
ಲಿಂಗಸುಗೂರು: ‘ವಿಶ್ವಕರ್ಮ ಸಮಾಜ ಎಲ್ಲಾ ಕ್ಷೇತ್ರಗಳಲ್ಲಿ ಅತ್ಯಂತ ಹಿಂದುಳಿದ ಸಮಾಜವಾಗಿದೆ. ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು’ ಎಂದು ವಿಶ್ವಕರ್ಮ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ.ನಂಜುಂಡಿ ಒತ್ತಾಯಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ವಿಶ್ವಕರ್ಮ ಸಮಾಜ, ರಾಜ್ಯದಲ್ಲಿ 40 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ. 1977ರಲ್ಲಿ ಎಲ್.ಜಿ.ಹಾವನೂರು ಅವರು ನಮ್ಮ ಸಮಾಜದ ಕಷ್ಟಗಳನ್ನು ಗಮನಿಸದೇ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಿದ್ದಾರೆ’ ಎಂದರು.
‘ಹೋರಾಟ ಮಾಡಿದ್ದರಿಂದ ಎರಡು ವರ್ಷಗಳ ಹಿಂದೆ ಮೈಸೂರು ವಿಶ್ವವಿದ್ಯಾಲಯ ವಿಶ್ವಕರ್ಮ ಸಮಾಜದ ಸ್ಥಿತಿಗತಿ ಅರಿಯಲು ಕುಲಶಾಸ್ತ್ರೀಯ ಅಧ್ಯಯನ ಮಾಡಿದೆ. ಅಧ್ಯಯನ ನಡೆಸಿದ ಅಧ್ಯಾಪಕರು ಪೂರ್ವಗ್ರಹ ಪೀಡಿತರಾಗಿ ವಿಶ್ವಕರ್ಮ ಸಮಾಜ ಬುಡಕಟ್ಟು ಲಕ್ಷಣ ಹೊಂದಿಲ್ಲ ಎಂದು ಸುಳ್ಳು ವರದಿ ನೀಡುವ ಮೂಲಕ ನಮ್ಮ ಸಮಾಜಕ್ಕೆ ಮಾರಕವಾಗಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ಈ ವರದಿಯನ್ನು ಮರು ಪರಿಶೀಲನೆ ಮಾಡಿ ಸಮಾಜಕ್ಕೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ವಿಶ್ವಕರ್ಮ ಸಮಾಜದಲ್ಲಿ ಒಟ್ಟು 41 ಪಂಗಡಗಳಿವೆ. 41 ಪಂಗಡಗಳಲ್ಲಿ ಕಮ್ಮಾ ಎಂಬುವ ಪಂಗಡಕ್ಕೆ ಕೊಳ್ಳೆಗಾಲ ತಾಲ್ಲೂಕು, ಉತ್ತರ ಕನ್ನಡ, ಮಂಗಳೂರು ಸೇರಿ ಇತರೆ ಜಿಲ್ಲೆಗಳಲ್ಲಿ ಎಸ್.ಟಿ ಪ್ರಮಾಣ ಪತ್ರ ನೀಡಲಾಗಿದೆ. ಅದೇ ಮಾದರಿಯಲ್ಲಿ ವಿಶ್ವಕರ್ಮ ಸಮಾಜದ ಎಲ್ಲ 41 ಪಂಗಡಗಳಿಗೂ ಪ್ರಮಾಣ ಪತ್ರ ನೀಡಬೇಕು’ ಎಂದು ಒತ್ತಾಯಿಸಿದರು.
‘ತಿಂಥಣಿ ಕ್ಷೇತ್ರ ಸೇರಿ ವಿಶ್ವಕರ್ಮ ಸಮಾಜದ ಐದು ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗಾಗಿ ಸರ್ಕಾರ ಪ್ರಾಧಿಕಾರ ರಚನೆ ಮಾಡಿ ಅಭಿವೃದ್ಧಿ ಮಾಡಬೇಕು ಎಂದು ಆಗ್ರಹಿಸಿ ಅತಿ ಶೀಘ್ರದಲ್ಲಿಯೇ ಬೀದರ್‌ನಿಂದ ಪಾದಯಾತ್ರೆ ಆರಂಭ ಮಾಡುವ ಬಗ್ಗೆ ಸಮಾಜದಲ್ಲಿ ಚಿಂತನೆ ನಡೆದಿದೆ. ಹಂಪಿಯಲ್ಲಿ ವಿಶ್ವಕರ್ಮರು ರಕ್ತದಿಂದ ಕಟ್ಟಿದ ಶಿಲ್ಪಕಲೆ ಇಂದು ವಿಶ್ವಖ್ಯಾತಿಯಾಗಿದೆ. ಆದರೆ, ಇಂತಹ ಶಿಲ್ಪಕಲೆ ಕೆತ್ತಿದ ವಿಶ್ವಕರ್ಮರನ್ನು ಹಂಪಿ ಉತ್ಸವದಲ್ಲಿ ಗೌರವಿಸುವ ಕೆಲಸ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
‘ಮಾರ್ಚ್‌ನಲ್ಲಿ ವಿಶ್ವಕರ್ಮ ಸಮಾಜದ ಹಿರಿಯ ನಾಗರಿಕರ ಸಮಾವೇಶ ಮಾಡಲಾಗುತ್ತಿದೆ. ಈ ಸಮಾವೇಶಕ್ಕೆ ಸಿಎಂ, ಡಿಸಿಎಂ ಅವರನ್ನು ಆಹ್ವಾನಿಸಲಾಗುವುದು. ಅಲ್ಲಿ ನಮಗಾಗಿರುವ ಅನ್ಯಾಯದ ಬಗ್ಗೆ ಅವರ ಗಮನಕ್ಕೆ ತರಲಾಗುವುದು’ ಎಂದರು.
ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಉದಯಕುಮಾರ ಮಾನ್ವಿ, ತಾಲ್ಲೂಕು ಘಟಕದ ಅಧ್ಯಕ್ಷ ಗುಂಡಣ್ಣ ಪತ್ತಾರ, ವೆಂಕಟೇಶ ಆನ್ವರಿ, ಅಮರೇಶ ಬಡಿಗೇರ ಸೇರಿದಂತೆ ಅನೇಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.