ADVERTISEMENT

ನಗರಸಭೆ ಅಸಮರ್ಪಕ ನಿರ್ವಹಣೆ: ನದಿಯಲ್ಲಿ ನೀರಿದ್ದರೂ ನಗರದಲ್ಲಿ ನೀರಿಲ್ಲ!

ಸಂಕಷ್ಟ ಅನುಭವಿಸಿದ ಜನ

ನಾಗರಾಜ ಚಿನಗುಂಡಿ
Published 19 ಅಕ್ಟೋಬರ್ 2018, 19:45 IST
Last Updated 19 ಅಕ್ಟೋಬರ್ 2018, 19:45 IST
ರಾಯಚೂರಿನ ಮಹಾದೇವ ನಗರದಲ್ಲಿ ಜನರು ನೀರಿಗಾಗಿ ಕೊಡಗಳನ್ನು ಸರದಿಯಲ್ಲಿ ಇಟ್ಟು ಕಾಯುತ್ತಿರುವುದು
ರಾಯಚೂರಿನ ಮಹಾದೇವ ನಗರದಲ್ಲಿ ಜನರು ನೀರಿಗಾಗಿ ಕೊಡಗಳನ್ನು ಸರದಿಯಲ್ಲಿ ಇಟ್ಟು ಕಾಯುತ್ತಿರುವುದು   

ರಾಯಚೂರು: ನಗರದಿಂದ 20 ಕಿಲೋ ಮೀಟರ್‌ ಅಂತರದಲ್ಲಿರುವ ಕೃಷ್ಣಾ ಹಾಗೂ ತುಂಗಾಭದ್ರಾ ನದಿಯಲ್ಲಿ ನೀರಿದ್ದರೂ ನಗರದ ಜನರಿಗೆ ಸಮರ್ಪಕ ನೀರು ಪೂರೈಸುವ ಕೆಲಸವನ್ನು ನಗರಸಭೆ ಮಾಡುತ್ತಿಲ್ಲ!

ಮಹಾನವಮಿ ಹಬ್ಬವನ್ನು ಸಂತೋಷ, ಸಂಭ್ರಮದಿಂದ ಆಚರಿಸುವುದಕ್ಕೆ ಪೂರಕ ವ್ಯವಸ್ಥೆ ಮಾಡಬೇಕಿದ್ದ ನಗರಸಭೆಯು, ಕೃತಕ ನೀರಿನ ಸಮಸ್ಯೆಯನ್ನು ಸೃಷ್ಟಿಸಿದ್ದರಿಂದ ಜನರು ಸಂಭ್ರಮವನ್ನು ಮರೆತು ಸಂಕಷ್ಟ ಎದುರಿಸುವಂತಾಯಿತು.

ರಾಂಪುರ ಕೆರೆಯಲ್ಲಿ ನೀರು ಖಾಲಿಯಾಗುವ ಪೂರ್ವದಲ್ಲೆ ಗಣೇಕಲ್‌ ಜಲಾಶಯದಿಂದ ಕಾಲುವೆ ಮೂಲಕ ನೀರು ಪಡೆದುಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ. ಕಾಲುವೆಯಿಂದ ನೀರು ಹರಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಗುರುವಾರ ಮನವಿ ಮಾಡಿಕೊಂಡಿದೆ. ರಾಯಚೂರು ನಗರಕ್ಕೆ ಕುಡಿಯುವ ನೀರು ಒದಗಿಸುವ ಉದ್ದೇಶಕ್ಕಾಗಿ ಗಣೇಕಲ್‌ ಜಲಾಶಯದಲ್ಲಿ ನೀರು ಸಂಗ್ರಹಿಸಿದ್ದರೂ ಸಮಸ್ಯೆ ಉದ್ಭವಿಸುವುದಕ್ಕೆ ಆಸ್ಪದ ನೀಡಲಾಗಿದೆ.

ADVERTISEMENT

ಆಶಾಪುರ ಮಾರ್ಗದ ಬಡಾವಣೆಗಳು, ದಾತಾರ್‌ ಕಾಲೋನಿ, ಜ್ಯೋತಿ ಕಾಲೋನಿ, ರಾಮಲಿಂಗೇಶ್ವರ ಲೇಔಟ್‌, ಎಸ್‌ಬಿಎಚ್‌ ಕಾಲೋನಿ, ಐಬಿ ಕಾಲೋನಿ, ಇಂದಿರಾನಗರ, ಐಡಿಎಸ್‌ಎಂಟಿ, ಸುಖಶಾಂತಿ ನಗರ ಸೇರಿದಂತೆ ಹಲವು ಬಡಾವಣೆಗಳ ಜನರು ಒಂದು ವಾರದಿಂದ ನೀರಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ನಗರಸಭೆಗೆ ಆಯ್ಕೆಯಾದ ನೂತನ ವಾರ್ಡ್‌ ಸದಸ್ಯರು ಇನ್ನೂ ಪ್ರಮಾಣವಚನ ಸ್ವೀಕರಿಸಿಲ್ಲ. ಈ ಕಾರಣಕ್ಕಾಗಿ ಕೆಲವು ವಾರ್ಡ್‌ಗಳಲ್ಲಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ನಗರಸಭೆ ಆಡಳಿತಾಧಿಕಾರಿಗಳಿಗೆ ನೀರಿನ ಸಮಸ್ಯೆಯ ಅರಿವಿದ್ದರೂ ತ್ವರಿತ ಸ್ಪಂದಿಸುತ್ತಿಲ್ಲ. ನಗರಸಭೆಯು ನೀರು ಪೂರೈಕೆಗೆ ಸಮರ್ಪಕ ವ್ಯವಸ್ಥೆ ಅಳವಡಿಸಿಕೊಂಡಿಲ್ಲ.

ಶಾಸಕರಿಂದ ಸಭೆ: ನೀರಿನ ಸಮಸ್ಯೆ ಪರಿಹಾರಕ್ಕಾಗಿ ಶಾಸಕ ಡಾ. ಶಿವರಾಜ ಪಾಟೀಲ ಅವರು ನೂತನ ಜಿಲ್ಲಾಧಿಕಾರಿ ಗೃಹ ಕಚೇರಿಯಲ್ಲಿ ಬುಧವಾರ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ನೀರು ಪೂರೈಸುವ ವ್ಯವಸ್ಥೆ ಮಾಡದೆ ಹಬ್ಬದ ರಜೆಯನ್ನು ಪಡೆದುಕೊಳ್ಳಬಾರದು ಎಂದು ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಶಾಸಕರ ಕಟ್ಟಪ್ಪಣೆಯಿಂದ ಎಚ್ಚೆತ್ತುಕೊಂಡ ನಗರಸಭೆ ಎಂಜಿನಿಯರುಗಳು ಗಣೇಕಲ್‌ ಜಲಾಶಯದಿಂದ ನೀರು ಬಂದಿಲ್ಲ ಎಂದು ಅವಲತ್ತುಕೊಂಡರು. ನೂತನ ಜಿಲ್ಲಾಧಿಕಾರಿ ಬಿ. ಶರತ್‌ ಅವರು ಗಣೇಕಲ್‌ ಜಲಾಶಯದಿಂದ ನೀರು ಹರಿಸುವುದಕ್ಕೆ ಈಗ ಕ್ರಮ ಕೈಗೊಂಡಿದ್ದಾರೆ.

‘ಮನೆಗಳಿಗೆ ಎರಡು ದಿನಕ್ಕೊಮ್ಮೆ ನೀರು ಬರುತ್ತದೆ. ಕೆಲವು ಸಲ ಬೇಸಿಗೆಯಲ್ಲಿ ಮೂರು ಅಥವಾ ನಾಲ್ಕು ದಿನಕ್ಕೊಮ್ಮೆ ನೀರು ಪೂರೈಸುತ್ತಾರೆ. ಅದು ಮೊದಲೇ ಗುತ್ತಾಗುವುದರಿಂದ ಸಮಸ್ಯೆ ಇರುವುದಿಲ್ಲ. ಈಗ ದಸರಾ ಹಬ್ಬದ ಸಂದರ್ಭದಲ್ಲಿ ನೀರು ಬಿಟ್ಟಿಲ್ಲ. ಜನರೆಲ್ಲ ಕೊಡಗಳನ್ನು ಹಿಡಿದುಕೊಂಡು ನೀರಿಗಾಗಿ ಅಲೆದಾಡುವಂತಾಗಿದೆ. ಕೆಲವರು ಖಾಸಗಿ ಟ್ಯಾಂಕರ್‌ಗಳಿಂದ ನೀರು ತುಂಬಿಸಿಕೊಳ್ಳುತ್ತಿದ್ದಾರೆ. ರಾಯಚೂರು ಪಕ್ಕದಲ್ಲಿಯೇ ಎರಡು ನದಿಗಳಿದ್ದರೂ ಅಧಿಕಾರಿಗಳು, ರಾಜಕಾರಣಿಗಳು ಸರಿಯಾಗಿ ನೀರಿನ ವ್ಯವಸ್ಥೆ ಮಾಡಿಲ್ಲ’ ಎಂದು ರಾಮಲಿಂಗೇಶ್ವರ ಲೇಔಟ್‌ ನಿವಾಸಿ ಗೋವರ್ಧನ ಅಸಮಾಧಾನ ವ್ಯಕ್ತಪಡಿಸಿದರು.

24/7 ಭರವಸೆ

ನಗರದಲ್ಲಿ 24/7 ನೀರು ಪೂರೈಕೆ ಆಗುತ್ತದೆ ಎನ್ನುವುದು ಇವರೆಗೂ ಭರವಸೆಯಾಗಿಯೇ ಉಳಿದಿದೆ. ಅನೇಕ ಬಡಾವಣೆಗಳಲ್ಲಿ ಪೈಪ್‌ಲೈನ್‌ ಅಳವಡಿಸಿ ವರ್ಷವಾಗಿದೆ. ಕೆಲವು ಬಡಾವಣೆಗಳಲ್ಲಿ ಪ್ರಾಯೋಗಿಕವಾಗಿ ನೀರು ಪೂರೈಸಲಾಗುವುದು ಎಂದು ರಾಜಕಾರಣಿಗಳು ಕೊಟ್ಟ ಭರವಸೆ ಕೂಡಾ ಈಡೇರಿಲ್ಲ ಎಂದು ನಗರಸಭೆ ಆಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಬಗ್ಗೆ ಜನರು ಭ್ರಮನಿರಸನಗೊಂಡು ಮಾತನಾಡಿಕೊಳ್ಳುತ್ತಿದ್ದಾರೆ.

‘ನಗರದಲ್ಲಿ ಸಮಸ್ಯೆಗಳು ಶಾಶ್ವತ; ಚುನಾವಣೆಯಲ್ಲಿ ಯಾರೆ ಜಯ ಸಾಧಿಸಿದರೂ ಸಮಸ್ಯೆಗಳು ಮಾತ್ರ ಪರಿಹಾರ ಆಗುವುದೇ ಇಲ್ಲ’ ಎಂದು ಹೇಳುತ್ತಾರೆ ಉದಯನಗರ ನಿವಾಸಿ ಬಸವರಾಜ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.