ADVERTISEMENT

ಸರ್ಕಾರಕ್ಕೂ ವಿಜಯೇಂದ್ರಗೂ ಸಂಬಂಧವಿಲ್ಲ: ರೇಣುಕಾಚಾರ್ಯ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2021, 15:56 IST
Last Updated 7 ಏಪ್ರಿಲ್ 2021, 15:56 IST
ಎಂ.ಪಿ. ರೇಣುಕಾಚಾರ್ಯ
ಎಂ.ಪಿ. ರೇಣುಕಾಚಾರ್ಯ   

ರಾಯಚೂರು: ‘ಕಾಂಗ್ರೆಸ್‌ ನಾಯಕರು ಹತಾಸೆಯಿಂದ ಆರೋಪ ಮಾಡುತ್ತಿದ್ದು, ವಿಜಯೇಂದ್ರ ಅವರು ಯಾವುದೇ ಪರ್ಸೆಂಟೇಜ್ ಪಡೆಯುತ್ತಿಲ್ಲ. ಸರ್ಕಾರ ಮತ್ತು ವಿಜಯೇಂದ್ರಗೂ ಸಂಬಂಧವಿಲ್ಲ. ಅವರು ಯಾವುದೇ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ' ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಪ್ರತಾಪಗೌಡ ಮಾರಾಟವಾಗಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ‌ಆರಂಭದಿಂದಲೂ ತಮ್ಮ ಸ್ವಾಭಿಮಾನಕ್ಕೆ‌ ಧಕ್ಕೆ ಆಗುತ್ತಿರುವ ವಿಷಯ ಅವರು ಪ್ರಸ್ತಾಪಿಸುತ್ತಲೇ ಬಂದಿದ್ದರು. ಮಸ್ಕಿಯಲ್ಲಿ ಬಿಜೆಪಿ ಪರ ವಾತಾವರಣ ಇದೆ. ಪ್ರತಾಪಗೌಡ ಮಾಡಿರುವಅಭಿವೃದ್ಧಿಗೆ ಜನರು ಮತ ನೀಡುತ್ತಾರೆ. ಕಾಂಗ್ರೆಸ್ ಅಪಪ್ರಚಾರದಿಂದ ಗೆಲುವಿಗೆ ಧಕ್ಕೆ ಆಗುವುದಿಲ್ಲ’ ಎಂದರು.

‘ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯು‌ಅಕ್ರಮ ನೀರಾವರಿ ಮಾಡಿಕೊಂಡಿದ್ದಾರೆ ಎಂದು ರೈತರು ಹೇಳುತ್ತಿದ್ದಾರೆ. ಆ‌ ಭಾಗದಲ್ಲಿ ರೈತರೊಂದಿಗೆ ಮಾತನಾಡಿದಾಗ, ಜನರು ಬಿಜೆಪಿ‌ಬೆಂಬಲಿಸುವುದಾಗಿ ಹೇಳಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ಸಾರಿಗೆ ನೌಕರರು ಕೋಡಿಹಳ್ಳಿ‌ ಚಂದ್ರಶೇಖರ್‌ ನಂಬಿ ಮೋಸ ಹೋಗಬಾರದು. ಈಗಾಗಲೇ ರೈತರು ಕೋಡಿಹಳ್ಳಿ ಜೊತೆ ಹೋಗುತ್ತಿಲ್ಲ. ಪ್ರಜಾಪ್ರಭುತ್ವದಲ್ಲಿ ಹೋರಾಟಕ್ಕೆ ಅವಕಾಶ ಇದೆ. ಆದರೆ ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಹೋರಾಟ ಮಾಡಬಾರದು. ಕೂಡಲೇ‌ ನೌಕರರು ಮುಷ್ಕರ ಕೈಬಿಡಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.