ADVERTISEMENT

ಮುಂದಿನ ತಲೆಮಾರಿಗೆ ಹುಳುಗಳೇ ಆಹಾರ!

ರಾಯಚೂರು: ಕೃಷಿಮೇಳದಲ್ಲಿ ಕುತೂಹಲ ಮೂಡಿಸುತ್ತಿರುವ ‘ವಿಸ್ಮಯ ಕೀಟ ಪ್ರಪಂಚ’

ಬಾವಸಲಿ
Published 7 ಡಿಸೆಂಬರ್ 2024, 23:30 IST
Last Updated 7 ಡಿಸೆಂಬರ್ 2024, 23:30 IST
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭಗೊಂಡ ಕೃಷಿ ಮೇಳದ ‘ವಿಸ್ಮಯ ಕೀಟ ಪ್ರಪಂಚ’ ವಿಭಾಗದಲ್ಲಿ ಕಂಡು ಬಂದ ಕೀಟಗಳ ಬರ್ಗರ್
ರಾಯಚೂರಿನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಶನಿವಾರ ಆರಂಭಗೊಂಡ ಕೃಷಿ ಮೇಳದ ‘ವಿಸ್ಮಯ ಕೀಟ ಪ್ರಪಂಚ’ ವಿಭಾಗದಲ್ಲಿ ಕಂಡು ಬಂದ ಕೀಟಗಳ ಬರ್ಗರ್   

ರಾಯಚೂರು: ಭವಿಷ್ಯದಲ್ಲಿ ಮುಂದಿನ ತಲೆಮಾರಿಗೆ ಆಹಾರದ ಕೊರತೆಯಾದರೆ ಯಾವೆಲ್ಲ ಕೀಟಗಳನ್ನು ಸೇವಿಸಬಹುದು? ಯಾವ ಕೀಟ ಎಷ್ಟು ಪೋಷಕಾಂಶ ಹೊಂದಿದೆ? ಕೀಟಗಳ ವಿಧ, ಪರೋಪಕಾರಿ ಕೀಟಗಳು ಯಾವುವು...?

ಈ ಎಲ್ಲ ಪ್ರಶ್ನೆಗಳಿಗೆ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಆಯೋಜಿಸಿರುವ ಕೃಷಿ ಮೇಳದ ಕೀಟಶಾಸ್ತ್ರ ವಿಭಾಗದ ಮಳಿಗೆಯಲ್ಲಿ ನಿಮಗೆ ಉತ್ತರ ಸಿಗುತ್ತದೆ. ಮಳಿಗೆಯಲ್ಲಿನ ‘ವಿಸ್ಮಯಕಾರಿ ಕೀಟ ಪ್ರಪಂಚ’ ನೋಡುಗರನ್ನು ಬೆರಗುಗೊಳಿಸುತ್ತಿದೆ.

‘ವಿಸ್ಮಯಕಾರಿ ಕೀಟ ಪ್ರಪಂಚ’ ಪ್ರವೇಶಿಸುತ್ತಿದ್ದಂತೆಯೇ ಬೃಹತ್ ಕೃತಕ ಇರುವೆ, ಮಿಡತೆ, ಜಿರಳೆ ಸ್ವಾಗತಿಸುತ್ತವೆ. ಸ್ಟಾಲ್ ಒಳ ಹೊಕ್ಕರೆ ವಿವಿಧ ಪ್ರಭೇದದ ದುಂಬಿಗಳು, ನೊಣ, ಜೇನು ಹುಳ, ತಿಗಣೆ, ಮಿಡತೆ, ಖಡ್ಗಮೃಗ, ಜಿಗಿಹುಳು, ಸರ್ಪಛಾಯಾ ಕೀಟ, ಹಸಿರು ಜಿಗಿಹುಳು ಹಾಗೂ ಪತಂಗಗಳು ಗಮನ ಸೆಳೆಯುತ್ತವೆ.

ADVERTISEMENT

ಕೀಟಗಳಿಂದ ಕಳೆನಾಶಕ, ಬಣ್ಣಗಳ ತಯಾರಿಕೆ, ಮಿನುಗುವ ಹುಳುಗಳ ಸರ, ಹುಳುಗಳಿಂದಲೇ ಸಾವಯವಗೊಬ್ಬರ ತಯಾರಿಕೆ ಕುರಿತು ಮಾಹಿತಿ ಒದಗಿಸಲಾಗುತ್ತಿದೆ. ಪರಾಗಸ್ಪರ್ಶಕಗಳು, ಪರಭಕ್ಷಕ ಕೀಟಗಳು, ಉಪಕಾರಿ ಕೀಟಗಳ ಮಾಹಿತಿಯ ಜೊತೆಗೆ ಹತ್ತಿ, ತೊಗರಿ ಬೆಳೆಗೆ ಕಾಡುವ ಗುಲಾಬಿ ಕಾಯಿ ಕೊರಕ, ಬಿಳಿ ನೋಣ, ಥ್ರಿಪ್ಸ್ ನುಶಿ, ಟೊಮೆಟೊ ಕಾಯಿಕೊರಕ, ಜಂತುಹುಳು ಹಾಗೂ ಬೆಳೆ ನಾಶ ಮಾಡುವ ಕೀಟಗಳ ಬಗ್ಗೆಯೂ ಸಂಶೋಧನಾ ವಿದ್ಯಾರ್ಥಿಗಳು ಸಾರ್ವಜನಿಕರಿಗೆ ತಿಳಿವಳಿಕೆ ನೀಡುತ್ತಿದ್ದಾರೆ.

ಕೀಟ ಪ್ರಪಂಚದಲ್ಲಿ ಜೇನು ನೊಣ, ಹಿಪ್ಪು ನೇರಳೆ ಹುಳು, ಗೆದ್ದಲ ಹುಳು, ಸಿಕಾಡೆ ಕೀಟ, ಇರುವೆ, ಸಿಂಹ ಸೇರಿ ಮೊದಲಾದವುಗಳ ಜೀವನ ಚಕ್ರ ಪ್ರದರ್ಶಿಸಲಾಗಿದೆ. ಕೀಟ ಎಂದರೇನು, ರೋಗ ಹರಡುವ ಮತ್ತು ಹರಡದ ಕೀಟಗಳ ವಿವರಣೆ ಹಾಕಲಾಗಿದ್ದು, ಹೆಸರಿಗೆ ತಕ್ಕಂತೆ ಕೀಟಗಳ ಪ್ರಪಂಚವೇ ಇಲ್ಲಿ ಕಾಣಬಹುದಾಗಿದೆ. 

‘ಜೀವ ಸಂಕುಲಕ್ಕೆ ಎಲ್ಲ ಹುಳುಗಳು ಮಾರಕವಲ್ಲ. ಉಪಕಾರಿ ಕೀಟಗಳೂ ನಮ್ಮ ಮಧ್ಯೆ ಇವೆ. ಎರೆಹುಳು ಮಾದರಿಯಲ್ಲಿ ಕೀಟಗಳಿಂದಲೂ ಗೊಬ್ಬರ ತಯಾರಿಸಬಹುದಾಗಿದೆ. ಬಣ್ಣಗಳ ಉತ್ಪಾದನೆಯೂ ಸಾಧ್ಯವಿದೆ. ಒಣಗಿರುವ ಹುಳಗಳಲ್ಲಿ ಪ್ರೋಟೀನ್ ಅಂಶ ಅಧಿಕವಾಗಿರುತ್ತದೆ. ಅವುಗಳ ಸೇವನೆ ದೇಹದ ಮೇಲೆ ಪರಿಣಾಮ ಬೀರುವುದಿಲ್ಲ’ ಎಂದು ಕೀಟಶಾಸ್ತ್ರ ವಿಭಾಗದ ಶ್ರೀನಿವಾಸ ಹಾಗೂ ಶ್ರಿವಾಣಿ ತಿಳಿಸಿದರು.

ರಾಯಚೂರಿನ ಕೃಷಿ ಮೇಳದಲ್ಲಿ  ‘ವಿಸ್ಮಯ ಕೀಟ ಪ್ರಪಂಚ’ ಮಳಿಗೆಯಲ್ಲಿ ಕೀಟಗಳ ಬಗ್ಗೆ ಕೀಟಶಾಸ್ತ್ರ ಸಂಶೋಧನಾ ವಿದ್ಯಾರ್ಥಿನಿಯು ಕಾಲೇಜು ವಿದ್ಯಾರ್ಥಿನಿಯರಿಗೆ ಕಿಟಗಳ ಬಗ್ಗೆ ಮಾಹಿತಿ ನೀಡಿದರು
‘ವಿಸ್ಮಯ ಕೀಟ ಪ್ರಪಂಚ’ ವಿಭಾಗದಲ್ಲಿ ಕಂಡುಬಂದ ಕೀಟಗಳಿಂದ ತಯಾರಿಸಿದ ವಿವಿಧ ಭಕ್ಷ್ಯಗಳು

ಭವಿಷ್ಯದ ಭಕ್ಷ್ಯಗಳು ಮಳಿಗೆಯಲ್ಲಿ ವಿಷಮುಕ್ತ ಕೀಟಗಳ ಆಹಾರ ಭಕ್ಷ್ಯಗಳನ್ನು ಇಡಲಾಗಿದೆ. ಖಡ್ಗಮೃಗ ಸೋಯಾ ಮಂಚೂರಿಯನ್ ಮಿಡತೆ ಕಾಜು ಫ್ರೈ ಕ್ರಿಕೆಟ್ ಕರ‍್ರಿ ಮ್ಯಾಗ್ಗಟ್ ನೂಡಲ್ಸ್ ಸಿಲ್ಕ್ ವಾರ್ಮ್ ಸೂಪ್ ಕ್ಯಾಬೇಜ್ ಸೋಲ್ಜರ್ ಫ್ರೈ ಕಾಕ್ರೋಚ್ ಚಿಲ್ಲಿ ಕುರಕಲು ಪ್ಯೂಪಾ ಸ್ಟಿಕ್ ಕಪ್ಪು ಸೈನಿಕ ನೊಣದ ಮಸಾಲಾ ರೇಷ್ಮೆ ಕೋಶದ ಸೂಪ್ ಬರ್ಗರ್ ಪನ್ನೀರ್ ಟಿಕ್ಕಾ ಸೇರಿ 20ಕ್ಕೂ ಹೆಚ್ಚು ಕೀಟ ಭಕ್ಷ್ಯಗಳು ಜನರನ್ನು ಬೆರಗುಗೊಳಿಸಿತು. ‘ಚೀನಾ ಉತ್ತರ ಕೊರಿಯಾ ಮಾತ್ರವಲ್ಲದೇ ಭಾರತದ ಒಡಿಶಾ ಮಹಾರಾಷ್ಟ್ರ ಹಾಗೂ ಆದಿವಾಸಿಗಳು ವಾಸಿಸುವ ಪ್ರದೇಶಗಳಲ್ಲಿ ಕೀಟಗಳ ಭಕ್ಷ್ಯ ಸೇವನೆ ಇದೆ. ಭವಿಷ್ಯದಲ್ಲಿ ಆಹಾರ ಉತ್ಪಾದನೆ ಕಡಿಮೆಯಾದರೆ ಕೀಟಗಳ ಭಕ್ಷ್ಯ ಮಹತ್ವ ಪಡೆದುಕೊಳ್ಳಲಿದೆ’ ಎಂದು ಕೃಷಿ ವಿಶ್ವವಿದ್ಯಾಲಯದ ಕೀಟ ಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಅಶ್ವಿನಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.