ADVERTISEMENT

ರಾಯಚೂರು | ವರಮಹಾಲಕ್ಷ್ಮೀ ‍ಪೂಜಾ ವೈಭವ ಇಲ್ಲ

ಕೋವಿಡ್‌ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಜನರು

​ಪ್ರಜಾವಾಣಿ ವಾರ್ತೆ
Published 30 ಜುಲೈ 2020, 14:02 IST
Last Updated 30 ಜುಲೈ 2020, 14:02 IST
ರಾಯಚೂರಿನ ಜನರು ವರಮಹಾಲಕ್ಷ್ಮೀ ಪೂಜೆಗಾಗಿ ಭಂಗಿಕುಂಟಾ ರಸ್ತೆಯಲ್ಲಿ ಹಣ್ಣು ಖರೀದಿಸುತ್ತಿರುವುದು ಗುರುವಾರ ಕಂಡುಬಂತು
ರಾಯಚೂರಿನ ಜನರು ವರಮಹಾಲಕ್ಷ್ಮೀ ಪೂಜೆಗಾಗಿ ಭಂಗಿಕುಂಟಾ ರಸ್ತೆಯಲ್ಲಿ ಹಣ್ಣು ಖರೀದಿಸುತ್ತಿರುವುದು ಗುರುವಾರ ಕಂಡುಬಂತು   

ರಾಯಚೂರು: ಜಿಲ್ಲೆಯಾದ್ಯಂತ ಮುಂಗಾರು ಮಳೆ ಸುರಿದು ರೈತರಲ್ಲಿ ಸಂತಸ ಮನೆ ಮಾಡಿದ್ದರೂ, ಕೋವಿಡ್‌ ಮಹಾಮಾರಿಯ ಕಪಿಮುಷ್ಟಿಯಲ್ಲಿ ಜನರಿದ್ದಾರೆ. ಈ ವರ್ಷ ವರಮಹಾಲಕ್ಷ್ಮೀ ಪೂಜೆ ನಡೆಯುವ ಮುನ್ನಾದಿನ ಗುರುವಾರ ಮಾರುಕಟ್ಟೆಯಲ್ಲಿ ಪ್ರತಿವರ್ಷ ಕಾಣುತ್ತಿದ್ದ ವೈಭವ ಇರಲಿಲ್ಲ!

ಪೂಜಾ ಸಾಮಗ್ರಿಗಳ ಮಾರಾಟ, ಖರೀದಿ ಭರಾಟೆ ಮಾಯವಾಗಿದೆ. ಬೆರಳೆಣಿಕೆಯಷ್ಟು ಜನರು ಮಾತ್ರ ಮಾರುಕಟ್ಟೆಗೆ ಬಂದಿದ್ದರು. ರಾಯಚೂರಿನ ಸರಾಫ್‌ ಬಜಾರ್‌, ಬಟ್ಟೆ ಬಜಾರ್‌, ಮಹಾವೀರ ಸರ್ಕಲ್‌, ಪಟೇಲ್‌ ರಸ್ತೆ, ಭಂಗಿಕುಂಟಾ ರಸ್ತೆ, ಗಂಜ್‌ ರಸ್ತೆ, ಲೋಹರ್‌ ಗಲ್ಲಿ, ತೀನ್‌ ಕಂದಿಲ್‌ ಹಾಗೂ ಹರಿಹರ ರಸ್ತೆಗಳುದ್ದಕ್ಕೂ ಹಣ್ಣು ಮತ್ತು ಪೂಜಾ ಸಾಮಗ್ರಿ ಮಾರಾಟ ಮಾಡುವ ತಳ್ಳುಗಾಡಿಗಳು ನಿಂತಿದ್ದವು. ನಿರೀಕ್ಷಿತ ಮಟ್ಟದಲ್ಲಿ ಜನರು ಬಾರದೆ ವ್ಯಾಪಾರಕ್ಕೆ ಮಂಕು ಕವಿದಿತ್ತು.

ನೆರೆಯ ರಾಜ್ಯಗಳಿಂದ, ಬೇರೆ ಜಿಲ್ಲೆಗಳಿಂದ ಬರುತ್ತಿದ್ದ ತರಹೇವಾರಿ ಹೂವುಗಳ ರಾಶಿ, ಕಬ್ಬು, ಇಡುಗುಂಬಳ, ಚೆಂಡು ಹೂವು, ಬಾಳೆಗಿಡ ರಾಶಿಗಳು ಲಗ್ಗೆ ಇಟ್ಟಿಲ್ಲ. ಸರಾಫ್‌ ಬಜಾರ್‌ ಮಾರ್ಗದಲ್ಲಿ ಜನದಟ್ಟಣೆಯಿಂದ ಕೂಡಿರುತ್ತಿದ್ದ ತೆಂಗು, ಕರ್ಪೂರ್‌ ಸೇರಿ ಪೂಜಾ ಸಾಮಗ್ರಿ ಮಾರಾಟ ಮಾಡುವ ಅಂಗಡಿಗಳು ಖಾಲಿ ಖಾಲಿಯಾಗಿದ್ದವು.

ADVERTISEMENT

‘ಈ ವರ್ಷ ಎಲ್ಲರೂ ಕೋವಿಡ್‌ ಸಂಕಷ್ಟ ಬಂದಿದೆ. ಖರೀದಿ ಮಾಡುವುದಕ್ಕೆ ಜನರಲ್ಲಿಯೂ ಶಕ್ತಿಯಿಲ್ಲ. ಮೊದಲಿನಂತೆ ಜನರು ಬರುವುದಿಲ್ಲ ಎನ್ನುವ ನಿರೀಕ್ಷೆಯಿಂದ ವ್ಯಾಪಾರಿಗಳು ಕೂಡಾ ಬಹಳಷ್ಟು ಸರಕು ದಾಸ್ತಾನು ಮಾಡಿಕೊಂಡಿಲ್ಲ. ವರಮಹಾಲಕ್ಷ್ಮೀ ಪೂಜೆಯನ್ನು ಬಹುತೇಕ ಎಲ್ಲರೂ ಈ ವರ್ಷ ಸರಳವಾಗಿ ಆಚರಿಸುತ್ತಿದ್ದಾರೆ. ಕೈ ಚೀಲ ತುಂಬುವಷ್ಟು ಸಂತೆ ಮಾಡಿಕೊಂಡು ಹೋಗುತ್ತಿದ್ದ ಜನರು, ಚೀಲದಲ್ಲಿ ಸಲ್ಪ ಮಾತ್ರವೇ ಪೂಜಾ ಸಾಮಗ್ರಿ ತೆಗೆದುಕೊಂಡು ಹೋಗುತ್ತಿದ್ದಾರೆ’ ಎಂದು ವ್ಯಾಪಾರಿ ಶಿವಾನಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.