ADVERTISEMENT

World Environment Day: ಪರಿಸರ ಸಂರಕ್ಷಣೆಗೆ ನರೇಗಾ ಬಲ

ಮಸ್ಕಿ: ಸಾಮಾಜಿಕ ಅರಣ್ಯ ವಿಭಾಗದಿಂದ ಸಸಿಗಳ ನಾಟಿ

ಪ್ರಕಾಶ ಮಸ್ಕಿ
Published 5 ಜೂನ್ 2025, 6:04 IST
Last Updated 5 ಜೂನ್ 2025, 6:04 IST
ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆ ಸಸಿ ನಾಟಿ ಮಾಡಿರುವುದು
ಮಸ್ಕಿ ತಾಲ್ಲೂಕಿನ ಅಂಕುಶದೊಡ್ಡಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಅರಣ್ಯ ಇಲಾಖೆ ಸಸಿ ನಾಟಿ ಮಾಡಿರುವುದು   

ಮಸ್ಕಿ: ಬಿಸಿಲೂರು ಎಂದೇ ಖ್ಯಾತಿ ಪಡೆದ ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನಾದ್ಯಂತ ಸುಸ್ಥಿರ ಪರಿಸರ ನಿರ್ಮಾಣಕ್ಕೆ ಸಾಮಾಜಿಕ ಅರಣ್ಯ ವಿಭಾಗ ಮುಂದಾಗಿದೆ.

ಸರ್ಕಾರಿ ಜಾಗ, ಗೋಮಾಳ, ಸಂರಕ್ಷಿತ ಅರಣ್ಯ ಪ್ರದೇಶದ ಒತ್ತುವರಿಗೂ ಕಡಿವಾಣ ಹಾಕಿದ ಅರಣ್ಯ ಇಲಾಖೆ ವಿವಿಧ ಬಗೆಯ ಸಸಿ ನಾಟಿ ಮಾಡುವ ಮೂಲಕ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದೆ.

ತಾಲ್ಲೂಕಿನ ಅಂಕುಶದೊಡ್ಡಿ, ಪಾಮನಕೆಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಎಕರೆ ಸವಳು ಮಿಶ್ರಿತ ಭೂಮಿಯಲ್ಲಿ 9 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ.

ADVERTISEMENT

ನರೇಗಾ ಯೋಜನೆಯಡಿ 10,231 ಮಾನವ ದಿನಗಳನ್ನು ಸೃಜಿಸಿ ಸಸಿಗಳನ್ನು ನೆಡಲಾಗಿದೆ.

ವಲಯ ಅರಣ್ಯ ಅಧಿಕಾರಿ ವಿಜಯಕುಮಾರ ನೇತೃತ್ವದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ದಿನಕ್ಕೆ ಎರಡು ಮೂರು ಟ್ಯಾಂಕರ್‌ಗಳ ಮೂಲಕ ನಾಟಿ ಮಾಡಿದ ಸಸಿಗಳಿಗೆ ನೀರುಣಿಸುವುದರ ಜೊತೆಗೆ ಗೊಬ್ಬರ ನೀಡುವುದರ ಮೂಲಕ ಜೋಪಾನ ಮಾಡಿದ್ದರಿಂದ ಗಿಡಗಳು ಉತ್ತಮವಾಗಿ ಬೆಳೆದಿವೆ.

ಸಾಮಾಜಿಕ ಅರಣ್ಯ ವಿಭಾಗ ಮತ್ತು ನರೇಗಾ ಯೋಜನೆ ಅಡಿಯಲ್ಲಿ 5 ಬ್ಲಾಕ್‌ಗಳನ್ನು ಅಭಿವೃದ್ಧಿಪಡಿಸಲಾಗಿದೆ. 9 ಸಾವಿರ ಸಸಿಗಳನ್ನು ನೆಡಲಾಗಿದೆ. ಮುಂದಿನ ವರ್ಷ ನರ್ಸರಿಯಲ್ಲಿ ಸಸಿಗಳನ್ನು ಅಭಿವೃದ್ಧಿಪಡಿಸಿ, 100 ಎಕರೆಯಲ್ಲಿ ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ವಿಜಯಕುಮಾರ ತಿಳಿಸಿದ್ದಾರೆ.

ಮಸ್ಕಿಯ ಗುಂಡ ಪಾಮನಕೆಲ್ಲೂರು ಹೂವಿನಬಾವಿ ನರ್ಸರಿಯಲ್ಲಿ ಸಸಿಗಳನ್ನು ಅಭಿವೃದ್ಧಿ ಪಡಿಸಿ ಸರ್ಕಾರಿ ಜಾಗಗಳು ರಸ್ತೆ ಬದಿಗಳಲ್ಲಿ ನೆಡಲಾಗುತ್ತಿದೆ‌. ಮುಂಗಾರು ಚುರುಕುಪಡೆದಂತೆ ಸಸಿಗಳನ್ನು ನೆಡಲು ಇಲಾಖೆ ಸಿದ್ಧತೆ ಕೈಗೊಂಡಿದೆ.
– ವಿಜಯಕುಮಾರ, ವಲಯ ಅರಣ್ಯ ಅಧಿಕಾರಿ
ಮಸ್ಕಿ ತಾಲ್ಲೂಕಿನಲ್ಲಿ ಸಾಮಾಜಿಕ ಅರಣ್ಯ ವಿಭಾಗ ಕೈಗೊಳ್ಳುವ ಹಸಿರೀಕರಣ ಕಾಮಗಾರಿಗೆ ನರೇಗಾದಡಿ ಕೂಲಿಕಾರರನ್ನು ನಿಯೋಜಿಸಿ ಅಗತ್ಯ ಸಹಕಾರ ನೀಡಲಾಗುವುದು.
– ಅಮರೇಶ ಯಾದವ, ಕಾರ್ಯನಿರ್ವಾಹಕ ಅಧಿಕಾರಿ ತಾ.ಪಂ ಮಸ್ಕಿ

ಪ್ರಾಣಿ–ಪಕ್ಷಿಗಳ ತಾಣ

ಅರಣ್ಯ ಇಲಾಖೆ 5 ಬ್ಲಾಕ್‌ಗಳನ್ನು ಅಭಿವೃದ್ಧಿಪಡಿಸಿರುವುದರಿಂದ ಒತ್ತುವರಿಗೆ ಕಡಿವಾಣ ಬಿದ್ದಿದೆ. ಬ್ಲಾಕ್‌ಗಳು ಹೂಳೆಮತ್ತಿ ಸಿಹಿ ಹುಣಸೆ ನೇರಳೆ ಅರಳ ಹತ್ತಿ ಆಲ ಬಸರಿ ಬಾಗೆ ಚಳ್ಳೆ ಹಣ್ಣಿನ ಗಿಡಗಳಿಂದ ನಳನಳಿಸುತ್ತಿವೆ. ಪ್ರಾಣಿ ಪಕ್ಷಿಗಳ ಹಸಿವು ನೀಗಿಸುತ್ತಿವೆ. ಹಸಿರು ಹುಲ್ಲನ್ನು ಅರಸಿ ಜಿಂಕೆ ಮೊಲಗಳು ಬರುತ್ತಿವೆ. ಗಿಡಗಳ ಪಾಲನೆ ಪೋಷಣೆಯಿಂದ ರಕ್ಷಿತ ಅರಣ್ಯ ಪ್ರದೇಶದ ಒತ್ತುವರಿಗೆ ಕಡಿವಾಣ ಹಾಗೂ ಮಣ್ಣಿನ ಸವಕಳಿ ತಡೆಗೂ ನೆರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.