ADVERTISEMENT

ರಾಯಚೂರು: ಹಿರಿಯರ ಮಾರ್ಗದರ್ಶನ, ಮೌಲ್ಯ ಅನುಕರಣೀಯ

ವಿಶ್ವ ಹಿರಿಯ ನಾಗರಿಕರ ದಿನಾಚರಣೆಯಲ್ಲಿ ಡಿಸಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2021, 14:05 IST
Last Updated 1 ಅಕ್ಟೋಬರ್ 2021, 14:05 IST
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು
ರಾಯಚೂರಿನ ಪಂ.ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರನ್ನು ಸನ್ಮಾನಿಸಲಾಯಿತು   

ರಾಯಚೂರು: ಹಿರಿಯ ನಾಗರಿಕರ ಸಂಸ್ಕಾರ, ಅವರ ಜೀವನದ ಅನುಭವವನ್ನು ಅರಿತು ಮಾರ್ಗದರ್ಶನ ಪಡೆದು ಕಿರಿಯರು ಮುನ್ನಡೆಯಬೇಕು. ಹಿರಿಯರ ಮೌಲ್ಯ, ಸಂಸ್ಕಾರ ಯುವ ಸಮೂಹಕ್ಕೆ ದಾರಿದೀಪವಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್‌ ಹೇಳಿದರು.

ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರ ಹಾಗೂ ವಿವಿಧ ಸಂಘ ಸಂಸ್ಥೆಯಿಂದ ಶುಕ್ರವಾರ ಆಯೋಜಿಸಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇಂದಿನ ದಿನಗಳಲ್ಲಿ ಹಿರಿಯ ನಾಗರಿಕರ ಕಾಳಜಿ ವಹಿಸದೇ ವೃದ್ಧಾಶ್ರಮಕ್ಕೆ ಕಳುಹಿಸಲಾಗುತ್ತಿದೆ. ಹಿಂದಿನ ಕಾಲದಲ್ಲಿ ವೃದ್ಧಾಪ್ಯ ಒಂದು ಸಮಸ್ಯೆ ಆಗಿರಲಿಲ್ಲ. ವೃದ್ಧಾಶ್ರಮಗಳು ಸಮಾಜದ ಕೆಟ್ಟ ಕೊಡುಗೆಯಾಗಿವೆ. ಹಿರಿಯರನ್ನು ಗೌರವ ಪೂರಕವಾಗಿ ನಡೆಸಿಕೊಳ್ಳಬೇಕು. ಹಿರಿಯ ನಾಗರಿಕರ ಹಕ್ಕುಗಳ ರಕ್ಷಣೆಗೆ ಧಕ್ಕೆ ಉಂಟಾಗಿದ್ದಲ್ಲಿ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲು ಅವಕಾಶವಿದೆ. ಹಿರಿಯ ನಾಗರಿಕರ ಆರೋಗ್ಯ ಊಟೋಪಚಾರವನ್ನು ಸರಿಯಾದ ಸಮಯಕ್ಕೆ ಸತ್ಕರಿಸಬೇಕು ಎಂದು ಸಲಹೆ ನೀಡಿದರು.

ADVERTISEMENT

ಜಿಲ್ಲೆಯ ಪ್ರತಿಯೊಬ್ಬ ಹಿರಿಯ ನಾಗರಿಕರು ಕೋವಿಡ್ ವ್ಯಾಕ್ಸಿನ್ ಹಾಕಿಸಿಕೊಂಡು ಕೋವಿಡ್ ಮುಕ್ತ ಜಿಲ್ಲೆಗೆ ಸಹಕಾರ ನೀಡಬೇಕು ಎಂದು ಹೇಳಿದರು.

ಅಂಗವಿಕಲರ ಕಲ್ಯಾಣಾಧಿಕಾರಿ ಶರಣಪ್ಪ ಪಾಟೀಲ ಮಾತನಾಡಿ,ಹಿರಿಯ ನಾಗರಿಕರಿಗೆ ಗುರುತಿನ ಚೀಟಿ, ಬಸ್ ಪಾಸ್, ಪಿಂಚಣಿ ಯೋಜನೆ ಸೇರಿ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಹಿರಿಯ ನಾಗರಿಕರು ತಮ್ಮ ಹಕ್ಕುಗಳ ಉಲ್ಲಂಘನೆಯಾದಲ್ಲಿ ಸಹಾಯವಾಣಿ ಕೇಂದ್ರಕ್ಕೆ ದೂರು ನೀಡಿ ನ್ಯಾಯ ಪಡೆಯಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ಮಹಾದೇವಪ್ಪ ಏಗನೂರು ಮಾತನಾಡಿ, ಹಿರಿಯ ನಾಗರಿಕರಿಗೆ ದೇಶದಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಹಿಂದೆ ಹಿರಿಯರ ಮಾರ್ಗದರ್ಶನವಿಲ್ಲದೇ ಯಾವುದೇ ಕಾರ್ಯ ನಡೆಯುತ್ತಿರಲಿಲ್ಲ. ಈಗಿನ ಕಾಲದಲ್ಲಿ ಕುಟುಂಬ, ಸಮಾಜದಲ್ಲಿ ಹಿರಿಯ ನಾಗರಿಕರನ್ನು ಕಡೆಗಣಿಸುತ್ತಿರುವುದು ವಿಷಾದನೀಯ.

ಮಕ್ಕಳನ್ನು ಸಾಕಿ ಸಲುಹಿ ಒಳ್ಳೆಯ ಶಿಕ್ಷಣ ನೀಡಿ ದೊಡ್ಡ ವ್ಯಕ್ತಿಯಾಗಲಿ ಎಂದು ಕಷ್ಟ ಪಡುವ ಪಾಲಕರನ್ನು ವಯಸ್ಸಾದ ಮೇಲೆ ನಿರ್ಲಕ್ಷಿಸುವ ಮನೋಭಾವ ಸಲ್ಲದು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಿರಿಯ ನಾಗರಿಕರಿಗೆ ಹಾಗೂ ಈಚೆಗೆ ನಡೆದ ಹಿರಿಯ ನಾಗರಿಕರ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಅಸೀಫ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ವೀರನಗೌಡ, ಹಿರಿಯ ನಾಗರಿಕರ ಸಹಾಯವಾಣಿ ಕೇಂದ್ರದ ಪವನ್ ಪಾಟೀಲ ಕಿಶೋರ, ನಿವೃತ್ತಿ ಶಿಕ್ಷಕಿ ದಾನಮ್ಮ, ಅಜೀಜಾ ಸುಲ್ತಾನಾ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.