ADVERTISEMENT

ಲಿಂಗಸುಗೂರು: ಪತ್ತೆಯಾಗದ ವಾಂತಿ-ಭೇದಿ ಪ್ರಕರಣದ ಮೂಲ

ಇಲ್ಲಿಯವರೆಗೆ 60ಕ್ಕೂ ಹೆಚ್ಚು ಪ್ರಕರಣಗಳು ವರದಿ: ಇನ್ನಷ್ಟು ಆತಂಕ

​ಪ್ರಜಾವಾಣಿ ವಾರ್ತೆ
Published 1 ಜೂನ್ 2023, 23:35 IST
Last Updated 1 ಜೂನ್ 2023, 23:35 IST
ಲಿಂಗಸುಗೂರು ತಾಲ್ಲೂಕು ಗೊರೆಬಾಳ ಗ್ರಾಮದಲ್ಲಿ ಬುಧವಾರ ಮಹಿಳೆಯರು ತೆರೆದಬಾವಿ ನೀರನ್ನು ತುಂಬಿಕೊಳ್ಳುತ್ತಿರುವ ಚಿತ್ರಣ ಕಂಡು ಬಂತು.
ಲಿಂಗಸುಗೂರು ತಾಲ್ಲೂಕು ಗೊರೆಬಾಳ ಗ್ರಾಮದಲ್ಲಿ ಬುಧವಾರ ಮಹಿಳೆಯರು ತೆರೆದಬಾವಿ ನೀರನ್ನು ತುಂಬಿಕೊಳ್ಳುತ್ತಿರುವ ಚಿತ್ರಣ ಕಂಡು ಬಂತು.   

ಬಿ.ಎ.ನಂದಿಕೋಲಮಠ

ಲಿಂಗಸುಗೂರು: ಗೊರೆಬಾಳ ಗ್ರಾಮದಲ್ಲಿ ವಾಂತಿ–ಭೇದಿ ಪ್ರಕರಣ ಹೆಚ್ಚಳಕ್ಕೆ ಕಾರಣ ಏನು ಎಂಬುದರ ಮೂಲ ಇಂದಿಗೂ ಪತ್ತೆ ಆಗದಿರುವುದು ಆತಂಕಕ್ಕೆ ಕಾರಣವಾಗಿದೆ.

ಗುರುವಾರ ಕೂಡ ವಾಂತಿ ಭೇದಿ ಲಕ್ಷಣ ಶಂಕೆಯ ಕೆಲ ಪ್ರಕರಣಗಳು ವರದಿ ಆಗಿವೆ. ಅದರೆ, ತಾತ್ಕಾಲಿಕ ಚಿಕಿತ್ಸೆ ಪಡೆದು ಔಷಧಿ ಪಡೆದು ರೋಗಿಗಳು ಮನೆಗೆ ತೆರಳಿದ್ದಾರೆ. ಗ್ರಾಮಕ್ಕೆ ಪೂರೈಕೆ ಮಾಡುವ ಕೊಳವೆಬಾವಿಗಳ ಕುಡಿಯುವ ನೀರು ಯೋಗ್ಯವಾಗಿವೆ ಎಂಬ ವರದಿ ಬಂದಿರುವುದನ್ನು ಪಂಚಾಯತರಾಜ್‍ ಇಲಾಖೆ ಮೂಲಗಳು ದೃಢಪಡಿಸಿವೆ.

ADVERTISEMENT

ಕೊಳವೆಬಾವಿ ನೀರು ಪೂರೈಕೆ ಸ್ಥಗಿತಗೊಳಿಸಿ ನಾಲ್ಕು ದಿನಗಳಿಂದ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿರುವುದಕ್ಕೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಕೈಪಂಪ್‍ ಮತ್ತು ತೆರೆದಬಾವಿ ನೀರು ಬಳಕೆ ಮಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಕೊಳವೆಬಾವಿ ನೀರು ಯೋಗ್ಯವಾಗಿಲ್ಲ ಎಂಬ ವಾದ ಮಂಡಿಸುತ್ತಿದೆ. ಇದು ತೀರ ಆತಂಕ್ಕಕೆ ಈಡುಮಾಡಿದೆ.

‘ಗ್ರಾಮದಲ್ಲಿ ವಾಂತಿ ಭೇದಿ ಉಲ್ಬಣಗೊಂಡಿದ್ದು ಸತ್ಯ. ಅಧಿಕಾರಿಗಳು ಈ ಕುರಿತಂತೆ ವಿವಿಧ ಬಗೆಯ ವೈದ್ಯಕೀಯ ಪರೀಕ್ಷೆಗಳಿಗೆ ಮುಂದಾಗುತ್ತಿಲ್ಲ. ಕೊಳವೆಬಾವಿ ನೀರು ಯೋಗ್ಯ, ಅಯೋಗ್ಯದ ಹೆಸರಿನ ಮೇಲೆ ನಾಟಕೀಯ ಬೆಳವಣಿಗೆ ನಡೆಸಿದ್ದಾರೆ. ವಾಂತಿ ಭೇದಿ ಪ್ರಕರಣ ಹಿಂದಿರುವ ವಾಸ್ತವ ಸತ್ಯ ಶೋಧನೆ ಆಗಬೇಕಿದೆ’ ಎಂದು ಸಮಾಜ ಸೇವಕ ಪ್ರೇಮಜಿ ಗೊರೆಬಾಳ ಹೇಳುತ್ತಾರೆ.

ಜಿಲ್ಲಾ ಪಂಚಾಯತ್‍ ಎಂಜಿನಿಯರಿಂಗ್‍ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಭರತ್‍ ಮಾತನಾಡಿ, ‘ಎರಡು ದಿನಗಳ ಹಿಂದೆ ಟ್ಯಾಪ್‍ವೊಂದರ್ ನೀರು ಪರೀಕ್ಷೆ ನಡೆಸಿದಾಗ ಬ್ಯಾಕ್ಟೇರಿಯಾ ಪತ್ತೆಯಾಗಿತ್ತು. ಆದರೆ, ಆ ಮನೆಯಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿಲ್ಲ ಕೊಳವೆಬಾವಿ ನೀರು ರಾಸಾಯನಿಕ ಮತ್ತು ಜೈನಿಕ ಪದ್ಧತಿಯಲ್ಲಿ ಪರೀಕ್ಷೆ ನಡೆಸಿದ್ದು ನೀರು ಯೋಗ್ಯವಾಗಿದೆ ಎಂಬುದು ದೃಢಪಟ್ಟಿದೆ.’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಮಾತನಾಡಿ, ‘ಟ್ಯಾಪ್‍ವೊಂದರ ವರದಿ ಅಯೋಗ್ಯ ಎಂದು ಬಂದಿದ್ದು ಬಿಟ್ಟರೆ ಕೊಳವೆಬಾವಿ ನೀರು ಯೋಗ್ಯವಾಗಿದೆ ಎಂಬ ವರದಿ ಬಂದಿದೆ. ಈ ಮುಂಚೆ ಕಾಲರಾ ಸೋಂಕು ಬಗ್ಗೆ ಕೆಲ ವೈದ್ಯರು ಶಂಕೆ ವ್ಯಕ್ತಪಡಿಸಿದ್ದರು. ಆ ನಿಟ್ಟಿನಲ್ಲಿ ವೈದ್ಯಕೀಯ ಪರೀಕ್ಷೆಗಳು ನಡೆಸಲು ಆರೋಗ್ಯ ಇಲಾಖೆ ಮುಂದಾಗಬೇಕಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ ಕುಲಕರ್ಣಿ ಮಾತನಾಡಿ, ‘ಸ್ವಲ್ಪ ಮಟ್ಟಿಗೆ ವಾಂತಿಭೇದಿ ನಿಯಂತ್ರಣಕ್ಕೆ ಬಂದಿವೆ. ಕೊಳವೆಬಾವಿ ನೀರು ಯೋಗ್ಯವಾಗಿದೆ, ಆದರೆ,ನಲ್ಲಿಗಳ ನೀರಿನ ಪರೀಕ್ಷೆಯಲ್ಲಿ ಅಯೋಗ್ಯ ವರದಿ ಬರುತ್ತಿವೆ. ವಾಂತಿಭೇದಿ ಸೋಂಕಿತರ ಸ್ಟೂಲ್‍(ಮಲ) ಪರೀಕ್ಷೆಗೆ ಕಳುಹಿಸಿದ್ದು ಇನ್ನೂ ವರದಿ ಬಂದಿಲ್ಲ’ ಎಂದು ಹೇಳಿಕೊಂಡಿದ್ದಾರೆ.

ಲಿಂಗಸುಗೂರು ತಾಲ್ಲೂಕು ಗೊರೆಬಾಳ ಗ್ರಾಮದಲ್ಲಿ ಬುಧವಾರ ಅಧಿಕಾರಿಗಳ ತಂಡ ಅಗಸಿಯಲ್ಲಿ ಗ್ರಾಮಸ್ಥರಲ್ಲಿ ವಾಂತಿ ಭೇದಿ ಕುರಿತು ಜಾಗೃತಿ ಮೂಡಿಸಿದರು.

ಕುಡಿವ ನೀರು ಪರೀಕ್ಷೆಗಳ ವರದಿಯಲ್ಲಿ ಗೊಂದಲ ಕಾಲರ ಸೋಂಕು ಶಂಕೆ ಪರೀಕ್ಷೆಗೆ ಮುಂದಾಗುತ್ತಿಲ್ಲ ಅಧಿಕಾರಿಗಳ ದ್ವಂದ್ವ ಮಾಹಿತಿ ಜನತೆಯ ಆಕ್ರೋಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.