ADVERTISEMENT

‘ಅಕ್ರಮ ನೀರಾವರಿ ನಿಯಂತ್ರಣವಾಗಿಲ್ಲ: ಮತ್ತೆ ಹೋರಾಟ’

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 14:57 IST
Last Updated 15 ಸೆಪ್ಟೆಂಬರ್ 2020, 14:57 IST

ರಾಯಚೂರು: ತುಂಗಭದ್ರಾ ಎಡದಂಡೆ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಅಕ್ರಮ ನೀರಾವರಿ ನಡೆಯುತ್ತಿರುವ ಬಗ್ಗೆ ಅನೇಕ ದಾಖಲೆಗಳು ಇದ್ದರೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಸ್ಪಂದಿಸದೇ ಅಧಿವೇಶನ ನಡೆಯುವವರೆಗೆ ಕಾಯುವಂತೆ ಹೇಳಿದ್ದಾರೆ. ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಮುಂಬರುವ ದಿನಗಳಲ್ಲಿ ತೀವ್ರ ಹೋರಾಟ ಆರಂಭಿಸಬೇಕಾಗುತ್ತದೆ ಎಂದು ತುಂಗಭದ್ರಾ ಎಡದಂಡೆ ಕಾಲುವೆ ಹಿತರಕ್ಷಣಾ ಸಮಿತಿಯ ಸಂಚಾಲಕ ರಾಘವೇಂದ್ರ ಕುಷ್ಟಗಿ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಸಚಿವರ ಜೊತೆ ನಡೆದ ಸಭೆಯಲ್ಲಿ ಮೇಲ್ಭಾಗದ ಮತ್ತು ಕೆಳಭಾಗದ ರೈತ ಮುಖಂಡರು, ಜನಪ್ರತಿನಿಧಿಗಳು ಭಾಗಿಯಾಗಿ ಅಕ್ರಮ ನೀರಾವರಿಯ ಕುರಿತು ಚರ್ಚಿಸಲಾಗಿದೆ. ಮೇಲ್ಭಾಗದ ಒಂದು ಲಕ್ಷಕ್ಕೂ ಅಧಿಕ ಎಕರೆ ಭೂಮಿಯಲ್ಲಿ ಅಕ್ರಮ ನೀರಾವರಿ ನಡೆಯುತ್ತಿದೆ ಎನ್ನುವುದು ಸರ್ಕಾರವೇ ವರದಿ ನೀಡಿದೆ. ಸರ್ಕಾರದ ವಿದ್ಯುತ್, ಕುಡಿಯುವ ನೀರನ್ನು ಅಕ್ರಮ ಬಳಕೆ ಮಾಡುತ್ತಿರುವುದರಿಂದ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿದೆ. ದರೋಡೆ ಮಾಡುತ್ತಿರುವ ಸಂದರ್ಭದಲ್ಲಿ ಚರ್ಚೆಯ ಅವಶ್ಯಕತೆ ಏನು ಎಂದು ಸಭೆಯಲ್ಲೇ ನೇರವಾಗಿ ಪ್ರಶ್ನಿಸಿದ್ದೇವೆ ಎಂದರು.

ಹಿತ ರಕ್ಷಣಾ ಸಮಿತಿಯಿಂದ ಸಿಂಧನೂರು ತಾಲ್ಲೂಕಿನ ಕೆಲವೆಡೆ ಅಕ್ರಮ ಪೈಪು ತೆರವುಗೊಳಿಸಿದ ನಂತರ ಕೆಲ ದಿನಗಳು ಅಕ್ರಮಕ್ಕೆ ಬ್ರೇಕ್ ಬಿದ್ದಿತ್ತು. ಆದರೆ, ಪುನಃ ಮೇಲ್ಭಾಗದಲ್ಲಿ ಅಕ್ರಮ ನಿರು ಪಡೆಯಲಾಗುತ್ತಿದ್ದು ಕೊಪ್ಪಳ ಹಾಗೂ ರಾಯಚೂರು ಜಿಲ್ಲಾಧಿಕಾರಿಗಳು ಮೌನ ವಹಿಸಿದ್ದಾರೆ. ಅವರಿಗೆ ಯಾವ ಶಕ್ತಿಗಳು ತಡೆಯುತ್ತಿದೆ ಎಂದು ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಸಮಿತಿ ಸಂಚಾಲಕ ಚಾಮರಸ ಮಾಲಿಪಾಟೀಲ ಮಾತನಾಡಿ, ಅಕ್ರಮ ನೀರು ಬಳಕೆಯನ್ನು ತಡೆಗಟ್ಟುವಲ್ಲಿ ಸಚಿವ ರಮೇಶ ಜಾರಕಿಹೊಳಿಯವರ ಮುತುವರ್ಜಿ ಮೆಚ್ಚತಕ್ಕದ್ದು, ಕೇವಲ ತುಂಗಭದ್ರಾ ಕಾಲುವೆಯಲ್ಲಿ ಅಕ್ರಮ ನೀರಾವರಿ ನಡೆಯುತ್ತಿಲ್ಲ. ಎಲ್ಲಾ ಕಡೆಯೂ ಅಕ್ರಮ ನಡೆಯುತ್ತಿರುವುದರಿಂದ ಸಮ್ಮತ ನಿರ್ಣಯ ಕೈಗೊಳ್ಳುವ ಅನಿವಾರ್ಯತೆಯಿದ್ದು, ಅಧಿವೇಶನದವರೆಗೆ ಕಾಯುವಂತೆ ತಿಳಿಸಿದ್ದಾರೆ. ಆನಂತರದ ದಿನಗಳಲ್ಲಿ ಅಕ್ರಮ ನೀರಾವರಿ ತಡೆಗಟ್ಟುವಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದರೆ ಅನಿರ್ದಿಷ್ಠಾವಧಿ ಧರಣಿಯಂತಹ ಹೋರಾಟಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.

ಕಳೆದ ತಿಂಗಳು ಕೆಳಭಾಗದ ರೈತರ ಜೊತೆ ಸೇರಿ ಕೊಪ್ಪಳ ಜಿಲ್ಲೆಯ ಕುಷ್ಟಗಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರಿಂದ ಈಗ ಕೆಳಭಾಗದ 104 ಗೇಟ್‍ವರಗೆ 5 ಅಡಿ ನೀರನ್ನು ಕಾಣುವಂತಾಗಿದೆ. ಇದು ಹೋರಾಟದ ಪ್ರತಿಫಲವಾಗಿದ್ದು, ಮುಂದಿನ ಹೋರಾಟ ಅಕ್ರಮ ನೀರಾವರಿ ಬಳಕೆ ನಿಲ್ಲಿಸುವುದಾಗಿದ್ದು, ಸಚಿವರ ಭರವಸೆ ಮೇರೆಗೆ ಕಾಯುವ ನಿರ್ಣಯಕ್ಕೆ ಬಂದಿದ್ದು, ಅಧಿವೇಶನದ ನಂತರ ಮುಂದಿನ ತೀರ್ಮಾನದ ಬಗ್ಗೆ ಚರ್ಚಿಸಲಿದ್ದೇವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡ ನಾಗನಗೌಡ ಹರವಿ, ಖಾಜಾ ಅಸ್ಲಂಪಾಶಾ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.