
ಸಿಂಧನೂರು: ನಗರದ ಹೃದಯ ಭಾಗದಲ್ಲಿರುವ ಮಿನಿವಿಧಾನಸೌಧ ಕಚೇರಿಯ ಆವರಣ ಕಸದ ತಾಣವಾಗಿ ಮಾರ್ಪಟ್ಟಿದೆ ಎಂದರೆ ಯಾರಾದರೂ ಹುಬ್ಬೇರಿಸಬಹುದು. ಆದರೆ ಸಿಂಧನೂರಿನಲ್ಲಿ ಇದು ನಿಜವಾಗಿರುವುದು ವಿಪರ್ಯಾಸದ ಸಂಗತಿ.
ಮಿನಿ ವಿಧಾನಸೌಧ ಕಟ್ಟಡದಲ್ಲಿಯೇ ಉಪನೋಂದಣಿ ಕಚೇರಿ, ಉಪಖಜಾನೆ ಕಚೇರಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಕಚೇರಿ ಮತ್ತು ನಿವೃತ್ತ ಸರ್ಕಾರಿ ನೌಕರರ ಸಂಘದ ಕಚೇರಿಯೂ ಇದೇ ಆವರಣದಲ್ಲಿವೆ. ಹೀಗಾಗಿ ಪ್ರತಿನಿತ್ಯ ನಗರ ಸೇರಿದಂತೆ ಗ್ರಾಮೀಣ ಪ್ರದೇಶಗಳಿಂದ ಸಾರ್ವಜನಿಕರು, ವೃದ್ಧರು, ನಿವೃತ್ತ ನೌಕರರು, ಮಹಿಳೆಯರು, ವಿದ್ಯಾರ್ಥಿಗಳು ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಹಣಿ, ಭೂ ದಾಖಲೆ, ಉಪನೋಂದಣಿ ಕಚೇರಿ ಸೇರಿದಂತೆ ಹತ್ತಾರು ಕೆಲಸಗಳಿಗೆ ಬಂದು-ಹೋಗುವುದು ಸಾಮಾನ್ಯವಾಗಿದೆ.
ಆದರೆ, ವಿಪರ್ಯಾಸವೆಂದರೆ ಮಿನಿವಿಧಾನಸೌಧದ ಮುಖ್ಯದ್ವಾರ ಪ್ರವೇಶಿಸುತ್ತಿದ್ದಂತೆ ಎಡ ಮತ್ತು ಬಲ ಭಾಗದಲ್ಲಿ ಸಾರ್ವಜನಿಕರು ಕಾಂಪೌಂಡ್ ಗೋಡೆಗಳಿಗೆ ಮೂತ್ರ ವಿಸರ್ಜನೆ ಮಾಡುವುದು ಕಂಡುಬರುತ್ತದೆ. ಅಲ್ಲದೆ, ಕಟ್ಟಡದ ಹಿಂಭಾಗಕ್ಕೆ ಹೋದರೆ ಪರಿಸ್ಥಿತಿ ಹೇಳತೀರದು. ಜಾಲಿಗಿಡಗಳು ಬೆಳೆದು ನಿಂತಿವೆ. ಕಚೇರಿಯ ಕಸವನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ.
ಇಲ್ಲಿಯೂ ಮಲ ಮೂತ್ರ ಮಾಡುತ್ತಿರುವುದು ಗಬ್ಬೆದ್ದು ಹೋಗಿದೆ. ಪಕ್ಕದಲ್ಲಿರುವ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಬಳಸಿದ ಸಿರಿಂಜು, ಗುಲ್ಕೋಸ್ ಬಾಟಲ್, ವೈಯರ್‌ಗಳು ಸೇರಿದಂತೆ ಘನತ್ಯಾಜ್ಯ ವಸ್ತುಗಳನ್ನು ಸಹ ಇಲ್ಲಿಯೇ ಬಿಸಾಡಿರುವುದರಿಂದ ಮತ್ತಷ್ಟು ಮಾಲಿನ್ಯ ಪ್ರದೇಶವಾಗಿ ಮಾರ್ಪಟ್ಟಿದೆ. ಇದರಿಂದ ಇತ್ತ ಜನರು ಸಂಚರಿಸಲಾಗದಂತಹ ದುಸ್ಥಿತಿ ನಿರ್ಮಾಣವಾಗಿದೆ. ಕೆಲವರು ರಾತ್ರಿ ಮದ್ಯ ಸೇವಿಸಿ ಬಾಟಲಿಗಳನ್ನು ಎಸೆದಿರುವುದು ಕಂಡುಬರುತ್ತದೆ.
‘ತಹಶೀಲ್ದಾರರು ತಮ್ಮ ಕಚೇರಿಯ ಆವರಣವನ್ನೇ ಸ್ವಚ್ಛವಾಗಿಟ್ಟುಕೊಂಡಿಲ್ಲ. ಇತರ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತಿತರ ಬಡಾವಣೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಹೇಳುವ ನೈತಿಕತೆ ಅವರಿಗೆ ಎಲ್ಲಿಂದ ಬರುತ್ತದೆ’ ಎಂದು ಪ್ರಶ್ನಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಅಮೀನ್‍ಪಾಷಾ ‘ತಕ್ಷಣವೇ ಎಚ್ಚೆತ್ತುಕೊಂಡು ಮಿನಿವಿಧಾನಸೌಧ ಆವರಣದಲ್ಲಿ ಶುಚಿತ್ವಕ್ಕೆ ಆದ್ಯತೆ ನೀಡಬೇಕು. ಹಾಗೆಯೇ ಬಿಟ್ಟರೆ ಮುಂದೆ ರೋಗ-ರುಜಿನಗಳ ತಾಣವಾಗುವುದರಲ್ಲಿ ಅನುಮಾನವಿಲ್ಲ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ತಹಶೀಲ್ದಾರರು ನಿವೃತ್ತ ನೌಕರರಿಗೆ ಕುಳಿತುಕೊಳ್ಳಲು ಕಚೇರಿಯ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಆದರೆ ಅಕ್ಕ-ಪಕ್ಕದಲ್ಲಿರುವ ಕಸವನ್ನು ತೆರವುಗೊಳಿಸಿ ಸ್ವಚ್ಛತೆ ಕಾಪಾಡಲು ಗಮನ ಹರಿಸಬೇಕು
–ಟಿ.ಅಯ್ಯಪ್ಪ ಅಧ್ಯಕ್ಷ ನಿವೃತ್ತ ಸರ್ಕಾರಿ ನೌಕರರ ಸಂಘ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.