ADVERTISEMENT

ರಾಯಚೂರು: ₹109.10 ಕೋಟಿ ಅನುದಾನ ಮಂಜೂರು

ಕೃಷಿ, ಕುಡಿಯುವ ನೀರಿಗೆ ಸೌಲಭ್ಯ ಯಡಿವಾಳ ಏತ ನೀರಾವರಿ ಯೋಜನೆಗೆ ಅಸ್ತು

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 4:38 IST
Last Updated 13 ಸೆಪ್ಟೆಂಬರ್ 2025, 4:38 IST
ಎನ್.ಎಸ್.ಬೋಸರಾಜು
ಎನ್.ಎಸ್.ಬೋಸರಾಜು   

ಮಾನ್ವಿ: ತಾಲ್ಲೂಕಿನ ಯಡಿವಾಳ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದೆ.

ಯಡಿವಾಳ ಗ್ರಾಮದ ಬಳಿ ಏತ ನೀರಾವರಿ ಯೋಜನೆ ಜಾರಿ ಮಾಡಿ ತುಂಗಭದ್ರಾ ನದಿ ಹಾಗೂ ತುಂಗಭದ್ರಾ ಎಡದಂಡೆ ನಾಲೆಯ 76ನೇ ವಿತರಣಾ ಕಾಲುವೆಯ ಮೂಲಕ ಅಚ್ಚುಕಟ್ಟು ಪ್ರದೇಶದ 10 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಹಾಗೂ 4 ಕೆರೆಗಳನ್ನು ಭರ್ತಿ ಮಾಡುವ ಮೂಲಕ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತೀರ್ಮಾನಿಸಲಾಗಿದೆ.

ಜಲ ಸಂಪನ್ಮೂಲ ಇಲಾಖೆಯಿಂದ ₹109.10 ಕೋಟಿ ಮೊತ್ತದಲ್ಲಿ ಈ ಯೋಜನೆಯ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ. ಸಣ್ಣ ನೀರಾವರಿ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಮತ್ತು ಶಾಸಕ ಜಿ.ಹಂಪಯ್ಯ ನಾಯಕ ಹೆಚ್ಚಿನ ಮುತುವರ್ಜಿ ವಹಿಸಿ ಈ ಬೃಹತ್ ನೀರಾವರಿ ಯೋಜನೆಗೆ ಸರ್ಕಾರದ ಮಂಜೂರಾತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ತುಂಗಭದ್ರಾ ಎಡದಂಡೆ ನಾಲೆಯ 76ನೇ ವಿತರಣಾ ಕಾಲುವೆಯ ಕೊನೆಭಾಗ (ಟೇಲೆಂಡ್)
ವ್ಯಾಪ್ತಿಯ ಹಿರೇಕೊಟ್ನೆಕಲ್, ಅಮರೇಶ್ವರ ಕ್ಯಾಂಪ್, ಚಿಕ್ಕಕೊಟ್ನೇಕಲ್, ಉಮಳಿ ಹೊಸೂರು, ಚೀಕಲಪರ್ವಿ ಮತ್ತಿತರ ಗ್ರಾಮಗಳ ರೈತರು ಹಲವು ವರ್ಷಗಳಿಂದ ಕಾಲುವೆ ನೀರಿನ ಸಮಸ್ಯೆಯಿಂದ ಭತ್ತ, ಜೋಳ, ಹತ್ತಿ ಮತ್ತಿತರ ಬೆಳೆಗಳ ಹಾನಿ ಅನುಭವಿಸಿದ್ದಾರೆ.

ಪ್ರತಿ ವರ್ಷ ಈ ಗ್ರಾಮಗಳ ರೈತರು ಕಾಲುವೆ ನೀರಿಗಾಗಿ ಧರಣಿ, ಪ್ರತಿಭಟನೆ ನಡೆಸುವುದು ಸಾಮಾನ್ಯವಾಗಿದೆ. ಯಡಿವಾಳ ಏತ ನೀರಾವರಿ ಯೋಜನೆ ಮೂಲಕ ನೀರಾವರಿ ಸೌಲಭ್ಯ ಪಡೆಯುವ ಬಗ್ಗೆ ಸ್ಥಳೀಯ ರೈತರು ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

ಮಾನ್ವಿ ತಾಲ್ಲೂಕಿನ ಅಮರೇಶ್ವರ ಕ್ಯಾಂಪ್ ಸಮೀಪದ ತುಂಗಭದ್ರಾ ಎಡದಂಡೆ ನಾಲೆಯ 76ನೇ ವಿತರಣಾ ಕಾಲುವೆ
ಯಡಿವಾಳ ಏತ ನೀರಾವರಿ ಯೋಜನೆ ಅನುಷ್ಠಾನದಿಂದ 76ನೇ ವಿತರಣಾ ಕಾಲುವೆ ವ್ಯಾಪ್ತಿಯ ಟೇಲೆಂಡ್ ರೈತರಿಗೆ ಸಮರ್ಪಕ ನೀರಾವರಿ ಸೌಲಭ್ಯ ದೊರಕಲಿದೆ.
– ಎನ್.ಎಸ್.ಬೋಸರಾಜು ಸಣ್ಣ ನೀರಾವರಿ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ
76ನೇ ವಿತರಣಾ ಕಾಲುವೆ ವ್ಯಾಪ್ತಿಯ ಕೊನೆಭಾಗದಲ್ಲಿ ಕಾಲುವೆ ನೀರಿನ ಸಮಸ್ಯೆ ಹಲವು ವರ್ಷಗಳಿಂದ ಇದೆ. ಯಡಿವಾಳ ಏತ ನೀರಾವರಿ ಯೋಜನೆ ಕಾಮಗಾರಿಗೆ ಆದಷ್ಟು ಬೇಗ ಚಾಲನೆ ನೀಡಬೇಕು.
ಕೆ.ವೈ.ಬಸವರಾಜ ನಾಯಕ ಹಿರೇಕೊಟ್ನೆಕಲ್ ಜಿಲ್ಲಾ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

‘ಬ್ರಿಜ್ ಕಮ್ ಬ್ಯಾರೇಜ್ ಕಾಮಗಾರಿ ಆರಂಭಕ್ಕೆ ಪ್ರಯತ್ನ’

₹397 ಕೋಟಿ ವೆಚ್ಚದಲ್ಲಿ ಚೀಕಲಪರ್ವಿ ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಬ್ರಿಜ್ ಕಮ್ ಬ್ಯಾರೇಜ್ ಹಾಗೂ ಚಿಕ್ಕಮಂಚಾಲಿ ಬಳಿ ₹158 ಕೋಟಿ ವೆಚ್ಚದಲ್ಲಿ ಬ್ರಿಜ್ ಕಮ್ ಬ್ಯಾರೇಜ್ ನಿರ್ಮಾಣ ಕಾಮಗಾರಿಗಳಿಗೆ ಕಳೆದ ವರ್ಷ ಚಾಲನೆ ನೀಡಲಾಗಿತ್ತು. ಆದರೆ ಆಂಧ್ರಪ್ರದೇಶ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಈ ಎರಡೂ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ.

ಈ ಕುರಿತು ಶುಕ್ರವಾರ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಸಚಿವ ಎನ್.ಎಸ್.ಬೋಸರಾಜು‘ ಚೀಕಲಪರ್ವಿ ಹಾಗೂ ಚಿಕ್ಕ ಮಂಚಾಲಿ ಬಳಿ ಬ್ರಿಜ್ ಕಮ್ ಬ್ಯಾರೇಜ್‌ಗಳ ನಿರ್ಮಾಣ ಕಾಮಗಾರಿಗೆ ತೆಲಂಗಾಣ ರಾಜ್ಯ ಸರ್ಕಾರ ಸಮ್ಮತಿಸಿದೆ. ಆಂಧ್ರಪ್ರದೇಶದ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಸರ್ಕಾರಗಳ ಮಟ್ಟದಲ್ಲಿ ಚರ್ಚೆ ಪ್ರಯತ್ನಗಳು ಮುಂದುವರಿದಿವೆ. ತಜ್ಞರ ಪರಿಶೀಲನಾ ವರದಿ ಆಧರಿಸಿ ಆಂಧ್ರಪ್ರದೇಶದ ಕರ್ನೂಲ್ ಹಾಗೂ ನಂದ್ಯಾಲ ಲೋಕಸಭಾ ಸದಸ್ಯರು ಈಗಾಗಲೇ ಸದರಿ ಕಾಮಗಾರಿಗಳಿಗೆ ಸಹಮತ ವ್ಯಕ್ತಪಡಿಸಿ ಅಲ್ಲಿನ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಶೀಘ್ರದಲ್ಲಿ ಆಂಧ್ರಪ್ರದೇಶ ಸರ್ಕಾರದಿಂದ ಒಪ್ಪಿಗೆ ದೊರೆಯುವ ಬಗ್ಗೆ ವಿಶ್ಚಾಸ ಇದೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.