ADVERTISEMENT

'ರಾಯಚೂರು ವಿವಿಗೆ ಮೂಲಸೌಕರ್ಯ ಕಲ್ಪಿಸಲು ಒತ್ತಾಯ'

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2023, 16:20 IST
Last Updated 9 ನವೆಂಬರ್ 2023, 16:20 IST
ತಾಲ್ಲೂಕಿನ ರಾಯಚೂರು ವಿಶ್ವವಿದ್ಯಾಲಯದ ಆವರಣದಲ್ಲಿ ದಲಿತ ವಿಧ್ಯಾರ್ಥಿ ಪರಿಷತ್ (ಡಿವಿಪಿ) ಗುರುವಾರ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಹರೀಶ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. 
ತಾಲ್ಲೂಕಿನ ರಾಯಚೂರು ವಿಶ್ವವಿದ್ಯಾಲಯದ ಆವರಣದಲ್ಲಿ ದಲಿತ ವಿಧ್ಯಾರ್ಥಿ ಪರಿಷತ್ (ಡಿವಿಪಿ) ಗುರುವಾರ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಹರೀಶ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.     

ರಾಯಚೂರು: ಇಲ್ಲಿನ ರಾಯಚೂರು ವಿಶ್ವವಿದ್ಯಾಲಯಕ್ಕೆ ಕಾಯಂ ಉಪನ್ಯಾಸಕರನ್ನು ನೇಮಿಸಲು ಒತ್ತಾಯಿಸಿ ಸರ್ಕಾರಕ್ಕೆ ಪತ್ರ ಬರೆಯಬೇಕು. ಬಾಕಿ ಉಳಿದಿರುವ ಎಲ್ಲ ಸೆಮಿಸ್ಟರ್‌ಗಳ ಫಲಿತಾಂಶ ಬಿಡುಗಡೆ ಮಾಡಿ ಅಂಕಪಟ್ಟಿ ವಿತರಿಸಬೇಕು ಎಂದು ದಲಿತ ವಿಧ್ಯಾರ್ಥಿ ಪರಿಷತ್ (ಡಿವಿಪಿ) ಪ್ರತಿಭಟನೆ ನಡೆಸಿದೆ.

ರಾಯಚೂರು ತಾಲ್ಲೂಕಿನ ಯರಗೇರಾ ಬಳಿಯ ರಾಯಚೂರು ವಿಶ್ವವಿದ್ಯಾಲಯದ ಕ್ಯಾಂಪಸ್ ಬಳಿಯಲ್ಲಿ ಜಿಲ್ಲಾ ಘಟಕದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ವಿಶ್ವವಿದ್ಯಾಲಯದ ಕುಲಪತಿ ಪ್ರೋ.ಹರೀಶ ರಾಮಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು. 

ರಾಯಚೂರು ವಿಶ್ವವಿದ್ಯಾಲಯ ಆರಂಭವಾಗಿ 3 ವರ್ಷಗಳಾಗುತ್ತಿದೆ. ವಿಶ್ವವಿದ್ಯಾಲಯದ ಅಧೀನದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಹಲವಾರು ಶೈಕ್ಷಣಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಗ್ರಂಥಾಲಯದ ಅವಧಿಯನ್ನು ಹೆಚ್ಚಿಸಿ ಎಲ್ಲ ವಿಭಾಗದ ಪುಸ್ತಕಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ವಿಶ್ವವಿದ್ಯಾಲಯದ ಬಳಿ ಎಲ್ಲ ಸರ್ಕಾರಿ ಬಸ್‌ಗಳು ನಿಲುಗಡೆಯಾಗಬೇಕು. ವಿಶ್ವವಿದ್ಯಾಲಯದ ಎಲ್ಲ ವಿದ್ಯಾರ್ಥಿಗಳ ಕಾಲೇಜು ಶುಲ್ಕ ಮತ್ತು ಪರೀಕ್ಷಾ ಶುಲ್ಕ‌ ಕಡಿಮೆ ಮಾಡಬೇಕು. ಎಸ್‌ಸಿ, ಎಸ್‌ಟಿ, ಒಬಿಸಿ, ಅಲ್ಪಸಂಖ್ಯಾತರ ಇಲಾಖೆಗಳು ವಸತಿ ನಿಲಯಗಳನ್ನು ಮಂಜೂರು ಮಾಡುವಂತೆ ಸರ್ಕಾರ ಪತ್ರ ಬರೆಯಬೇಕು ಎಂದು ಒತ್ತಾಯಿಸಿದರು.

ADVERTISEMENT

ವಸತಿ ನಿಲಯದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಭದ್ರತೆ ನೀಡಲು ಮುಖ್ಯದ್ವಾರಕ್ಕೆ ಸಿ.ಸಿ.ಟಿವಿ ಕ್ಯಾಮೆರಾ ಅಳವಡಿಸಬೇಕು. ಕಾಯಂ ಕಾವಲುಗಾರರನ್ನು ನೇಮಕ ಮಾಡಬೇಕು ಎಂದು ಮನವಿ ಮಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಕುಲಪತಿ ಪ್ರೊ.ಹರೀಶ್ ರಾಮಸ್ವಾಮಿ, ವಿದ್ಯಾರ್ಥಿಗಳ ಕಮಿಟಿ ರಚನೆ ಮಾಡಿ, ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಮೌನೇಶ ಜಾಲವಾಡಗಿ, ಮಧುಸೂದನ, ಸಂತೋಷ ಪಾಟೀಲ, ಅಂಬರೀಶ, ಚೆನ್ನಯ್ಯಸ್ವಾಮಿ, ಅಹಮದ್ ಪಾಷಾ, ಸುರೇಶ, ಮಾರ್ತಾಂಡ, ಮೌನೇಶ್, ನಿತಿನ್, ಚಂದ್ರು, ಉಮೇಶ, ಶರಣು, ಪ್ರಶಾಂತ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.