
ಬಸವರಾಜ ಕಳಸ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು
ರಾಯಚೂರು: ‘ರಾಯಚೂರಿಗೆ ಏಮ್ಸ್ ಕೇಳಿದರೆ ಕೇಂದ್ರ ಸರ್ಕಾರವು ಶಕ್ತಿನಗರದ ಶಾಖೋತ್ಪನ್ನ ಕೇಂದ್ರದಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪಿಸಲು ಮುಂದಾಗುತ್ತಿದೆ. ಜಿಲ್ಲೆಯ ಜನ ವೈದ್ಯಕೀಯ ಸೌಲಭ್ಯ ಕೇಳಿದರೆ ವಿಷ ಕೊಡಲು ಹೊರಟಿದೆ’ ಎಂದು ನಾಗರಿಕ ವೇದಿಕೆ ಮುಖಂಡ ಬಸವರಾಜ ಕಳಸ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.
‘ಕೇಂದ್ರ ಅಣು ವಿದ್ಯುತ್ ನಿಗಮದ ಮೂವರು ಅಧಿಕಾರಿಗಳು ಆರ್‌ಟಿಪಿಎಸ್‌ಗೆ ಬಂದು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೆಪಿಸಿಎಲ್ ಅಧಿಕಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಇಲ್ಲಿ ಅಣುಸ್ಥಾವರ ಸ್ಥಾಪನೆಯಾದರಿ ಜಿಲ್ಲೆಯ ಜನ ಹಲವು ಸಮಸ್ಯೆಗಳ ಸುಳಿವಿಗೆ ಸಿಲುಕಲಿದ್ದಾರೆ’ ಎಂದು ನಗರದಲ್ಲಿ ಶನಿವಾರ ಮಾಧ್ಯಮ ಗೋಷ್ಠಿಯಲ್ಲಿ ಆರೋಪಿಸಿದರು.
‘ಸ್ಥಾವರಿಂದ ಹೊರ ಬರುವ ತ್ಯಾಜ್ಯದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ. ಈಗಾಗಲೇ ಕೆಟ್ಟುಹೋಗಿರುವ ಆರೋಗ್ಯ ರಕ್ಷಣೆಗೆ ಏಮ್ಸ್ ನೀಡಲು ವರ್ಷಗಳಿಂದ ಹೋರಾಟ ನಡೆದರೂ ಸ್ಪಂದಿಸದ ಕೇಂದ್ರ ಸರ್ಕಾರ ಜನರ ಜೀವ ತೆಗೆಯಲು ಅಣು ಸ್ಥಾವರ ಪ್ರಾರಂಭಿಸಲು ಹೊರಟಿರುವುದು ಖಂಡನೀಯ. ಸರ್ಕಾರ ಸ್ಥಾವರ ಸ್ಥಾಪನೆಯ ನಿರ್ಧಾರ ಕೈಗಬಿಡಬೇಕು’ ಎಂದು ಒತ್ತಾಯಿಸಿದರು.
ಹೋರಾಟಗಾರ ಎಸ್.ಮಾರೆಪ್ಪ ಮಾತನಾಡಿ, ‘ಅಣುವಿಕರಣದ ಪರಿಣಾಮ ಎಷ್ಟು ಭಯಾನಕವಾಗಿರುತ್ತದೆ ಎನ್ನುವುದನ್ನು ಇತಿಯಾಸದ ಮೂಲಕ ಅರಿತುಕೊಂಡಿದ್ದೇವೆ. ಹೀರೋಶಿನಾ ನಾಗಸಾಕಿ ಘಟನೆಯೂ ಸೇರಿದಂತೆ ವಿಕರಣದಿಂದ ಮಾನವ ಜೀವಕ್ಕೆ ಆಗುವ ಆಪಾಯಗಳಿದ್ದರೂ ಸರ್ಕಾರ ಅಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮುಂದಾಗಿರುವುದು ಸರಿಯಲ್ಲ’ ಎಂದರು.
‘ಯಾದಗಿರಿ ಜಿಲ್ಲೆಯ ಗೋಗಿ ದರ್ಶನಾಪುರ ಸೇರಿದಂತೆ ಕೆಲ ಗ್ರಾಮಗಳಲ್ಲಿ ಯುರೇನಿಯಂ ದೊರೆಯುತ್ತಿದೆ. ಇದನ್ನೇ ಕೇಂದ್ರವಾಗಿ ಇಟ್ಟುಕೊಂಡು ಅಪಾಯಕಾರಿ ಅಣುಸ್ಥಾವರ ಸ್ಥಾಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆರ್‌ಟಿಪಿಎಸ್ ಅಧಿಕಾರಿಗಳು ಮೂರು ಹಂತಗಳಲ್ಲಿ ಕಾರ್ಮಿಕರ ಸಭೆ ಕರೆದು ಸೋಲಾರ್ ಸ್ಥಾವರ ಸ್ಥಾಪಿಸಲಾಗುತ್ತಿದೆ ಎಂದು ತಪ್ಪು ನೀಡಿದ್ದಾರೆ. ವಾಸ್ತವದಲ್ಲಿ, ಕೇಂದ್ರ ತಂಡಕ್ಕೆ ಎಲ್ಲ ರೀತಿಯ ಸಹಕಾರ ನೀಡಿದ್ದಾರೆ‘ ಎಂದು ದೂರಿದರು.
‘ಕೈಗಾ ಅಣುಶಕ್ತಿ ಸ್ಥಾವರ ಕಾಡಿನ ಮಧ್ಯೆ ಇದ್ದರೂ ವಿಕಿರಣ ಹೊರ ಸೂಸುತ್ತಿರುವ ದೂರುಗಳು ಇವೆ. ಬಯಲು ಸೀಮೆಯಲ್ಲಿ ಅದರ ಪರಿಣಾಮ ಹೆಚ್ಚು ಪ್ರಖರವಾಗಿರುತ್ತದೆ. ಆದ್ದರಿಂದ ಜಿಲ್ಲೆಯ ಜನ್ನ ಎಚ್ಚರ ವಹಿಸಬೇಕಿದೆ. ಅಣು ಸ್ಥಾವರ ವಿರೋಧಿಸಿ ಶೀಘ್ರದಲ್ಲಿ ಜಿಲ್ಲೆಯಲ್ಲಿ ನಾಗರಿಕ ವೇದಿಕೆ ನೇತೃತ್ವದಲ್ಲಿ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದರು. ಅಶೋಕಕುಮಾರ ಜೈನ್. ಜೈ ಭೀಮ, ಮಲ್ಲಪ್ಪ ದಿನ್ನಿ, ನರಸಿಂಹಲು, ವಿನಯಕುಮಾರ ಚಿತ್ರಗಾರ ಉಪಸ್ಥಿರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.