ರಾಯಚೂರು: 2009ರಲ್ಲಿ ಮಹಾರಾಷ್ಟ್ರದಲ್ಲಿ ಆದ ಅತಿವೃಷ್ಟಿಯಿಂದಾಗಿ ನದಿಗಳಿಗೆ ಮಹಾಪೂರ ಬಂದು ಜಿಲ್ಲೆಯ ಜನ ಸಂಕಷ್ಟಕ್ಕೀಡಾದಾಗ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜತೆಗೆ ವೈಮಾನಿಕ ಸಮೀಕ್ಷೆ ನಡೆಸಿದ್ದರು. ರಾಯಚೂರು ಸಮೀಪದ ಯರಮರಸ್‌ನಲ್ಲಿರುವ ಅತಿಥಿಗೃಹದಲ್ಲಿ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದರು.
ಅತಿಥಿಗೃಹದಲ್ಲಿ ನೆರೆಹಾವಳಿಯ ಫೋಟೊಗಳನ್ನು ವೀಕ್ಷಿಸಿದ್ದರು. ಜಿಲ್ಲೆಯ ಜನರ ಸಮಸ್ಯೆಗಳನ್ನು ಆಲಿಸಿ ದೆಹಲಿಗೆ ಹೋದ ನಂತರ ₹1,500 ಕೋಟಿ ಬಿಡುಗಡೆ ಮಾಡುವ ಮೂಲಕ ಸಂತ್ರಸ್ತರ ಸಂಕಷ್ಟಕ್ಕೆ ಮಿಡಿದಿದ್ದರು.
ಕೃಷ್ಣಾ ಹಾಗೂ ತುಂಗಭದ್ರಾ ನದಿಗಳಿಗೆ ಮಹಾಪೂರ ಬಂದು ನದಿ ತೀರದ ಗ್ರಾಮಗಳು ಮುಳುಗಡೆಯಾಗಿದ್ದವು. ಮಂತ್ರಾಲಯದ ಕ್ಷೇತ್ರವೂ ಜಲಾವೃತಗೊಂಡಿತ್ತು. ರಾಯಚೂರು– ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಪ್ರವಾಹದಲ್ಲಿ ಕೊಚ್ಚಿ ಹೋಗಿತ್ತು.
2009ರ ಅಕ್ಟೋಬರ್ 10ರಂದು ಮನಮೋಹನ್ ಸಿಂಗ್ ಅವರು ಹೆಲಿಕಾಪ್ಟರ್ ಮೂಲಕ ಜಿಲ್ಲೆಯಾದ್ಯಂತ ಸಂಚಾರ ನಡೆಸಿ ಪರಿಸ್ಥಿತಿ ಅವಲೋಕಿಸಿದ್ದರು. ಜನರು ತೀವ್ರ ಸಂಕಷ್ಟದಲ್ಲಿ ಇರುವುದನ್ನು ಕಣ್ಣಾರೆ ಕಂಡು ಸಂತ್ರಸ್ತರ ನೆರವಿಗೆ ಧಾವಿಸಿದ್ದರು. ನೆರೆಯಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ 1 ಲಕ್ಷ ಪರಿಹಾರ ಘೋಷಿಸಿ, ಕೇಂದ್ರದಿಂದ ರಕ್ಷಣಾ ತಂಡವನ್ನೂ ಕಳುಹಿಸಿ ಕೊಟ್ಟಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವ ಸಚಿವ ಎಸ್.ಎಂ.ಕೃಷ್ಣ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಶೋಭಾ ಕರಂದ್ಲಾಜೆ ಅವರೂ ಜಿಲ್ಲೆಗೆ ಆಗಮಿಸಿದ್ದರು ಎಂದು ಕೆಪಿಸಿಸಿ ರಾಜ್ಯ ವಕ್ತಾರ ರಜಾಕ್ ಉಸ್ತಾದ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.