ADVERTISEMENT

ಸೇತುವೆ ಕೆಳಗೆ ನೀರು: ಸಂಚಾರಕ್ಕೆ ಪರದಾಟ

ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಒತ್ತಾಯ

ಉಮಾಪತಿ ಬಿ.ರಾಮೋಜಿ
Published 7 ಫೆಬ್ರುವರಿ 2023, 4:56 IST
Last Updated 7 ಫೆಬ್ರುವರಿ 2023, 4:56 IST
ಶಕ್ತಿನಗರ–ಕಾಡ್ಲೂರು ಮಾರ್ಗದ ರೈಲ್ವೆ ಕಿರು ಸೇತುವೆ ಕೆಳಗಡೆಯ ನೀರಿನಲ್ಲಿಯೇ ರಿಕ್ಷಾ ತಳ್ಳುತ್ತಿರುವ ಶಾಲಾ ಮಕ್ಕಳು
ಶಕ್ತಿನಗರ–ಕಾಡ್ಲೂರು ಮಾರ್ಗದ ರೈಲ್ವೆ ಕಿರು ಸೇತುವೆ ಕೆಳಗಡೆಯ ನೀರಿನಲ್ಲಿಯೇ ರಿಕ್ಷಾ ತಳ್ಳುತ್ತಿರುವ ಶಾಲಾ ಮಕ್ಕಳು   

ಶಕ್ತಿನಗರ: ಕಾಡ್ಲೂರು ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯದ ರೈಲ್ವೆ ಕಿರು ಸೇತುವೆ ಕೆಳಗಡೆ ಬಸಿ ನೀರು ನಿಲ್ಲುತ್ತಿದೆ. ಇದರಿಂದ ವಾಹನ ಸಂಚಾರಕ್ಕೆ ತೊಂದರೆ ಆಗಿದೆ.

ಇದೇ ಮಾರ್ಗವಾಗಿ ಕರೇಕಲ್, ರಂಗಾಪುರ, ಗುರ್ಜಾಪುರ ಹಾಗೂ ಅರಷಿಣಿಗಿ ಗ್ರಾಮಗಳಿಗೆ ವಾಹನಗಳು ಸಂಚರಿಸುತ್ತವೆ. ರಸ್ತೆ ಹದಗೆಟ್ಟ ಕಾರಣ ರಿಕ್ಷಾ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಇಲ್ಲಿನ ರಸ್ತೆಗಳು ಕಿರಿದಾಗಿವೆ. ಜಮೀನುಗಳಿಂದ ಬರುವ ಬಸಿ ನೀರು ರಸ್ತೆಯಲ್ಲಿ ಹರಿಯುವುದರಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಅಲ್ಲಲ್ಲಿ ಗುಂಡಿಗಳು ನಿರ್ಮಾಣವಾಗಿವೆ. ಡಾಂಬರು ಕಿತ್ತು ಹೋಗಿದೆ.

ADVERTISEMENT

ಮಳೆ ಬಂದರೆ ಗುಂಡಿಗಳಲ್ಲಿ ನೀರು ನಿಲ್ಲುತ್ತದೆ. ವಾಹನಗಳು ಬಂದಾಗ ಗುಂಡಿಯಲ್ಲಿನ ನೀರು ಅಕ್ಕಪಕ್ಕ ಸಂಚರಿಸುವವರಿಗೆ ಸಿಡಿಯುತ್ತದೆ. ರಸ್ತೆಯಲ್ಲಿನ ತಗ್ಗುಗಳಿಂದ ತಪ್ಪಿಸಿಕೊಳ್ಳಲು ರಸ್ತೆಯನ್ನೇ ಬಿಟ್ಟು ಓಡಾಡಬೇಕಾದ ಸ್ಥಿತಿ ಇದೆ. ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ರಸ್ತೆಯ ತಗ್ಗು–ಗುಂಡಿಗಳನ್ನು ಮುಚ್ಚಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂ ದು ಜನ ಒತ್ತಾಯಿಸುತ್ತಾರೆ.

ಈ ರಸ್ತೆ ದುರಸ್ತಿ ಮಾಡಬೇಕು ಎಂದು ಆರ್‌ಟಿಪಿಎಸ್ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಶಾಲೆಯ ವಿದ್ಯಾರ್ಥಿಗಳು, ಆಸ್ಪತ್ರೆಗೆ ತೆರಳುವ ರೋಗಿಗಳು, ಕಚೇರಿಗಳಿಗೆ ಹೋಗುವ ಕಾರ್ಮಿಕರು ಈ ದಾರಿಯಲ್ಲಿ ಸಾಗಬೇಕಾದರೆ ಬಹಳಷ್ಟು ಕಷ್ಟ ಪಡಬೇಕಾಗಿದೆ. ತೊಂದರೆಯಾದರೆ ಆರ್‌ಟಿಪಿಎಸ್ ಅಧಿಕಾರಿಗಳೇ ನೇರ ಹೊಣೆಯಾಗುತ್ತಾರೆ ಎಂದು ಕಾಡ್ಲೂರು ಗ್ರಾಮಸ್ಥರು ಎಚ್ಚರಿಸಿದ್ದಾರೆ.

-----

ರೈಲ್ವೆ ಬ್ರಿಡ್ಜ್ ಕೆಳಗಡೆ ಯಾವಾಗಲೂ ಬಸಿ ನೀರು ನಿಂತಿರುತ್ತದೆ. ಸಂಚಾರ ಮಾಡುವುದಕ್ಕೆ ತೊಂದರೆಯಾಗಿದೆ. ಆರ್‌ಟಿಪಿಎಸ್ ಅಧಿಕಾರಿಗಳ ಗಮನಕ್ಕೆ ತಂದರೂ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ.

- ಪಾಂಡುರಂಗ, ಗ್ರಾಮಸ್ಥ ಕಾಡ್ಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.