ADVERTISEMENT

ಮಹಿಳೆಯರ, ಮಕ್ಕಳ ಸೂಕ್ತ ರಕ್ಷಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2020, 12:53 IST
Last Updated 5 ಫೆಬ್ರುವರಿ 2020, 12:53 IST
ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ರಾಜ್ಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು
ರಾಯಚೂರಿನ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ರಾಜ್ಯ ಮಹಿಳಾ ಒಕ್ಕೂಟದ ಪದಾಧಿಕಾರಿಗಳು ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು   

ರಾಯಚೂರು: ಮಹಿಳೆಯರು ಮತ್ತು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ಮಹಿಳಾ ಒಕ್ಕೂಟದ ಜಿಲ್ಲಾ ಘಟಕದಿಂದ ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಬುಧವಾರದಿಂದ ಅನಿರ್ದಿಷ್ಟಾವಧಿ ಧರಣಿ ಆರಂಭಿಸಲಾಗಿದೆ.

ಮಹಿಳೆ ಮತ್ತು ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮವನ್ನು ತೆಗೆದುಕೊಳ್ಳಬೇಕು. ಬಾಲಕಿಯರು ಹಾಗೂ ವಿದ್ಯಾರ್ಥಿನಿಯರು ಇರುವ ಕಡೆಗಳಲ್ಲಿ ಪುರುಷರು ಯಾವುದೇ ಕಾರಣಕ್ಕೂ ವಾರ್ಡ್‌ನಗಳಾಗಿ, ಕಾವಲುಗಾರರನ್ನಾಗಿ, ಅಡುಗೆ ಸಹಾಯಕರ ಹುದ್ದೆಗಳಿಗೆ ನೇಮಕ ಮಾಡಬಾರದು ಎಂದರು.

ಈಚೆಗೆ ಸಿಂಧನೂರು ಹಾಗೂ ರಾಯಚೂರು ಪ್ರಕರಣಗಳಿಗೆ ಸಂಬಂಧಿಸಿದಂತೆ ಬಾಲಕಿಯರ ಮೇಲೆ ಅತ್ಯಾಚಾರ ನಡೆಯುವುದಕ್ಕೆ ನಿರ್ಲಕ್ಷ್ಯವೆ ಪ್ರಮುಖವಾಗಿದೆ. ಬಹುತೇಕ ಸರ್ಕಾರಿ ಸರ್ಕಾರೇತರ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ ತಡೆಯುವ ಸಮಿತಿಗಳಿರುವುದಿಲ್ಲ. ಇರುವ ಸಮಿತಿಗಳು ಸರಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿಲ್ಲ ಎಂದು ಆರೋಪಿಸಿದರು.

ADVERTISEMENT

ಅಂಥ ಸಂಸ್ಥೆಗಳ ಸಮಿತಿಗಳ ಮೇಲೆ ಕೂಡಲೇ ಕ್ರಮ ತೆಗೆದುಕೊಳ್ಳಬೇಕು. ಈ ಸಮಿತಿಗಳು ಪ್ರತಿ ತಿಂಗಳು ಸಭೆ ನಡೆಸಿ ದೌರ್ಜನ್ಯ ಪ್ರಕರಣಗಳ ನಡೆಯದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಮಹಿಳೆಯರ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯಗಳು ನಡೆದ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಪೊಲೀಸ್ ಹಾಗೂ ಇತರ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ನಡೆದುಕೊಳ್ಳುವ ರೀತಿ ಬದಲಾಗಬೇಕು ಎಂದು ಆಗ್ರಹಿಸಿದರು.

ಸುಪ್ರೀಂಕೋರ್ಟ್ ಆದೇಶದಂತೆ ಇಂಥ ಪ್ರಕರಣಗಳಲ್ಲಿ ಕೂಡಲೇ ಸಂತ್ರಸ್ತರಿಗೆ ನ್ಯಾಯದೊರಕಬೇಕು. ಅನ್ಯಾಯಕ್ಕೊಳಗಾದವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯ ನಡೆಯಬೇಕು, ಆರೋಪಿಗಳನ್ನು ಕೂಡಲೇ ಪತ್ತೆ ಹಚ್ಚುವ ಕಾರ್ಯ ನಡೆಯಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಸಂಚಾಲಕರಾದ ವಿದ್ಯಾಪಾಟೀಲ್, ವಿರುಪಮ್ಮ, ಮೋಕ್ಷಮ್ಮ, ಅಮರಮ್ಮ, ಶರೀಪಮ್ಮ, ಅಂಬಮ್ಮ, ರಂಗಮ್ಮ, ಮಾಳಮ್ಮ, ಮರಿಯಮ್ಮ, ಪ್ರಿಯಾಂಕ, ಮಮತಾ, ಸಾವಿತ್ರಮ್ಮ, ಲಕ್ಷ್ಮೀ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.