ADVERTISEMENT

ಬೇಸಿಗೆಯಲ್ಲಿ ಕೆರೆ ಖಾಲಿಯಾಗುವ ಭೀತಿ!

ಗ್ರಾಮೀಣ ಭಾಗದಲ್ಲಿ ಮರಿಚೀಕೆಯಾದ ಶುದ್ಧ ಕುಡಿಯುವ ನೀರು

ಡಿ.ಎಚ್.ಕಂಬಳಿ
Published 16 ಮಾರ್ಚ್ 2019, 6:30 IST
Last Updated 16 ಮಾರ್ಚ್ 2019, 6:30 IST
ಸಿಂಧನೂರು ನಗರದ ಕುಡಿಯುವ ನೀರಿನ ಕೆರೆ ಬಾಂದಾರಿಗೆ ಬೋಂಗಾ ಬಿದ್ದಿರುವುದರಿಂದ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ
ಸಿಂಧನೂರು ನಗರದ ಕುಡಿಯುವ ನೀರಿನ ಕೆರೆ ಬಾಂದಾರಿಗೆ ಬೋಂಗಾ ಬಿದ್ದಿರುವುದರಿಂದ ನೀರು ಸಂಗ್ರಹ ಸಾಧ್ಯವಾಗುತ್ತಿಲ್ಲ   

ಸಿಂಧನೂರು: ಇಲ್ಲಿನತಾಲ್ಲೂಕಿನ ತಿಮ್ಮಾಪೂರ, ಗೋಮರ್ಸಿ, ಶ್ರೀಪುರಂಜಂಕ್ಷನ್, ಸಾಲಗುಂದಾ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಬೇಸಿಗೆ ಆರಂಭದಲ್ಲಿಯೇ ಕುಡಿಯುವ ನೀರಿನ ಸಮಸ್ಯೆ ಉದ್ಬವಿಸಿದೆ.

ತಾಲ್ಲೂಕಿನ ತಿಮ್ಮಾಪುರ ಗ್ರಾಮದ ಕೆರೆಗೆ ಯಾವುದೇ ಆವರಣ ನಿರ್ಮಿಸಿ ಸಂರಕ್ಷಣೆ ಮಾಡಿಲ್ಲ. ಹೀಗಾಗಿ ಕೆರೆಯಲ್ಲಿಯೇ ಸಾರ್ವಜನಿಕರು ಬಟ್ಟೆ ತೊಳೆಯುತ್ತಾರೆ. ಅದೇ ನೀರನ್ನೇ ಕುಡಿಯಲು ಬಳಸುತ್ತಿರುವುದರಿಂದ ಇತ್ತೀಚೆಗೆ ಹಲವಾರು ಜನರು ವಾಂತಿ ಬೇಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ನಡೆದಿತ್ತು.

ಬಾದರ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಈ ಗ್ರಾಮದಲ್ಲಿ ದಶಕಗಳಿಂದಲೂ ಶುದ್ದ ನೀರು ದೊರೆತಿಲ್ಲ. ನೀರು ಪೂರೈಕೆಗಾಗಿ ಸರ್ಕಾರದಿಂದ ಪ್ರತಿ ವರ್ಷ ಅಪಾರ ಅನುದಾನ ಖರ್ಚು ಮಾಡುತ್ತಿದ್ದರೂ, ಜನರಿಗೆ ಶಾಶ್ವತ ಪರಿಹಾರ ಗಗನ ಕುಸುಮವಾಗಿದೆ. ಕೆರೆಯಿಂದ ನೀರಿನ ಸೌಕರ್ಯ ಒದಗಿಸಿದ್ದರೂ, ಸ್ವಚ್ಚತೆ ಇಲ್ಲ.

ADVERTISEMENT

ಸಿಂಧನೂರು ತಾಲ್ಲೂಕಿನ ಶೇ 90 ರಷ್ಟು ಗ್ರಾಮ ಮತ್ತು ಕ್ಯಾಂಪ್‌ಗಳು ತುಂಗಭದ್ರಾ ಎಡದಂಡೆ ನಾಲಯ ನೀರನ್ನೇ ಆಶ್ರಯಿಸಿವೆ. ಪ್ರತಿ ಗ್ರಾಮದಲ್ಲಿ ಕುಡಿಯುವ ನೀರು ಒದಗಿಸಲು ಕೆರೆಗಳನ್ನು ನಿರ್ಮಿಸಲಾಗಿದೆ. ಜಲನಿರ್ಮಲ, ಸ್ವಜಲಧಾರಾ ಸೇರಿ ವಿವಿಧ ಯೋಜನೆಗಳಲ್ಲಿ ಕೆಲವು ಗ್ರಾಮಗಳಲ್ಲಿ ಕೆರೆ ನಿರ್ಮಿಸಿ ಪೈಪ್‌ಲೈನ್ ಅಳವಡಿಸಲಾಗಿದೆ. ಇದೇ ನೀರಿಗೆ ಶುದ್ದೀಕರಣ ಘಟಕಗಳನ್ನು ನಿರ್ಮಿಸಿ ಮನೆ ಮನೆಗೆ ನೀರು ಪೂರೈಕೆ ಮಾಡಲಾಗತ್ತಿದೆ.

ಇನ್ನು ಕೆಲವು ಗ್ರಾಮಗಳಲ್ಲಿ ಕೆರೆಯ ನೀರನ್ನೇ ಹೊತ್ತು ತರಲಾಗುತ್ತಿದೆ. ಇನ್ನು ಕೆಲ ಗ್ರಾಮಗಳಿಗೆ ನಳಗಳ ವ್ಯವಸ್ಥೆಯಿದೆ. ಕೆರೆ ನೀರನ್ನು ಬೇಸಿಗೆ ಮುಗಿಯುವವರೆಗೂ ಬಳಸಬೇಕಿದೆ. ಆದರೆ, ಬೇಸಿಗೆ ಬೇಗನೆ ಆರಂಭವಾಗಿರುವುದರಿಂದ ನೀರು ಬೇಗನೆ ಖಾಲಿಯಾಗಲಿದೆ.

ಕೊಳವೆಬಾವಿ, ಬಾವಿ, ಹಳ್ಳ ಮತ್ತು ನದಿ ನೀರನ್ನು ಬಳಕೆಗಾಗಿ ಬಳಸಲಾಗುತ್ತಿದೆ. ತಾಲ್ಲೂಕಿನ ಹಲವಾರು ಕಡೆಗಳಲ್ಲಿ ಪಂಚಾಯತ್ ರಾಜ್ ಇಲಾಖೆಯಿಂದ ಕಲ್ಪಿಸಿರುವ ಆರ್‌ಓ ಪ್ಲಾಂಟ್‌ಗಳು ಇದ್ದು ಇಲ್ಲದಂತಾಗಿವೆ. ಮಾಡಸಿರವಾರ ಮತ್ತು ಗೋಮರ್ಸಿ ಗ್ರಾಮದ ಮಧ್ಯದಲ್ಲಿ ಕೆರೆಯನ್ನು ನಿರ್ಮಿಸಲಾಗಿದ್ದು, ಎರಡು ಗ್ರಾಮಗಳು ಕೆರೆಯಿಂದ ಒಂದೂವರೆ ಕಿ.ಮೀ. ಅಂತರದಲ್ಲಿವೆ. ಅದೇ ನೀರನ್ನು ಬೈಕ್, ಸೈಕಲ್, ದಬ್ಬು ಬಂಡಿ ಮೂಲಕ ಕುಡಿಯಲು ತುಂಬಿಕೊಂಡು ಹೋಗುತ್ತಾರೆ. ಆದರೆ, ಒಂಟಿ ಕುಟುಂಬದವರು, ವೃದ್ದರು, ಅಂಗವಿಕಲರು ಅತ್ಯಂತ ಸಂಕಟ ಅನುಭವಿಸಬೇಕಾಗಿದೆ ಎನ್ನುತ್ತಾರೆ ಎಂದು ತಾಲ್ಲೂಕು ಪಂಚಾಯತಿ ಮಾಜಿ ಉಪಾಧ್ಯಕ್ಷ ನಾಗಪ್ಪ.

ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ತುಂಬಿಸಿರುವ ಕೆರೆಗಳ ನೀರು ಶೇ 50ರಷ್ಟು ಕಡಿಮೆಯಾಗಿದೆ. ಆದಷ್ಟು ಶೀಘ್ರ ಪುನಃ ನೀರು ತುಂಬಿಕೊಳ್ಳಲು ತಾಲ್ಲೂಕು ಪಂಚಾಯಿತಿ ಗಮನಹರಿಸಬೇಕೆಂದು ರವಡಕುಂದಾ ಗ್ರಾಮದ ಖಾಜಾಹುಸೇನ್ ಒತ್ತಾಯಿಸಿದ್ದಾರೆ.

‘ಕುಡಿಯುವ ನೀರಿನ ಅಭಾವ ಉಂಟಾಗಬಾರದೆನ್ನುವ ಉದ್ದೇಶದಿಂದಲೇ ಸಿಸ್ಟಮ್‌ಗಳ ಮೂಲಕ ನೀರು ಪೂರೈಕೆ ಮಾಡುತ್ತಿಲ್ಲ. ಮುಂದಿನ ಮಳೆಗಾಲದಲ್ಲಿ ಸಿಸ್ಟನ್‌ಗಳಿಗೆ ನೀರು ಸರಬರಾಜು ಮಾಡಿ ನಳಗಳ ಮೂಲಕ ಪೂರೈಕೆ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ ತಿಳಿಸಿದ್ದಾರೆ. ತಾಲ್ಲೂಕಿನಲ್ಲಿ ಗ್ರಾಮ ಮತ್ತು ಹಳ್ಳಿ ಸೇರಿ 163 ಕೆರೆಗಳಿದ್ದು, ಜನವರಿ ತಿಂಗಳಲ್ಲಿ ಎಲ್ಲ ಕೆರೆಗಳನ್ನು ತುಂಬಿಸಲಾಗಿದೆ.

‘ಕುಡಿಯುವ ನೀರಿನ ಸಮಸ್ಯೆ ಕುರಿತು ತೀವ್ರ ನಿಗಾವಹಿಸುವಂತೆ ಪ್ರತಿಯೊಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಟ್ಟೆಚ್ಚರಿಕೆ ನೀಡಲಾಗಿದೆ. ಬೂತಲದಿನ್ನಿ ಪಂಚಾಯತಿ ವ್ಯಾಪ್ತಿಯಲ್ಲಿ ಎರಡು ಕೊಳವೆ ಬಾವಿಗಳನ್ನು ಗುತ್ತಿಗೆ ಆಧಾರದಲ್ಲಿ ಖಾಸಗಿ ವ್ಯಕ್ತಿಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗಾಗಿ ಪಡೆಯಲಾಗಿದೆ’ ಎಂದು ರಾಠೋಡ ಹೇಳಿದರು.

ಇದಲ್ಲದೆ 4 ನೇ ಹಣಕಾಸು ಯೋಜನೆಯಡಿ ಕುಡಿಯುವ ನೀರಿಗಾಗಿ ಹಣ ಕಾಯ್ದಿರಿಸಿಕೊಂಡು ನೀರಿನ ತುರ್ತು ಅಭಾವ ಇದ್ದಲ್ಲಿ ಬಳಸಿಕೊಳ್ಳಲು ತಿಳಿಸಲಾಗಿದೆ. ಯಾವುದೇ ವಿಧದ ನೀರಿನ ಮೂಲ ಲಭ್ಯ ಇರದಿದ್ದಲ್ಲಿ ಸಾಗಾಣಿಕ ವ್ಯವಸ್ಥೆ ಮಾಡಲು ಅಭಿವೃದ್ಧಿ ಅಧಿಕಾರಿಗಳಿಗೆ ಸಿದ್ದತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಅವರು ವಿವರಿಸಿದರು.

ವಾರಕ್ಕೊಮ್ಮೆ ನೀರು

ಸಿಂಧನೂರು ನಗರಕ್ಕೆ ನೀರುಣಿಸುವ ಕುಷ್ಟಗಿ ರಸ್ತೆಯಲ್ಲಿರುವ ಕೆರೆ ಮತ್ತು ತುರ್ವಿಹಾಳ ಬಳಿ ಇರುವ ಕೆರೆ ಬಿರುಕು ಬಿಟ್ಟಿರುವುದರಿಂದ ನಗರದ ನಾಗರಿಕರು ತೀವ್ರ ಆತಂಕ ಸ್ಥಿತಿಯಲ್ಲಿದ್ದಾರೆ.

ಸಿಂಧನೂರು ಕೆರೆಯಲ್ಲಿ 8.5 ಮೀಟರ್‌ ಇದ್ದ ನೀರನ್ನು 5.5. ಮೀಟರಿಗೆ ಇಳಿಸಲಾಗಿದೆ. ಇದರಿಂದ ಎಂಟು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ವೃತ್ತಿಗಳನ್ನು ಆಶ್ರಯಿಸಿರುವ ಎ.ಕೆ.ಗೋಪಾಲನಗರ, ಗಂಗಾನಗರ, ಮೂರುಮೈಲಕ್ಯಾಂಪ್, ಇಂದಿರಾ ನಗರ, ಜನತಾ ಕಾಲೋನಿ, ಸುಕಾಲಪೇಟೆ, ಮಹಿಬೂಬಿಯಾ ಕಾಲೋನಿ ಮತ್ತಿತರ ಕೊಳಗೇರಿ ಪ್ರದೇಶಗಳಲ್ಲಿ ಜನರು ಪ್ರತಿನಿತ್ಯ ನೀರಿಗಾಗಿ ಪರದಾಡುವುದು ಸಾಮಾನ್ಯವಾಗಿದೆ.

ನೂರಾರು ಜನರು ಕುಷ್ಟಗಿ ರಸ್ತೆಯಲ್ಲಿರುವ ಕೆರೆ ಬಳಿ ಇರುವ ಪಂಪ್‌ಹೌಸ್ ಹತ್ತಿರ ಕುಡಿಯುವ ನೀರನ್ನು ತರುತ್ತಾರೆ. ಈ ಮೊದಲು ಆರು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲಾಗುತ್ತಿತ್ತು. ಆಗಲೂ ನೀರು ತುಂಬಿಟ್ಟುಕೊಳ್ಳಲು ಮನೆಯಲ್ಲಿರುವ ಎಲ್ಲ ಪಾತ್ರೆಗಳಲ್ಲಿ ತುಂಬಿದರೂ ಎರಡು ದಿನಕ್ಕೆ ಸಾಕಾಗುತ್ತಿರಲಿಲ್ಲ. ಈಗ ಎಂಟು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತಿರುವುದರಿಂದ ಮತ್ತಷ್ಟು ನೀರಿನ ತೊಂದರೆಯಾಗಿದೆ ಎಂದು ಎ.ಕೆ.ಗೋಪಾಲನಗರದ ಖಾಸಿಂಸಾಬ, ಗಂಗಾನಗರದ ತಮ್ಮಣ್ಣ ನಗರಸಭೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ನೀರಿನ ಸಮಸ್ಯೆ ಕುರಿತು ನಗರಸಭೆ ಪೌರಾಯುಕ್ತರನ್ನು ಸಂಪರ್ಕಿಸಿದಾಗ ’ಮುಂಬರುವ ಮೇ ತಿಂಗಳಿನಲ್ಲಿ ನೀರಿನ ಅಭಾವ ಉಂಟಾಗಬಾರದೆನ್ನುವ ಉದ್ದೇಶದಿಂದ ಎಂಟು ದಿನಕ್ಕೊಮ್ಮೆ ನೀರು ಬಿಡುವ ತೀರ್ಮಾನ ಕೈಗೊಳ್ಳಲಾಗಿದೆ. ತುರ್ವಿಹಾಳ ಮತ್ತು ಸಿಂಧನೂರು ಕೆರೆಗಳನ್ನು ಶೀಘ್ರದಲ್ಲಿ ದುರಸ್ತಿ ಮಾಡಲಾಗುವುದು’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.