶಕರಿಗೆ, ಕುಟುಂಬದವರಿಗೆ ತಿಳಿಸಿಲ್ಲ ಎಂದು ಸಿದ್ದಾರ್ಥ ಅವರು ಮರಣಪತ್ರದಲ್ಲಿ ಬರೆದಿರುವುದು ಸುಳ್ಳಿನಿಂದ ಕೂಡಿದೆ. ಕಾಯ್ದೆ ಪ್ರಕಾರ ಕಂಪೆನಿಯ ಎಲ್ಲ ಆಗುಹೋಗುಗಳಿಗೆ ನಿರ್ದೇಶಕರೂ ಹೊಣೆಗಾರರು. ಸಿಡಿಇಎಲ್‌ ಮೂಲಕ ₹3,600 ಕೋಟಿ ಸಂಗ್ರಹಿಸಿ ಬೇರೆಬೇರೆ 49 ಕಂಪೆನಿಗಳಿಗೆ ಹಣ ತೊಡಗಿಸಲಾಗಿದೆ. ವಿದೇಶ ಕಂಪೆನಿಯಲ್ಲಿ ಪಾಲುಪಡೆದ ಗೃಹಣಿ ಮಾಳವಿಕಾ ಹೆಗಡೆ ಅವರಿಗೆ ₹128 ಕೋಟಿ ಎಲ್ಲಿಂದ ಬಂತು ಎಂಬುದು ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.