ADVERTISEMENT

ರೈತರಿಗೆ ಪರಿಹಾರ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 13:23 IST
Last Updated 2 ಡಿಸೆಂಬರ್ 2021, 13:23 IST
ಚಾಮರಸ ಮಾಲಿಪಾಟೀಲ
ಚಾಮರಸ ಮಾಲಿಪಾಟೀಲ   

ರಾಯಚೂರು: ಜಿಲ್ಲೆಯಲ್ಲಿ ಈಚಗೆ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆ ನಷ್ಟವಾಗಿದ್ದು ಕೃಷಿ ಇಲಾಖೆಯಿಂದ ಅವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಾಗುತ್ತಿದೆ. ಇದರಿಂದಾಗಿ ಅನೇಕ ರೈತರು ಪರಿಹಾರದಿಂದ ವಂಚಿತರಾಗುತ್ತಿದ್ದಾರೆ. ವೈಜ್ಞಾನಿಕ ಸಮಿಕ್ಷೆ ಮಾಡಿ ಪರಿಹಾರ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ಈ ಹಿಂದೆ ಪ್ರವಾಹದಿಂದ ಅನೇಕ ರೈತರ ಬೆಳೆಗಳು ಹಾಳಾಗಿವೆ. ಪ್ರವಾಹದಿಂದ ಬೆಳೆ ಹಾನಿ ಬಗ್ಗೆ ಸಮಿಕ್ಷೆ ನಡೆಸಿದ್ದು, ಸರಿಯಾದ ರೀತಿಯಲ್ಲಿ ಸಮಿಕ್ಷೆ ನಡೆಸಿಲ್ಲ ಕೇವಲ ತಗ್ಗು ಪ್ರದೇಶಗಳಲ್ಲಿ ನೀರು ಹೋಗಿದರೆ ಮಾತ್ರ ನಷ್ಟ ಎಂದು ನಿಯಮ ಮಾಡಿದೆ ಎಂದು ದೂರಿದರು.

ಮಳೆಯಿಂದ ತೊಗರಿ, ಭತ್ತ, ಹತ್ತಿ ಹಾಗೂ ಮೆಣಸಿನಕಾಯಿ ಬೆಳೆ ಹಾನಿಯಾಗಿದ್ದು ಸರಿಯಾದ ಸಮೀಕ್ಷೆ ಮಾಡಬೇಕು. ಹತ್ತಿಗೆ ಗುಲಾಬಿ ಕಾಯಿಕೊರಕ ರೋಗ ತಗುಲಿದೆ. ತೋಟಗಾರಿಕೆ ಬೆಳೆಗಳು ಹಾನಿಯಾದರೂ ಕೃಷಿ ಇಲಾಖೆ ಕುಂಟುನೆಪ ಹೇಳುತ್ತಿದೆ ಎಂದು ದೂರಿದರು.

ADVERTISEMENT

ತುಂಗಭದ್ರ ಮತ್ತು ನಾರಾಯಣಪುರ ಕಾಲುವೆಗಳಲ್ಲಿ ನೀರು ಹರಿಸದೇ ಕಾರಣ ಮೆಣಸಿನಕಾಯಿ ಬೆಳೆಗಾರರಿಗೆ ಆತಂಕ ತಂದಿದೆ. ಜಿಲ್ಲಾಡಳಿತ ಕೂಡಲೇ ನಾಲೆಗಳಿಗೆ ನೀರು ಹರಿಸಬೇಕು. ಇಲ್ಲದಿದ್ದರೆ ಡಿಸೆಂಬರ್ 5ರಂದು ದೇವದುರ್ಗ ತಾಲ್ಲೂಕಿನಲ್ಲಿ ರೈತರ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

ರಾಜ್ಯ ಸಮಿತಿಯ ಜಿಲ್ಲಾಧ್ಯಕ್ಷ ಪ್ರಭಾಕರ್ ಪಾಟೀಲ್ ಇಂಗಳದಾಳ್, ರಾಮಣ್ಣ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.