ಲಿಂಗಸುಗೂರು: ತಾಲ್ಲೂಕಿನ ಹಾಲಭಾವಿ ಗ್ರಾಮದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರಲ್ಲಿ ವೈರಲ್ ಜ್ವರ ಕಾಣಿಸಿಕೊಂಡ ಕಾರಣ ಈಚನಾಳ, ಆನೆಹೊಸೂರು ಹಾಗೂ ಲಿಂಗಸುಗೂರು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯತ್ತಿದ್ದಾರೆ.
ತಾಲ್ಲೂಕಿನ ಹಾಲಭಾವಿ ಗ್ರಾಮದಲ್ಲಿ ಕಳೆದ 20 ದಿನಗಳಿಂದ ವೈರಲ್ ಜ್ವರದಿಂದ ಚಿಕ್ಕ ಮಕ್ಕಳು, ವಯಸ್ಕರು, ವೃದ್ಧರು ಬಳಲುವಂತಾಗಿದೆ. ಈಚನಾಳ, ಆನೆಹೊಸೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇನ್ನೂ ಕೆಲವರು ಲಿಂಗಸುಗೂರಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವರು ಶಂಕಿತ ಡೆಂಗಿ ಹಿನ್ನಲೆಯಲ್ಲಿ ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ವಾಪಸ್ ಊರಿಗೆ ಬಂದಿದ್ದಾರೆ. ಆದರೆ, ವೈರಲ್ ಜ್ವರ ದಿನದಿಂದ ದಿನಕ್ಕೆ ಉಲ್ಬಣವಾಗುತ್ತಿದ್ದು, ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ.
ಸ್ವಚ್ಛತೆ ಮರೀಚಿಕೆ: ಗ್ರಾಮದಲ್ಲಿ ಸ್ವಚ್ಛತೆ ಇಲ್ಲದ ಕಾರಣ ಜ್ವರ ಹರಡುತ್ತಿದೆ. ಹಾಲಭಾವಿ ಗ್ರಾಮದಲ್ಲಿ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತಿದೆ. ಆದ್ದರಿಂದ ಜನರು ಅನಾರೋಗ್ಯ ಸಮಸ್ಯೆಯಿಂದ ಬಳಲುವಂತಾಗಿದೆ. ಈ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯವಹಿಸಿದೆ. ಗ್ರಾಮಕ್ಕೆ ತಾ.ಪಂ ಇಒ ಭೇಟಿ ನೀಡಿದ್ದ ಸಂದರ್ಭದಲ್ಲಿ ಶುದ್ಧ ಕುಡಿಯುವ ನೀರು ಒದಗಿಸುವ ಭರವಸೆ ನೀಡಿದ್ದರು. ಅದು ಇನ್ನೂ ಈಡೇರಿಲ್ಲ ಎಂದು ಗ್ರಾಮದ ಪ್ರೇಮಗೌಡ ಪೊಲೀಸ್ ಪಾಟೀಲ ಆರೋಪಿಸಿದ್ದಾರೆ.
ಗ್ರಾಮಕ್ಕೆ ತಹಶೀಲ್ದಾರ್ ಸತ್ಯಮ್ಮ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಉಲ್ಬಣಗೊಂಡಿರುವ ಜ್ವರ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಗ್ರಾಮದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳಲು ಪಿಡಿಒಗೆ ಸೂಚನೆ ನೀಡುವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.