ADVERTISEMENT

ಸಿರವಾರ | ಮಹಿಳೆಯರಿಂದ ಗ್ರಾಮ ಪಂಚಾಯಿತಿ ಮುತ್ತಿಗೆ

ಅತ್ತನೂರು: ನೀರು ಪೂರೈಕೆಯಲ್ಲಿ ಸಿಬ್ಬಂದಿ ನಿರ್ಲಕ್ಷ್ಯ

​ಪ್ರಜಾವಾಣಿ ವಾರ್ತೆ
Published 13 ಮೇ 2024, 16:18 IST
Last Updated 13 ಮೇ 2024, 16:18 IST
ಸಿರವಾರ ತಾಲ್ಲೂಕಿನ ಅತ್ತನೂರು ಗ್ರಾಮದ 2ನೇ ವಾರ್ಡ್‌ನ ಮಹಿಳೆಯರು ನೀರಿಗಾಗಿ ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಲಾಯಿತು
ಸಿರವಾರ ತಾಲ್ಲೂಕಿನ ಅತ್ತನೂರು ಗ್ರಾಮದ 2ನೇ ವಾರ್ಡ್‌ನ ಮಹಿಳೆಯರು ನೀರಿಗಾಗಿ ಖಾಲಿ ಕೊಡ ಹಿಡಿದು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಲಾಯಿತು   

ಸಿರವಾರ: ಸಮರ್ಪಕವಾಗಿ ನೀರು ಪೂರೈಕೆ ಮಾಡುವಲ್ಲಿ ನಿರ್ಲಕ್ಷ್ಯ ವಹಿಸಿರುವ ಅತ್ತನೂರು ಗ್ರಾಮ ಪಂಚಾಯಿತಿ ಆಡಳಿತ ಮತ್ತು ಸಿಬ್ಬಂದಿ ಕೆಲಸವನ್ನು ಖಂಡಿಸಿ ಗ್ರಾಮದ ನಾಲ್ಕನೇ ವಾರ್ಡ್‌ನ ಮಹಿಳೆಯರು ಖಾಲಿ ಕೊಡಗಳೊಂದಿಗೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಸೋಮವಾರ ಪ್ರತಿಭಟನೆ ನಡೆಸಿದರು.

ಕೊಳವೆ ಬಾವಿ ಕೊರೆಸಿ ಹಲವು ದಿನ ಕಳೆದರೂ ಇದುವರೆಗೂ ವಾರ್ಡ್‌ನ ಮನೆಗಳಿಗೆ ಸಮರ್ಪಕವಾಗಿ ನೀರು ಹರಿಸುತ್ತಿಲ್ಲ. ಕೊಡ ನೀರಿಗಾಗಿ ಮಕ್ಕಳು ಮತ್ತು ಮಹಿಳೆಯರು ಹಗಲು ರಾತ್ರಿ ಎನ್ನದೆ ನೀರು ಸಂಗ್ರಹ ಮಾಡುವ ಸ್ಥಿತಿ ನಿರ್ಮಾಣವಾಗಿದೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

‘ನಾಲ್ಕನೇ ವಾರ್ಡಿನಲ್ಲಿರುವ ಸುಮಾರು 100ಕ್ಕೂ ಹೆಚ್ಚು ಮನೆಗಳಿಗೆ ನೀರಿನ ತೊಂದರೆ ಉಂಟಾಗಿದೆ. ನೀರಿನ ಸಮಸ್ಯೆಯನ್ನು ಸರಿಪಡಿಸುವಂತೆ ಹಲವು ಬಾರಿ ಗ್ರಾಮ ಪಂಚಾಯಿತಿ ಆಡಳಿತದ ಗಮನಕ್ಕೆ ತಂದರೂ ಬೇಡಿಕೆ ಈಡೇರಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಸಂಪೂರ್ಣ ವಿಫಲವಾಗಿದೆ’ ಎಂದು ಪ್ರತಿಭಟನಕಾರರು ದೂರಿದರು.

ADVERTISEMENT

ಸಿಬ್ಬಂದಿ ಹಿಂದೇಟು: ಗ್ರಾಮ ಪಂಚಾಯಿತಿ ಮುಂದೆ ಮಹಿಳೆಯರು ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಪ್ರತಿಭಟನೆ ನಡೆಸಿದರು. ಮಹಿಳೆಯರ ಮನವಿ ಸ್ವೀಕರಿಸಲು ಗ್ರಾಮ ಪಂಚಾಯಿತಿಯ ಯಾವೊಬ್ಬ ಸಿಬ್ಬಂದಿಯು ಮುಂದೆ ಬರಲಿಲ್ಲ. ಮಹಿಳೆಯರ ಒತ್ತಡಕ್ಕೆ ಮಣಿದ ಕರ ವಸೂಲಿಗಾರ ಅಯ್ಯಪ್ಪ ನಿವಾಸಿಗಳ ಮನವಿ ಸ್ವೀಕರಿಸಿದರು.

ವಾರ್ಡ್ ನಿವಾಸಿಗಳಾದ ಖಾಜಮ್ಮ, ಹಾಜರಾಬೀ, ಹುಸೇನ್ ಬೀ, ಖಾಜಮುನ್ನ, ಹುಸೇನಾ, ಜನ್ನತ್ ಬಿ., ಬಂದೇನವಾಜ್, ಮಹಿಬೂಬ್, ಭಾಷಾಸಾಬ್, ಹಮೀದ್, ಬಾವಸಲಿ, ಬಾಬು ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.